ರಾಮಕುಂಜ ಆ.ಮಾ.ಶಾಲೆಯಲ್ಲಿ ಬೇಸಿಗೆ ಶಿಬಿರ ಸಮಾರೋಪ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ನಡೆದ ಬೇಸಿಗೆ ಶಿಬಿರ “ಚಿಣ್ಣರ ಮೇಳ 2022-23” ಇದರ ಸಮಾರೋಪ ಸಮಾರಂಭ ಎ.8ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಬೇಸಿಗೆ ರಜಾ ದಿನಗಳಲ್ಲಿ ಚಟುವಟಿಕೆಗಳ ಮೂಲಕ ಜೀವನ ಮೌಲ್ಯಗಳನ್ನು ರೂಪಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿ ಎಂದರು.

ಮುಖ್ಯ ಅತಿಥಿಯಾಗಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪದ್ಮಪ್ಪ ಗೌಡ ಅವರು ವಿದ್ಯಾರ್ಥಿಗಳು ಶಿಬಿರದಲ್ಲಿ ರಚಿಸಿದ ಚಿತ್ರಗಳು, ಕ್ರಾಫ್ಟ್ ಹಾಗೂ ನೃತ್ಯಗಳನ್ನು ಆನಂದಿಸಿ, ಗುಣಗಾನ ಮಾಡಿದರು. ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಮೌಲ್ಯಗಳ ಬಗ್ಗೆ ತಿಳಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪದ್ಮಪ್ಪ ಗೌಡ ಅವರು ಹೇಳಿದರು.

ಆಲಂಕಾರು ವಲಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸತೀಶ್ ಆಚಾರ್ಯ ಮಾಣಿ, ಕಾವ್ಯ ಕೆ.ಟಿ. ಅವರು ಶಿಬಿರದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ರಮೇಶ್ ರೈ ಆರ್.ಬಿ, ತಾಂತ್ರಿಕ ಸಲಹೆಗಾರರಾದ ಜಯೇಂದ್ರ ಬಿ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು. ಎನ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ವಂದಿಸಿದರು. ಸಹಶಿಕ್ಷಕ ವಸಂತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿದವು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here