ಶಾಸಕರ ಮೇಲಿನ ಆರೋಪ ಸಮಗ್ರ, ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಆಗ್ರಹ

0

ಪುತ್ತೂರು: ಶಾಸಕರು ಕೇವಲ ಬಿಜೆಪಿ ಸೊತ್ತಲ್ಲ. ಅವರು ಪುತ್ತೂರಿನ ಜನತೆಯ ಸೊತ್ತು. ಶಾಸಕರ ಮೇಲಿನ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೃತ್ಯ ಬೆಳಕಿಗೆ ಬಂದು ಹಲವು ದಿನಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ತನಿಖೆ ಆಗಬಾರದೆಂಬುದೇ ಬಿಜೆಪಿ ಹಿತಾಸಕ್ತಿಯಾಗಿದೆ. ಪುತ್ತೂರಿನ ಗೌರವದ ಪ್ರಶ್ನೆಯಾಗಿರುವ ಹಿನ್ನಲೆಯಲ್ಲಿ ಪೊಲೀಸರು ಘಟನೆಯನ್ನು ಯಾವುದೇ ಒತ್ತಡವಿಲ್ಲದೆ ನಿಷ್ಪಕ್ಷಪಾತದಿಂದ ತನಿಖೆಯನ್ನು ನಡೆಸಬೇಕು ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಆಗ್ರಹಿಸಿದರು.


ಎ.10ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಅಶ್ಲೀಲ ಚಿತ್ರ ವೈರಲ್ ಆಗಿರುವುದರ ಹಿಂದೆ ಬಿಜೆಪಿಯವರ ಕೈವಾಡ ಇರುವುದು ಸ್ಪಷ್ಟವಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆಯೇ ಈ ವಿಚಾರ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿತ್ತು. ಕೆ.ಡಿ.ಪಿ. ಸದಸ್ಯರೊಬ್ಬರ ವೈರಲ್ ಆದ ಆಡಿಯೋದಲ್ಲಿಯೂ ಸಿಡಿ ವಿಚಾರ ಪ್ರಸ್ತಾಪವಾಗಿದ್ದು, ಕಾಂಗ್ರೆಸ್ ಈ ವಿಚಾರವನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸುವ ಕಾರ್ಯ ಮಾಡಿತ್ತು. ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂದು ಮೊದಲೇ ನಿಶ್ಚಯವಾಗಿತ್ತು. ಒಕ್ಕಲಿಗ ಸಮುದಾಯದ ನಿಯೋಗವೊಂದು ಆದಿಚುಂಚನಗಿರಿ ಸ್ವಾಮೀಜಿಯ ಬಳಿಗೆ ತೆರಳಿದ ಕೆಲವೇ ಗಂಟೆಯಲ್ಲಿ ಚಿತ್ರ ವೈರಲ್ ಆಗಿರುವುದರಿಂದ ಅವರಿಗೆ ಟಿಕೆಟ್ ತಪ್ಪಿಸುವ ಉದ್ದೇಶದಿಂದಲೇ ಈ ಕೃತ್ಯ ಮಾಡಲಾಗಿದೆ ಎಂದು ಸ್ಪಷ್ಟವಾಗುತ್ತದೆ. ಶಾಸಕರ ಫೋಟೋ ಹಾಗೂ ಕೆಡಿಪಿ ಸದಸ್ಯರ ಆಡಿಯೋ ವೈರಲ್ ಆಗಿರುವದರ ಬಗ್ಗೆ ಬಿಜೆಪಿ ಮೌನವಾಗಿದೆ. ಎಲ್ಲಾ ವಿಚಾರಗಳಲ್ಲಿಯೂ ಸಮರ್ಥನೆ ಮಾಡುತ್ತಿದ್ದರವರು ಎಲ್ಲಿಗೆ ಹೋಗಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ರೀತಿ ಫೋಟೋ ಎಡಿಟ್ ಮಾಡಲಾಗಿದೆ. ನಮ್ಮವರೇ, ರಾಜಕೀಯ ವಿರೋಧಿಗಳು ಈ ರೀತಿ ಮಾಡಿದ್ದಾರೆ ಎಂದು ಶಾಸಕರು ಪಕ್ಷದ ಕಡೆಗೆ ಬೆರಳು ತೋರಿಸಿದ್ದಾರೆಯೇ ಹೊರತು ವಿಪಕ್ಷಗಳ ಕಡೆಗೆ ಬೆರಳುತೋರಿಸಿಲ್ಲ ಎಂದು ತಿಳಿಸಿದರು.


೧೦ ವರ್ಷದ ಹಿಂದೆ ರೇಣುಕಾಚಾರ್ಯರವರಿಂದ ಪ್ರಾರಂಭವಾದ ಪರಂಪರೆ, ನಂತರ ಹಾಲಪ್ಪ, ಜಾರಕಿಹೋಳಿ, ಇದೀಗ ಪುತ್ತೂರಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ನೋಡುವಾಗ ಜನರ ಪ್ರತಿನಿಧಿಗಳಾಗಿ ಕಾಮುಕ ತನವನ್ನು ತೋರಿಸಲು ಯಾವ ನಾಚಿಕೆಯೂ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿಯವರಿಗೆ ಅಂಟುರೋಗ. ರೇಣುಕಾಚಾರ್ಯರಿಂದ ಪ್ರಾರಂಭವಾದ ರೋಗ ಕೊನೆಗೆ ಪುತ್ತೂರಿಗೂ ಬಂದಿದೆ. ಬಿಜೆಪಿಯವರು ರೋಗ ಪೀಡಿತರಾಗಿದ್ದಾರೆ. ಸ್ತ್ರೀಯರನ್ನು ಮಾತೆಯರೆಂದು ವೇದಿಕೆಯಲ್ಲಿ ಹೇಳುವ ಬಿಜೆಪಿಯವರು ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರನ್ನು ದುರ್ಬಳಕೆ ಮಾಡುವ ಕಾರ್ಯ ಜನಪ್ರತಿನಿಧಿಗಳಿಂದ ನಡೆಯುತ್ತಿದೆ. ನಕಲಿ ಹಿಂದುತ್ವದ ಮೂಲಕ ಅಧಿಕಾರ ಗಳಿಸಿ, ಅವ್ಯವಹಾರಗಳ ಮೂಲಕ ಹಣವನ್ನು ಸಂಪಾಧಿಸಿ ಮಜಾ ಮಾಡುವ ಕಾರ್ಯವನ್ನು ಬಿಜೆಪಿಯ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಮೇಲಿನ ಆಪಾದನೆ ಈಗ ಸತ್ಯವಾಗಿದೆ. ಜನಪ್ರತಿನಿಧಿಗಳಾದ ಉದ್ದೇಶವನ್ನು ಮರೆತು, ಮಜಾ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳ ಕುಂಟಿತಕ್ಕೆ ಕಾರಣವಾಗುತ್ತಿದ್ದಾರೆ.
ಈಗ ಬಂದಿರುವುದು ಚಿತ್ರ ಕೇವಲ ತುಣುಕಾಗಿದ್ದು, ಮುಖ್ಯ ಭಾಗ ಇನ್ನಷ್ಟೇ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರ ಸತ್ಯವಾಗಿದ್ದರೂ, ಸುಳ್ಳಾಗಿದ್ದರೂ ಬಿಜೆಪಿಯ ಬಣ್ಣ ಬಯಲು ಮಾಡಿದೆ. ಘಟನೆ ಸತ್ಯವಾಗಿದ್ದರೆ ಶಾಸಕರು, ಸುಳ್ಳಾಗಿದ್ದಾರೆ ಬಿಜೆಪಿ ಬೆಲೆ ತೆರಬೇಕಾಗುತ್ತದೆ. ಪ್ರತೀ ಬಾರಿ ಶಾಸಕರನ್ನು ಸಮರ್ಥಿಸುತ್ತಿದ್ದ ಬಿಜೆಪಿಯವರು, ಈಗ ಮೌನವಾಗಿರುವುದು ನೋಡಿದರೆ ಅವರೆಲ್ಲರೂ ಈ ಕೃತ್ಯದಲ್ಲಿ ಭಾಗಿಯಾರುವಂತೆ ಕಾಣಿಸುತ್ತಿದೆ. ಸ್ತ್ರೀಯ ಮಾನ ಖಂಡನೆ ಮಾಡುವ ಕಾರ್ಯವನ್ನು ಮಾಡಿರುವುದು ಮಹಿಳೆಯರ ಮೇಲೆ ಗೌರವವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.


ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್, ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here