ಉಪ್ಪಿನಂಗಡಿ: ಸಂಘದ ತತ್ವ- ಸಿದ್ಧಾಂತವನ್ನು ಅಳವಡಿಸಿಕೊಂಡು ಬಂದ ನಾನು ಎಂದೆಂದಿಗೂ ಬಿಜೆಪಿಯೇ. ಆದರೆ ದ.ಕ. ಜಿಲ್ಲೆಯಲ್ಲಿ ಪಕ್ಷದೊಳಗಿನ ಈಗಿನ ವ್ಯವಸ್ಥೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಬೆಲೆಯಿಲ್ಲದಂತಾಗಿದ್ದು, ಸದಾ ಧರ್ಮ, ಹಿಂದುತ್ವದ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ಅವರ ಅಭಿಲಾಷೆಯಂತೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಧರ್ಮ ಉಳಿಯಬೇಕೆಂಬ ನಿಟ್ಟಿನಲ್ಲಿ ಮಾತ್ರ ನನ್ನ ಈ ಸ್ಪರ್ಧೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿರುವ ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಇಲ್ಲಿನ ನಟ್ಟಿಬೈಲ್‌ನ ಗಾಣಿಗ ಸಮುದಾಯಭವನದಲ್ಲಿ ಶನಿವಾರ ಸಂಜೆ ನಡೆದ ತನ್ನ ಅಭಿಮಾನಿ ಬಳಗದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಬೆಂಬಲ ಯಾವತ್ತಿದ್ದರೂ ಅದು ಹಿಂದುತ್ವಕ್ಕೆ ಹಾಗೂ ಧರ್ಮಕ್ಕೆ. ಅದು ಬಿಟ್ಟು ಬೇರೆ ಯಾವ ಪಕ್ಷಕ್ಕೂ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ತನ್ನದೆಂಬ ಸ್ವಾರ್ಥವಿಲ್ಲದೆ ಸದಾ ಧರ್ಮ ಹಾಗೂ ಹಿಂದುತ್ವದ ರಕ್ಷಣೆಗಾಗಿ ಸಮರ್ಪಿತಾ ಮನೋಭಾವದಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಗಟ್ಟಿ ಧ್ವನಿಯಾಗಿ ನಿಲ್ಲಬೇಕು. ಧರ್ಮ ಉಳಿಯಬೇಕು ಎಂಬ ನಿಟ್ಟಿನಲ್ಲಿ ಮಾತ್ರ ನಾನು ಸ್ಪರ್ಧಿಸುತ್ತಿರೋದು. ಒಮ್ಮೆ ನಾಮಪತ್ರ ಸಲ್ಲಿಸಿದರೆ ಮತ್ತೆ ಹಿಂದೆಗೆಯುವ ಪ್ರಶ್ನೆಯೇ ಇಲ್ಲ. ಎ.17ರಂದು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಆ ಸಂದರ್ಭ ಸುಮಾರು 10 ಸಾವಿರ ಸಂಖ್ಯೆಯಷ್ಟು ಜನರನ್ನು ಸೇರಿಸಬೇಕೆಂಬ ನಿರೀಕ್ಷೆ ಇದೆ. ಈ ಅಲ್ಪವಾಧಿಯಲ್ಲಿ ಎಲ್ಲಾ ಕಾರ್ಯಕರ್ತರ ಮನೆ- ಮನೆಗೆ ಹೋಗುವುದು ಸಾಧ್ಯವಾಗದ ಮಾತು. ಆದ್ದರಿಂದ ಅಂದು ಎಲ್ಲರೂ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪ್ರಮುಖರಾದ ಚಿದಾನಂದ ಪಂಚೇರು, ಸುಜೀತ್ ಬೊಳ್ಳಾವು, ಸಂದೀಪ್ ಕುಪ್ಪೆಟ್ಟಿ, ನವೀನ್ ಕಲ್ಯಾಟೆ, ಲಕ್ಷ್ಮಣ ಗೌಡ ನೆಡ್ಚಿಲ್, ರಾಧಾಕೃಷ್ಣ ಭಟ್ ಬೊಳ್ಳಾವು, ರಾಜೇಶ್ ಕೊಡಂಗೆ, ಸತೀಶ್ ನೆಡ್ಚಿಲ್, ನವೀನ್ ಬಂಡಾಡಿ, ಮೋಹನ್ ಶೆಟ್ಟಿ ಕಜೆಕ್ಕಾರು, ಸಚಿನ್ ಪುಳಿತ್ತಡಿ, ಚಂದ್ರಶೇಖರ, ದೀಪಕ್ ರಾಮನಗರ, ರಮೇಶ್ ಬಂಡಾರಿ, ಕೇಶವ ದುರ್ಗಾಗಿರಿ, ಸಂತೋಷ್ ಅಡೆಕ್ಕಲ್ ಮತ್ತಿತರರಿದ್ದರು.