ಪೆರಾಬೆ: ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ತೀರಾ ಗ್ರಾಮೀಣ ಪ್ರದೇಶವಾಗಿರುವ ಕುಂತೂರು, ಬೇಲ್ಪಾಡಿ, ಕೋಚಕಟ್ಟೆ ಪ್ರದೇಶದಲ್ಲಿರುವ ಅಶಕ್ತ ಕುಟುಂಬಗಳಿಗೆ ಸುಮಾರು 3 ಲಕ್ಷ ರೂ., ವೆಚ್ಚದಲ್ಲಿ ಆಹಾರ ಕಿಟ್, ನಮಾಝ್ ಜುಬ್ಬ, ಮಕ್ಕನ, ಮುಸಲ್ಲ ಮೊದಲಾದ ವಸ್ತ್ರ ದಾನದೊಂದಿಗೆ ಉಪವಾಸ ಬಿಡಿಸುವ ಇಫ್ತಾರ್ ಕೂಟ ಸಮಾರಂಭ ಎ.9ರಂದು ಕೋಚಕಟ್ಟೆ ಮದ್ರಸ ಸಭಾಂಗಣದಲ್ಲಿ ಜರಗಿತು.
ಸುಮಾರು 50 ಫಲಾನುಭವಿಗಳಿಗೆ ಆಹಾರ ಕಿಟ್ ಮತ್ತು 120 ಅರ್ಹ ಫಲಾನುಭವಿಗಳಿಗೆ ನಮಾಝ್ ಜುಬ್ಬ, ಮಕ್ಕನ, ಮುಸಲ್ಲ ಮೊದಲಾದ ವಸ್ತ್ರಗಳನ್ನು ನೀಡಲಾಯಿತು. ಎಂ. ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಸದಸ್ಯರುಗಳು ಸೇರಿಕೊಂಡು ಕಳೆದ 9 ವರ್ಷಗಳಿಂದ ಜಿಲ್ಲೆಯಾದ್ಯಂತ ಇರುವ ತೀರಾ ಗ್ರಾಮೀಣ ಪ್ರದೇಶವನ್ನು ಆಯ್ಕೆ ಮಾಡಿ ಈ ರೀತಿಯ ಕಾರ‍್ಯಕ್ರಮವನ್ನು ಹಾಕಿಕೊಂಡಿದೆ. ಜೊತೆಗೆ ಮಂಗಳೂರಿನಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇರುವ ರೋಗಿಗಳ ಜೊತೆ ಇರುವ ವ್ಯಕ್ತಿಗೆ ರಾತ್ರಿ ಊಟೋಪಚಾರದ ವ್ಯವಸ್ಥೆ ಮಾಡುವ ಯೋಜನೆ ನಡೆಯುತ್ತಿದ್ದು, ಇದೆಲ್ಲವನ್ನೂ ದಾನಿಗಳ ಸಹಕಾರ ಪಡೆದುಕೊಂಡು ನಡೆಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಡುವ ಕೆಲಸ ನಡೆಯುತ್ತಿದ್ದು, ಪ್ರತಿಯೋರ್ವರೂ ಶಿಕ್ಷಿತರಾದಾಗ ಜನರಲ್ಲಿ ಕಾಡುವ ಈ ರೀತಿಯ ಸಂಕಷ್ಠ ದೂರವಾಗಲು ಸಾಧ್ಯ ಎಂದರು.
ತರಬೇತುದಾರ, ಸಂಘಟಕ ರಫೀಕ್ ಮಾಸ್ಟರ್ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ಉಪವಾಸ ಎನ್ನುವುದು ಹಸಿವು, ದಾಹ ಪರೀಕ್ಷೆಯ ತರಬೇತಿ, ಒಂದು ತಿಂಗಳ
ಉಪವಾಸ ಬಡವರಲ್ಲಿ ಇರುವ ಹಸಿವಿನ ಬಗ್ಗೆ ಅರಿವು ಆಗುವುದರ ಜೊತೆಗೆ ಆರೋಗ್ಯ ಸುಧಾರಣೆಯೂ ಸಾಧ್ಯವಾಗುತ್ತದೆ. ಇದರ ಜೊತೆಗೆ ದಾನ-ಧರ್ಮದ ಮೂಲಕ
ಮಾನವೀಯತೆಯನ್ನು ಪ್ರತಿಪಾದಿಸಲು ಸಾಧ್ಯವಿದೆ ಎಂದರು.
ಎಂ. ಫ್ರೆಂಡ್ಸ್ ಉಪಾಧ್ಯಕ್ಷ ಸುಜಾಹ್ ಮಹಮ್ಮದ್ ಮಾತನಾಡಿದರು. ಮದ್ರಸದ ಸದರ್ ಮುಅಲ್ಲಿಂ ಫಾರೂಕ್ ದಾರಿಮಿ ದುವಾಃ ನೆರವೇರಿಸಿದರು. ಸಮಾರಂಭದಲ್ಲಿ
ಕುಂತೂರು-ಬೇಲ್ಪಾಡಿ ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ಮದ್ರಸ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಪದಾಧಿಕಾರಿಗಳಾದ ಅಬ್ಬಾಸ್ ಕುಂತೂರು, ಎಂ. ಫ್ರೆಂಡ್ಸ್
ಪದಾಧಿಕಾರಿಗಳಾದ ಡಾ. ಮುಬಶ್ಶಿರ್, ಮಹಮ್ಮದ್ ಟಿ.ಕೆ., ಅಬ್ಬಾಸ್ ಹಾಜಿ ಉಕ್ಕುಡ, ಹನೀಫ್ ಕುದ್ದಪದವು, ಅಬೂಬಕ್ಕರ್ ಪುತ್ತ, ಇಸ್ಮಾಯಿಲ್ ಕೋಲ್ಪೆ, ಉಬೈದ್ ಗಂಡಿಬಾಗಿಲು, ಅನ್ವರ್ ಹುಸೇನ್, ಅನ್ಸಾರ್ ಬೆಳ್ಯಾರೆ ಉಪಸ್ಥಿತರಿದ್ದರು. ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ಕಾರ‍್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ, ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ‍್ಯಕ್ರಮ ನಿರೂಪಿಸಿದರು.