ನೆಲ್ಯಾಡಿ: ನಿರಂತರ ಯೋಗ ತರಬೇತಿ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ನಿರಂತರ ಯೋಗ ತರಬೇತಿ ಕೇಂದ್ರ ಸುಳ್ಯ ಇದರ ವತಿಯಿಂದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರವರ ಮಾರ್ಗದರ್ಶನದಲ್ಲಿ ನಡೆಯುವ ಯೋಗ ತರಬೇತಿ ಕೇಂದ್ರ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಬರೀಶ ಕಲಾಮಂದಿರದಲ್ಲಿ ಉದ್ಘಾಟನೆಗೊಂಡಿತ್ತು.


ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಸದಾನಂದ ಕುಂದರ್‌ರವರು ಉದ್ಘಾಟಿಸಿ ಮಾತನಾಡಿ, ಯೋಗಾಭ್ಯಾಸ ನಮ್ಮ ಜೀವನದಲ್ಲಿ ಅತೀ ಅವಶ್ಯಕವಾಗಿದೆ. ಕಠಿಣವಾದ ಯೋಗಾಭ್ಯಾಸದ ಮೂಲಕ ಮಾನಸಿಕ ನೆಮ್ಮದಿ, ಏಕಾಗ್ರತೆ, ತಾಳ್ಮೆ ಹಾಗೂ ಸಂಯಮವನ್ನು ಜೀವನದಲ್ಲಿ ರೂಢಿಸಿಕೊಳ್ಳಬಹುದು ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಜೆಸಿಐ ಅಧ್ಯಕ್ಷ ಮುಂಡಾಳಗುತ್ತು ದಯಾಕರ ರೈಯವರು ಮಾತನಾಡಿ, ನಾವು ಸೇವಿಸುವ ಆಹಾರ ಗಾಳಿ, ನೀರು ಎಲ್ಲವೂ ಕಲುಷಿತವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯವನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಳ್ಳಬೇಕಾದರೆ ನಿರಂತರ ಯೋಗ ಅತೀ ಅವಶ್ಯಕ ಮತ್ತು ಅನಿವಾರ್ಯವಾಗಿದೆ ಎಂದರು.

ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ, ನಿರಂತರ ಯೋಗ ಕಲಿಕಾ ಕೇಂದ್ರದ ಮಾರ್ಗದರ್ಶಕರೂ ಆದ ಶರತ್ ಮರ್ಗಿಲಡ್ಕರವರು ಮಾತನಾಡಿ, ಪ್ರತಿ ಆದಿತ್ಯವಾರ ಸಂಜೆ 4ರಿಂದ 5.30ರ ತನಕ ಯೋಗ ತರಬೇತಿ ನೆಲ್ಯಾಡಿಯಲ್ಲಿ ನಡೆಯಲಿದೆ. ವಯಸ್ಸಿನ ಮಿತಿ ಇಲ್ಲದೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಯೋಗದ ಮೂಲಕ ಸರಕಾರದಿಂದ ಸಿಗುವ ವಿಶೇಷ ಸೌಲಭ್ಯವನ್ನು ಮಕ್ಕಳು ಪಡೆದುಕೊಳ್ಳಬಹುದು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಗುರು, ಯೋಗ ಶಿಕ್ಷಕ ಆರ್.ವೆಂಕಟರಮಣ ಭಟ್ ರವರು ಮಾತನಾಡಿ, ಯೋಗ ಪ್ರಾಚೀನ ಪರಂಪರೆಯನ್ನು ಹೊಂದಿದೆ. ವೇದಗಳ ಕಾಲದಲ್ಲಿ ಋಷಿ ಮುನಿಗಳಿಂದ ಪ್ರಣಿತವಾದ ಯೋಗ ನಮ್ಮ ಬದುಕಿಗೆ ಸಾರ್ಥಕವನ್ನು ತಂದುಕೊಡುತ್ತದೆ. ಯೋಗದ ಅನುಷ್ಠಾನ ಅನೇಕ ಪ್ರಕಾರಗಳಿಂದ ಕೂಡಿದೆ. ಯೋಗವು ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು ದೂರ ಮಾಡಿ ಧನಾತ್ಮಕ ಸಾತ್ವಿಕ ಅಂಶಗಳನ್ನು ಸ್ಥಿರವಾಗಿಸಿ ಮನಸ್ಸನ್ನು ಹತೋಟಿಯಲ್ಲಿ ಇಡಲು ಪೂರಕವಾಗುತ್ತದೆ ಎಂದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಲ್ಯಾಡಿ ವಲಯ್ಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಶ್ರೀರಾಮ ವಿದ್ಯಾಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು ಶುಭ ಹಾರೈಸಿದರು.


ಆರಾಧ್ಯ ಎಸ್ ರೈ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಘಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಆರಾಧ್ಯ ಬ್ಯೂಟಿಪಾರ್ಲರ್‌ನ ಮಾಲಕಿ ಸಂಧ್ಯಾ ಅವಿನಾಶ್ ರೈ, ಶ್ರೀಮತಿ ಪ್ರವೀಣಾ ಸುಧಾಕರ್ ಶೆಟ್ಟಿ, ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೋಶಾಧಿಕಾರಿ ಚಂದ್ರಶೇಖರ ಬಾಣಜಾಲು ಮತ್ತಿತರರು ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದಿ ಬೆಸ್ಟ್ ಅವಾರ್ಡ್ ಪಡೆದ ಆರಾಧ್ಯರವರಿಂದ ಯೋಗ ಪ್ರದರ್ಶನ ನಡೆಯಿತು.


ಸನ್ಮಾನ:
ಯೋಗಗುರು ಶರತ್ ಮರ್ಗಿಲಡ್ಕರವರನ್ನು ಶಾಲು ಹೊಂದಿಸಿ ಹಾರಾರ್ಪಣೆ ಮಾಡಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಜಯಾನಂದ ಬಂಟ್ರಿಯಾಲ್‌ರವರು ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here