ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸಂತ ಫಿಲೋಮಿನಾ ಕಾಲೇಜು ಇದರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಬಡಗನ್ನೂರು ಪಟ್ಟೆ ವಿದ್ಯಾಸಂಸ್ಥೆಯಲ್ಲಿ ಎ.9ರಂದು ನಡೆಯಿತು.
ಪಟ್ಟೆ ವಿದ್ಯಾಸಂಸ್ಥೆಯ ಸಂಚಾಲಕ ಪಿ. ನಾರಾಯಣ ಭಟ್ ದೀಪ ಬೆಳಗಿಸಿ ಶುಭ ಹಾರೈಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೊರವರು “ಎನ್ ಎಸ್ ಎಸ್ ಶಿಬಿರಗಳು ಸಮಾಜ ಹಾಗೂ
ವಿದ್ಯಾರ್ಥಿಗಳನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪರಿಪಾಲನೆ ಹಾಗೂ ಜವಾಬ್ದಾರಿಗಳನ್ನು ಬೆಳೆಸುವಲ್ಲಿ ಎನ್ ಎಸ್ ಎಸ್ ಶಿಬಿರಗಳು ಸಹಕಾರಿಯಾಗಿವೆ. ನದಿಗಳು ಹೇಗೆ ಸಮುದ್ರದಲ್ಲಿ ಒಂದಾಗುತ್ತವೆಯೋ ಅದೇ ರೀತಿ ವಿದ್ಯಾರ್ಥಿಗಳು ಸಮಾಜದೊಂದಿಗೆ ಬೆರೆತು ಒಂದಾಗಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ವೇಣುಗೋಪಾಲ ಭಟ್ ಪಟ್ಟೆ, ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್ ಆರ್,
ಪ್ರತಿಭಾ ಪ್ರೌಢಶಾಲೆ ಪಟ್ಟೆಯ ಮುಖ್ಯಗುರುಗಳಾದ ಸುಮನಾ ಬಿ ಹಾಗೂ ಶ್ರೀಕೃಷ್ಣ ಪ್ರಾಥಮಿಕ ಶಾಲೆಯ ಶಾಲಾಭಿವೃದ‍್ಧಿ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ಗೌಡ ಮೋಡಿಕೆ ಸಂದರ್ಭೋಚಿತವಾಗಿ ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು.ಶಿಬಿರಾಧಿಕಾರಿಯಾದ ಪುಷ್ಪಾ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಅಧ್ಯಕ್ಷರು ಮತ್ತು ಸದಸ್ಯರು, ಶ್ರೀಕೃಷ್ಣ ಯುವಕ ಮಂಡಲ, ಪಟ್ಟೆ, ಪಟ್ಟೆ ಶಾಲೆಯ ಹಿರಿಯ ವಿದ್ಯಾರ್ಥಿಸಂಘದ ಸದಸ್ಯರು, ವಾಲಿ ಫ್ರೆಂಡ್ಸ್ ಕ್ಲಬ್ ಪಟ್ಟೆ ಇದರ ಸದಸ್ಯರು ಹಾಗೂ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಕಾರ್ಯಕ್ರದಲ್ಲಿ ಭಾಗವಹಿಸಿದರು.
ಶಿಬಿರಾರ್ಥಿಗಳಾದ ಚೈತ್ರ ಮತ್ತು ಬಳಗ ಪ್ರಾರ್ಥಿಸಿದರು. ಶಿಬಿರಾಧಿಕಾರಿ ವಾಸುದೇವ ಎನ್ ಸ್ವಾಗತಿಸಿದರು. ಶಿಬಿರಾರ್ಥಿ ರಾಶಿ ರೈ ವಂದಿಸಿದರು. ದಿನಕರ, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರವಿಭಾಗ ಇವರು ಕಾರ್ಯಕ್ರಮ ನಿರೂಪಿಸಿದರು.
ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ “ಯುವ ಶಕ್ತಿ ರಾಷ್ಟ್ರ ಶಕ್ತಿ” ಎಂಬ ಘೋಷಣೆಯೊಂದಿಗೆ ಸದರಿ ಶಿಬಿರವು ದಿನಾಂಕ 09-04-2023 ರಿಂದ 15-04-2023ರವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಪ್ರತಿದಿನ ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಶಿಬಿರಾರ್ಥಿಗಳು ಮತ್ತು ಸ್ಥಳೀಯರ
ಪಾಲ್ಗೊಳ್ಳುವಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.