ಪುತ್ತೂರು:ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕೆ ಕೇವಲ ಮೂರು ದಿನಗಳು ಬಾಕಿಯಿರುವುದಾದರೂ ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಘೋಷಣೆಯಾಗಿಲ್ಲ. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಏ.9ರಂದು ಪುತ್ತೂರುನಲ್ಲಿ ಪಕ್ಷದ ಪ್ರಮುಖರ ಚುನಾವಣಾ ನಿರ್ವಹಣೆ ಸಭೆ ನಡೆದಿದೆ. ಪಕ್ಷದ ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯನ್ನಾಗಿ ನೀಡಿದರೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಚುನಾವಣೆಗೆ ಸಂಬಂಧಿಸಿ ಏ.13ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆಯಾದರೂ ಪುತ್ತೂರು,ಸುಳ್ಯ, ಬಂಟ್ವಾಳ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರಕ್ಕೂ ಬಿಜೆಪಿ ಅಭ್ಯರ್ಥಿಗಳ ಹೆಸರು ಇನ್ನೂ ಘೋಷಣೆಯಾಗಿಲ್ಲ.ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ, ಆಮ್ ಆದ್ಮಿ ಪಕ್ಷಗಳು ಈಗಾಗಲೇ ಹೆಚ್ಚಿನ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿ, ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಾಗಲು ಹಲವು ಮಂದಿ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದೇ ಹೇಳುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾರಿ ಹೊಸ ಪ್ರಯತ್ನವಾಗಿ ಈಗಾಗಲೇ ಪಕ್ಷದ ಪ್ರಮುಖ ಪದಾಧಿಕಾರಿಗಳಿಂದ ಆಂತರಿಕ ಅಭಿಪ್ರಾಯ ಸಂಗ್ರಹಣೆಗಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಮತದಾನದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಮತದಾರ ಪ್ರಮುಖನಿಗೆ ತಲಾ ಮೂರು ಮಂದಿಯ ಹೆಸರನ್ನು ಸೂಚಿಸಲು ಅವಕಾಶ ಕಲ್ಪಿಸಲಾಗಿತ್ತು. ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆಯಲ್ಲಿ ನೀಡಿರುವ ಹೆಸರುಗಳ ಮುಚ್ಚಿದ ಲಕೋಟೆಗಳನ್ನು ಈಗಾಗಲೇ ಜಿಲ್ಲಾ ಸಮಿತಿ ಮೂಲಕ ರಾಜ್ಯ ಸಮಿತಿ ಪದಾಧಿಕಾರಿಗಳು ಕೇಂದ್ರ ಸಮಿತಿಗೆ ಕಳುಹಿಸಿದ್ದು ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ನಲ್ಲಿ ಇಂದು-ನಾಳೆ ಅಂತಿಮವಾಗಲಿದೆ.
ಜಿಲ್ಲಾಧ್ಯಕ್ಷರಿಂದ ಚುನಾವಣಾ ನಿರ್ವಹಣೆ ಸಭೆ: ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ಸವಾಲಾಗಿರುವ ನಡುವೆಯೇ ಪುತ್ತೂರು, ಸುಳ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಏ.6ರಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪುತ್ತೂರು, ಸುಳ್ಯದ ಪಕ್ಷದ ಪ್ರಮುಖರ ಸಭೆ ನಡೆದಿದೆ. ಇದೀಗ,ಏ.9ರಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರ ನೇತೃತ್ವದಲ್ಲಿ ಪುತ್ತೂರುನಲ್ಲಿ ಪಕ್ಷದ ಚುನಾವಣಾ ನಿರ್ವಹಣೆ ಸಭೆ ನಡೆದಿದೆ.
ಸಾಲ್ಮರ ಕೊಟೇಚಾ ಹಾಲ್ನಲ್ಲಿ ಪಕ್ಷದ ಪ್ರಮುಖರ ಸಭೆ ನಡೆದಿದ್ದು, ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆಯಾದರೂ, ಈಗಾಗಲೇ ಈ ವಿಚಾರದಲ್ಲಿ ದೆಹಲಿ ಹೈಕಮಾಂಡ್ಗೆ ವರದಿ ಹೋಗಿದ್ದು, ಅಲ್ಲಿನ ನಿರ್ಣಯವೇ ಅಂತಿಮವಾಗಲಿದೆ. ಪಕ್ಷ ಯಾರಿಗೇ ಅವಕಾಶ ನೀಡಿದರೂ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗಾಗಿ ಪ್ರಯತ್ನ ನಡೆಸಬೇಕು ಎಂದು ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಅವರು ಸಭೆಯಲ್ಲಿದ್ದ ಪಕ್ಷದ ಪ್ರಮುಖರಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಶಾಸಕ ಸಂಜೀವ ಮಠಂದೂರು ಸಹಿತ ಪುತ್ತೂರಿನ ಚುನಾವಣಾ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ ಪಕ್ಷದ ಪ್ರಮುಖರು ಈ ಸಭೆಯಲ್ಲಿ ಉಪಸ್ಥಿತರಿದ್ದರು.