ಪುತ್ತೂರು: ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತವಾಗಿ ಈ ಅವಕಾಶ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಗುತ್ತದೆ ಎನ್ನುವುದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಹೇಳಿದ್ದಾರೆ.
ಎ.12ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸುದ್ದಿ ಚಾನೆಲ್ ಜೊತೆಗೆ ಮಾತನಾಡಿದ ಆಶಾ ತಿಮ್ಮಪ್ಪ ಗೌಡ ಅವರು, ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನನಗೆ ನೀಡಿದ್ದರು. ಜಿಲ್ಲಾ ಪಂಚಾಯತ್, ನಗರ ಪಂಚಾಯತ್ ಅಭ್ಯರ್ಥಿಯಾಗಿ ಗೆದ್ದು ಕೆಲಸ ಮಾಡಿದ್ದೇನೆ. ನನ್ನ ಕೆಲಸಗಳನ್ನು ಮೆಚ್ಚಿ ಕಾರ್ಯಕರ್ತರ ಮುಖಾಂತರ ಈ ಅವಕಾಶ ಸಿಕ್ಕಿದೆ ಎನ್ನುವುದು ನನ್ನ ಅಭಿಪ್ರಾಯ. ಬಿಜೆಪಿ ಮತ್ತು ಪರಿವಾರ ಸಂಘಟನೆಯ ಹಿರಿಯರಲ್ಲಿ ಏನು ಕಲ್ಪನೆ ಇತ್ತೋ ಗೊತ್ತಿಲ್ಲ, ಅನಿರೀಕ್ಷಿತವಾಗಿ ಈ ಅವಕಾಶ ಸಿಕ್ಕಿದೆ. ಇದು ಮಹಾಲಿಂಗೇಶ್ವರ ದೇವರ ದಯೆ ಮತ್ತು ದೈವ ದೇವರ ದಯೆ. ಈ ಅವಕಾಶವನ್ನು ಬಿಜೆಪಿ ಕಾರ್ಯಕರ್ತರು ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ನಾನೊಬ್ಬಳು ಸಣ್ಣ ಕಾರ್ಯಕರ್ತೆ. ಕೆಲಸ ಮಾಡಿರಬಹುದು, ಆದರೆ ತುಂಬ ಸಾಮಾನ್ಯ ಕಾರ್ಯಕರ್ತೆಗೂ ಬಿಜೆಪಿಯಲ್ಲಿ ಸ್ಥಾನ ಕೊಡುತ್ತಾರೆ ಎನ್ನುವುದನ್ನು ಈ ಮೂಲಕ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.
ನಾನು ನಾಲ್ಕು ಬಾರಿ ಜನಪ್ರತಿನಿಧಿಯಾಗಿ ಆರಿಸಿ ಬಂದು ಕೆಲಸ ಮಾಡಿದ್ದೇನೆ. ಸುಳ್ಯದಲ್ಲಿ ನಗರ ಪಂಚಾಯತ್ ಅಧ್ಯಕ್ಷೆಯಾಗಿ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ೨೦ ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಹಿಂದಿನ ಜಿಲ್ಲಾ ಪಂಚಾಯತ್ ಸದಸ್ಯತ್ವದ ಅವಧಿಯಲ್ಲಿ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ ಈ ಅನುಭವವನ್ನು ಪರಿಗಣಿಸಿ ಅವಕಾಶ ನೀಡಿರಬಹುದು ಎಂದು ಭಾವಿಸಿದ್ದೇನೆ. ಹಿಂದಿನ ಶಾಸಕರು ಮಾಡಿರುವ ಕೆಲಸವನ್ನು ಮುಂದಿಟ್ಟುಕೊಂಡು, ಕ್ಷೇತ್ರದಲ್ಲಿ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಕಾರ್ಯಕರ್ತರಿಗೆ ಸ್ಪಂದಿಸುವ ಮೂಲಕ ಬಿಜೆಪಿ ಮತ್ತು ಪರಿವಾರ ಸಂಘಟನೆಯನ್ನು ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಆಶಾ ತಿಮ್ಮಪ್ಪ ಗೌಡ ಹೇಳಿದರು.
ಪುತ್ತೂರಿಗೆ ಯಾವ ಸಂದರ್ಭದಲ್ಲಿ ಬಂದರೂ ಪಕ್ಷದ ಕಚೇರಿಗೆ ಭೇಟಿ ನೀಡಿಯೇ ನೀಡುತ್ತೇನೆ. ಪುತ್ತೂರು ಕ್ಷೇತ್ರದಲ್ಲಿ ಹಲವು ಕಾರ್ಯಕರ್ತರ ಪರಿಚಯ ನನಗಿದೆ. ನನ್ನನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡುತ್ತಾರೆನ್ನುವ ವಿಶ್ವಾಸವಿದೆ. ಇಂದು ಕುಟುಂಬ ಸಮೇತವಾಗಿ ಪುತ್ತೂರಿಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಬಳಿಕ ಪುತ್ತೂರು ಬಿಜೆಪಿ ಆಗಮಿಸಿದಾಗ ಪಕ್ಷದ ಮುಖಂಡರು, ಕಾರ್ಯಕರ್ತರೆಲ್ಲರೂ ಉಪಸ್ಥಿತರಿದ್ದು ಉತ್ತಮವಾಗಿ ನನ್ನನ್ನು ಸ್ವಾಗತಿಸಿದ್ದಾರೆ ಎಂದರು.
ನಾನು ಸಂಜೀವ ಮಠಂದೂರು ಅವರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದವಳು. ಜನಪ್ರತಿನಿಧಿಯಾಗಿದ್ದಾಗಲು, ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಅವರ ಜೊತೆ ಒಡನಾಟದಲ್ಲಿದ್ದೆ. ಇವತ್ತು ಕೂಡ ಇದ್ದೇನೆ. ಅವರು ಏನೆಂಬುದು ನನಗೆ ಗೊತ್ತಿದೆ. ಮೊನ್ನೆಯವರೆಗೂ ಅವರಿಗೇ ಅವಕಾಶ ಸಿಗಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಟಿಕೆಟ್ ಘೋಷಣೆಯಾಗುವವರೆಗೂ ಅವರ ಹೆಸರು ಬರುತ್ತದೆನ್ನುವ ನಿರೀಕ್ಷೆಯಿತ್ತು. ಇದು ಪಾರ್ಟಿಯ ನಿರ್ಧಾರವಾಗಿರುವುದರಿಂದ ಇದನ್ನು ಒಪ್ಪಿಕೊಳ್ಳಲೇಬೇಕು. ಪಾರ್ಟಿ ಯಾವ ಯೋಚನೆ ಇಟ್ಟು ನನಗೆ ಅವಕಾಶ ಕೊಟ್ಟಿದೆಯೋ ಗೊತ್ತಿಲ್ಲ. ಅದನ್ನು ಒಪ್ಪಿಕೊಳ್ಳುವುದು ನನ್ನ ಧರ್ಮ. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಅದರ ಋಣವನ್ನು ತೀರಿಸಲು ಕೊಟ್ಟ ಅವಕಾಶ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಪುತ್ತೂರಲ್ಲಿ ಬಿಜೆಪಿಗೆ ವಾತಾವರಣ ಚೆನ್ನಾಗಿದೆ. ನನಗೆ ನಮ್ಮ ಪಕ್ಷದವರು ಅಲ್ಲದೆ ಇತರ ಪಕ್ಷಗಳ ಹಿತೈಷಿಗಳು ಕೂಡ ಕರೆ ಮಾಡಿದ್ದಾರೆ. ಧೈರ್ಯ ತುಂಬಿದ್ದಾರೆ, ಅಭಿನಂದಿಸಿದ್ದಾರೆ. ಅಧಿಕಾರಿ ವರ್ಗದವರು ಕೂಡ ವಿಶ್ವಾಸವಿಟ್ಟಿದ್ದಾರೆ. ಇಲ್ಲಿನ ಹಿರಿಯರು, ಕಾರ್ಯಕರ್ತರು, ಸಂಘಪರಿವಾರದವರು ಸೇರಿಕೊಂಡು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿಕೊಡುತ್ತಾರೆನ್ನುವ ವಿಶ್ವಾಸವಿದೆ ಎಂದರು.
ನಾನು ಹೆಚ್ಚಾಗಿ ಬಸ್ಸಿನಲ್ಲೇ ಓಡಾಡುವಳು. ಇಲ್ಲಿ ನಮಗೆ ಕಾರ್ಯಕರ್ತರು ಹೆಚ್ಚು ಸಿಗುತ್ತಾರೆ. ಪರಿಸ್ಥಿತಿಯನ್ನು ಹೆಚ್ಚು ಗಮನಿಸಲು ಸಾಧ್ಯವಾಗುತ್ತದೆ. ಆ ಸಮಯದಲ್ಲಿ ನಾನು ಕಂಡುಕೊಂಡ ವಿಚಾರವೆಂದರೆ ಸ್ವಚ್ಛತೆಯಲ್ಲಿ ನಾವು ಹಿಂದಿದ್ದೇವೆ. ಈ ಬಗ್ಗೆ ಗಮನ ನೀಡಿದಾಗ ಆರೋಗ್ಯ ಸೇರಿದಂತೆ ಎಲ್ಲವೂ ಸುಧಾರಣೆಯಾಗುತ್ತದೆ ಎನ್ನುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಆಶಾ ತಿಮ್ಮಪ್ಪ ಗೌಡ ಹೇಳಿದರು.