ರಾಷ್ಟ್ರಭಕ್ತಿ, ಸಂಸ್ಕೃತಿ, ಸಂಸ್ಕಾರ ಸಹಿತ ಅತ್ಯುತ್ಕೃಷ್ಟ ಗುಣಮಟ್ಟದ ಶಿಕ್ಷಣ-ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯ ಈಗ ವಿದ್ಯಾರ್ಥಿಗಳ ನೆಚ್ಚಿನ ತಾಣ

0

ಪುತ್ತೂರು: ಇಂದು ಶಿಕ್ಷಣ ಎನ್ನುವುದು ಅದರಲ್ಲೂ ಪದವಿಪೂರ್ವ ಶಿಕ್ಷಣ ಬಹು ವಿಸ್ತೃತವಾದ ಮತ್ತು ವ್ಯವಸ್ಥಿತವಾದ ಶೈಕ್ಷಣಿಕ ವ್ಯವಸ್ಥೆ. ಅವೆಷ್ಟೋ ಮಕ್ಕಳ ನಾಳಿನ ಕನಸಿಗೆ ಪಿಯು ಅಧ್ಯಯನ ಅತ್ಯಂತ ಪ್ರಮುಖ ಘಟ್ಟ. ಮೆಡಿಕಲ್, ಇಂಜಿನಿಯರಿಂಗ್ ಮೊದಲಾದ ಪ್ರತಿಷ್ಟಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕು ಎನ್ನುವ ಬಯಕೆ, ಸಿಎ – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಾಣಬೇಕೆನ್ನುವ ತುಡಿತಗಳೇ ಮೊದಲಾದ ಸಂಗತಿಗಳಿಗೆ ಪಿಯು ಶಿಕ್ಷಣವೇ ತಳಹದಿ. ಆದರೆ ಬಹುತೇಕ ಮಕ್ಕಳು ಹಾದಿ ತಪ್ಪುವುದೂ ಅಥವ ಹಾದಿತಪ್ಪಿಸುವ ಮಂದಿ ಮುಗ್ಧ ಮನಸ್ಸುಗಳ ಮೇಲೆ ದಾಳಿ ಮಾಡುವುದೂ ಇಲ್ಲಿಯೇ. ಹಾಗಾಗಿಯೇ ಹತ್ತನೆಯ ಇಯತ್ತೆಯ ನಂತರ ಮಕ್ಕಳನ್ನು ಯಾವ ಸಂಸ್ಥೆಗೆ ಸೇರಿಸುವುದು ಎಂಬ ಬಹುದೊಡ್ಡ ಪ್ರಶ್ನೆ ಎಲ್ಲಾ ಹೆತ್ತವರ ಮುಂದಿರುತ್ತದೆ.

ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಧೈರ್ಯವಾಗಿ ಎರಡು ವರ್ಷ ಬಿಟ್ಟು ಹೋಗಬಹುದಾದ, ನಾಳಿನ ಪ್ರಜೆಗಳಲ್ಲಿ ರಾಷ್ಟ್ರಭಕ್ತಿ, ಸಂಸ್ಕಾರವನ್ನು ನಿರಂತರ ತುಂಬುವ, ಯಾವುದೇ ಚಟಗಳು ಮಕ್ಕಳ ಹತ್ತಿರಕ್ಕೂ ಸುಳಿಯದಂತೆ ಕಾಪಾಡುವುದರ ಜತೆಗೆ ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ರ್‍ಯಾಂಕ್ ದಾಖಲಿಸುತ್ತಿರುವ, ಎಲ್ಲಕ್ಕಿಂತ ಮುಖ್ಯವಾಗಿ ಹೆತ್ತವರ ಪಾಲಿಗೊಂದು ಭರವಸೆಯಾಗಿ ಕಾಣುತ್ತಿರುವ ಒಂದು ವಿಶೇಷ ಸಂಸ್ಥೆ ಅಂಬಿಕಾ ಪದವಿಪೂರ್ವ ವಿದ್ಯಾಲಯ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬೆಳೆದು ಇಂದು ರಾಜ್ಯಕ್ಕೇ ತನ್ನ ಸುಗಂಧವನ್ನು ಪಸರಿಸುತ್ತಿರುವ ಅಂಬಿಕಾ ವಿದ್ಯಾಸಂಸ್ಥೆಗಳ ಸಾಧನೆಯ ಹಾದಿ ಮೈನವಿರೇಳಿಸುವಂತಹದ್ದು. ಕೇವಲ ದಶಕವೊಂದರಲ್ಲಿ ಈ ಸಂಸ್ಥೆ ಏರಿದ ಎತ್ತರ ರೋಚಕವಾದದ್ದು.
ಅಂಬಿಕಾ ಪದವಿಪೂರ್ವ ವಿದ್ಯಾಲಯ ಸ್ಥಾಪನೆಯಾದದ್ದೇ ಗುರುತರ ಉದ್ದೇಶದೊಂದಿಗೆ. ‘ಜ್ಞಾನಂ ವಿಜ್ಞಾನ ಸಹಿತಂ’ ಎನ್ನುವ ಕಲ್ಪನೆ, ದೇಶಕ್ಕೆ ಕೇವಲ ಒಬ್ಬ ಡಾಕ್ಟರ್, ಇಂಜಿನಿಯರ್ ಕೊಟ್ಟರೆ ಸಾಲದು, ಆತ ರಾಷ್ಟ್ರಭಕ್ತನೂ ಆಗಿರಬೇಕು, ಸಂಸ್ಕಾರವಂತನಾಗಿಯೂ ಮೂಡಿಬರಬೇಕು ಎಂಬ ಮಹೋದ್ದೇಶ ಈ ಸಂಸ್ಥೆಯ ಹಿನ್ನಲೆಯಲ್ಲಿದೆ. ದೇಶಪ್ರೇಮ, ರಾಷ್ಟ್ರಜಾಗೃತಿ, ಸಂಸ್ಕಾರ, ಸನಾತನ ಸಂಸ್ಕೃತಿಗಳು ಇಲ್ಲಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತವೆ.


ಗುಣಮಟ್ಟದಲ್ಲಿ ರಾಜಿಯಿಲ್ಲ:
ಕೇವಲ ಸಂಸ್ಕಾರ ಸಂಸ್ಕೃತಿಗಳಿಗಷ್ಟೇ ಇಲ್ಲಿ ಆದ್ಯತೆಯಲ್ಲ. ಅವುಗಳ ತಳಹದಿಯ ಮೇಲೆ ಭವಿಷ್ಯದ ಸೌಧ ನಿರ್ಮಾಣ ಆಗಬೇಕೆಂಬುದಕ್ಕೆ ಸಂಸ್ಥೆ ಬದ್ಧವಾಗಿದೆ. ಕಳೆದ ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ಓದಿದ ಮಕ್ಕಳು ಜೆಇಇ, ನೀಟ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಗಳಿಸುತ್ತಿರುವ ರಾಂಕ್‌ಗಳು ಸಂಸ್ಥೆಯ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. 2023ರ ಜೆಇಇ ಫಲಿತಾಂಶದಲ್ಲಿ 99 ಪರ್ಸೆಂಟೈಲ್‌ಗಿಂತಲೂ ಅಧಿಕ ಅಂಕ ದಾಖಲಿಸಿದ ಕೀರ್ತಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಪಾತ್ರವಾಗಿದೆ ಹಾಗೂ 99 ಪರ್ಸೆಂಟೈಲ್ ಗಿಂತ ಅಧಿಕ ಸಾಧನೆ ಮಾಡಿದ ದಕ್ಷಿಣ ಕನ್ನಡದ ಕೇವಲ ಐದು ಶಿಕ್ಷಣ ಸಂಸ್ಥೆಗಳಲ್ಲಿ ಈ ಸಂಸ್ಥೆಯೂ ಒಂದೆಂಬುದು ಗಮನಾರ್ಹ ವಿಚಾರ.


2023ರಲ್ಲಿ ಜೆಇಇ ತರಬೇತಿಗೆ ಹಾಜರಾಗಿದ್ದ ಒಟ್ಟು 36 ಮಂದಿ ವಿದ್ಯಾರ್ಥಿಗಳಲ್ಲಿ ಹದಿನಾಲ್ಕು ಮಂದಿ 90ಕ್ಕೂ ಅಧಿಕ ಪರ್ಸೆಂಟೈಲ್ ದಾಖಲಿಸಿರುವುದು, ಹಾಗೆಯೇ ಹದಿನೈದಕ್ಕೂ ಮಿಕ್ಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೇರ್ಗಡೆಗೊಂಡಿರುವುದು, ಸಿಇಟಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾವಿರ ರ್‍ಯಾಂಕ್ ಒಳಗಡೆ ಸುಮಾರು ಅರವತ್ತೈದು ಮಂದಿ ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿರುವುದು… ಇವೆಲ್ಲ ಅಂಬಿಕಾ ಶಿಕ್ಷಣ ಸಂಸ್ಥೆಯ ಮುಕುಟಕ್ಕೇರಿದ ಹೆಮ್ಮೆಯ ಗರಿಗಳು.


ಕಾಮರ್ಸ್ ಶಿಕ್ಷಣ :
ಅಂಬಿಕಾ ಸಂಸ್ಥೆಯಲ್ಲಿ ಪಿಯು ಕಾಮರ್ಸ್ ಶಿಕ್ಷಣವನ್ನೂ ಒದಗಿಸಿಕೊಡಲಾಗುತ್ತಿದೆ. ಪಿಯುಸಿಯಿಂದಲೇ ಸಿಎ, ಸಿ.ಎಸ್ ತರಬೇತಿಯನ್ನು ಕಾಮರ್ಸ್ ಶಿಕ್ಷಣದೊಂದಿಗೆ ಸೇರಿಸಲಾಗಿದೆ. ಮುಂದೆ ಬಿ.ಕಾಂ ಕೂಡ ಅಂಬಿಕಾ ಪದವಿ ಕಾಲೇಜಿನಲ್ಲಿ ಲಭ್ಯ ಇರುವುದರಿಂದ ಐದು ವರ್ಷಗಳ ಇಂಟಗ್ರೇಟೆಡ್ (ಸಿ.ಎ/ಸಿ.ಎಸ್ ಸಮೇತ) ಶಿಕ್ಷಣ ಪಡೆಯುವ ಅವಕಾಶವೂ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದರೊಂದಿಗೆ ಬ್ಯಾಂಕಿಂಗ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಐಬಿಪಿಎಸ್ ಪರೀಕ್ಷಾ ತರಬೇತಿಯನ್ನೂ ಒದಗಿಸಿಕೊಡಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಉಪಯುಕ್ತ ಎನಿಸಿದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಹಾಗೂ ಐಪಿಸಿಸಿ ಪರೀಕ್ಷೆಯನ್ನೂ ತೇರ್ಗಡೆಗೊಳಿಸಿರುವುದು ಸಂಸ್ಥೆಗೆ ಹೆಮ್ಮೆಯೆನಿಸಿದೆ. ಇದರೊಂದಿಗೆ ಎಸಿ(ಏರ್‌ಕಂಡೀಷನ್) ತರಗತಿಗಳು ವಿದ್ಯಾರ್ಥಿಗಳ ಓದಿಗೆ ಪೂರಕವೆನಿಸಿವೆ. ಆರಂಭವಾದಾಗಿನಿಂದಲೂ ಕಾಮರ್ಸ್ ಶಿಕ್ಷಣದಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಾಗುತ್ತಿರುವುದು ಹೆಮ್ಮೆಯ ವಿಷಯವೆನಿಸಿದೆ.


ಮಾತೃಸಂಸ್ಥೆ:
ಅಂದಹಾಗೆ ಈ ಅಂಬಿಕಾ ಪದವಿಪೂರ್ವ ವಿದ್ಯಾಲಯವನ್ನು ಹುಟ್ಟು ಹಾಕಿದ್ದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್. ದೈನಂದಿನ ಓಡಾಟದ ಮೂಲಕ ಅಧ್ಯಯನ ನಡೆಸುವವರಿಗಾಗಿ ಹಾಗೂ ಹಾಸ್ಟೆಲ್ ನಲ್ಲಿದ್ದು ಅಧ್ಯಯನ ನಡೆಸುವವರಿಗಾಗಿ ಪ್ರತ್ಯೇಕ ಎರಡು ಪಿಯು ಕಾಲೇಜುಗಳನ್ನು ಹುಟ್ಟುಹಾಕಿದ್ದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಹೆಚ್ಚುಗಾರಿಕೆ. 2010ರಲ್ಲಿ ದೈನಂದಿನ ಓಡಾಟದ ವಿದ್ಯಾರ್ಥಿಗಳಿಗಾಗಿ ಪುತ್ತೂರು ಬಸ್ ನಿಲ್ದಾಣದ ಪಕ್ಕದ ನೆಲ್ಲಿಕಟ್ಟೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯ ಸ್ಥಾಪನೆಯಾದರೆ 2015ರಲ್ಲಿ ಪುತ್ತೂರಿನಿಂದ ಒಂದೂವರೆ ಕಿಲೋಮೀಟರ್ ದೂರದ ಬಪ್ಪಳಿಗೆಯಲ್ಲಿ ಹಾಸ್ಟೆಲ್‌ನಲ್ಲಿದ್ದು ಓದುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯವನ್ನು ಆರಂಭಿಸಲಾಯಿತು. ಈ ನಡುವೆ 2013ರಲ್ಲಿ ಒಂದು ಅತ್ಯುತ್ಕೃಷ್ಟ ಸಿಬಿಎಸ್‌ಇ ವಿದ್ಯಾಲಯ ಹಾಗೂ 2019ರಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯವನ್ನೂ ಆರಂಭಿಸಿ ‘ಕೆ.ಜಿ. ಇಂದು ಯುಜಿ ವರೆಗೆ’ ಎಂಬ ವಿಶಾಲ ಶೈಕ್ಷಣಿಕ ಕಲ್ಪನೆಯನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್ ಜಾರಿಗೊಳಿಸಿದೆ.


ಸಂಸ್ಕಾರದ ತಾಣವಾಗಿ ಅಂಬಿಕಾ ಹಾಸ್ಟೆಲ್ಸ್:
ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರತಿ ದಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ವಿಷ್ಣುಸಹಸ್ರನಾಮ, ಲಲಿತಾ ಸಹಸ್ರನಾಮ ಪಠಣ ನಡೆಯುತ್ತಿರುತ್ತದೆ. ಭಜನೆ ಇಲ್ಲಿಯ ನಿತ್ಯ ಸಂಪ್ರದಾಯ. ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕಾರ ಮೌಲ್ಯಗಳನ್ನು ತುಂಬುವ ನೆಲೆಯಲ್ಲಿ ಅಂಬಿಕಾ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿದೆ. ಹುಡುಗರ ಮತ್ತು ಹುಡುಗಿಯರ ಎರಡೂ ಹಾಸ್ಟೆಲ್‌ಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಇದರೊಂದಿಗೆ ದೇಶಭಕ್ತಿಯ ಧಾರೆ ನಿರಂತರವಾಗಿ ವಿದ್ಯಾರ್ಥಿಗಳನ್ನು ತೋಯಿಸುತ್ತದೆ. ದೇಶದ ನಿಜ ಇತಿಹಾಸದ ದಿಗ್ದರ್ಶನವಾಗುತ್ತದೆ. ಭಾರತ ಜಗತ್ತಿಗೆ ಉದಾರವಾಗಿ ನೀಡಿದ ‘ಯೋಗ’ ಇಲ್ಲಿ ಪಠ್ಯದ ಭಾಗವಾಗಿ ಆಚರಣೆಗೆ ಬರುತ್ತದೆ. ಇದರೊಂದಿಗೆ ಶುಚಿ ರುಚಿಯಾದ ಶುದ್ಧ ಸಸ್ಯಾಹಾರಿ ಅಡುಗೆ ವಿದ್ಯಾರ್ಥಿಗಳ ಓದಿನ ಏಕಾಗ್ರತೆ ಹೆಚ್ಚಿಸುವಲ್ಲಿ ಪರಿಣಾಮ ಬೀರುತ್ತಿದೆ.


ಅಮರ್ ಜವಾನ್ ಜ್ಯೋತಿ ಸ್ಥಾಪನೆ :
ಅಂಬಿಕಾ ಶಿಕ್ಷಣ ಸಂಸ್ಥೆಯ ಸಾಧನೆಗಳಲ್ಲಿ ‘ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಸ್ಥಾಪನೆಯೂ ಒಂದು. ಭಾರತೀಯ ಯೋಧರ ಬಗೆಗೆ ಅಂಬಿಕಾ ಸಂಸ್ಥೆ ನಿರಂತರ ಅಭಿಮಾನ ತೋರುತ್ತಿದೆ. ಯೋಧರ ತ್ಯಾಗದಿಂದಾಗಿಯೇ ನಾವು ಕ್ಷೇಮದಿಂದಿದ್ದೇವೆ ಎಂಬುದನ್ನು ಇಲ್ಲಿನ ಮಕ್ಕಳಿಗೆ ತಿಳಿಹೇಳಲಾಗುತ್ತಿದೆ. ಅಂತಹ ವೀರ ಯೋಧರ ಸ್ಮರಣಾರ್ಥ ಪುತ್ತೂರಿನ ಕಿಲ್ಲೆ ಮೈದಾನದ ಬಳಿ ‘ಅಮರ್ ಜವಾನ್ ಜ್ಯೋತಿ ಸ್ಮಾರಕ’ವನ್ನು ಅಂಬಿಕಾ ಸಮೂಹ ಶಿಕ್ಷಣ ಸಮಸ್ಥೆಗಳ ವತಿಯಿಂದ ಸ್ಥಾಪಿಸಲಾಗಿದೆ. ಸುಮಾರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕ ಖಾಸಗಿಯವರು ನಿರ್ಮಿಸಿದ ದೇಶದ ಏಕೈಕ ಯೋಧ ಸ್ಮಾರಕ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.


ವಿಶೇಷತೆಗಳು:
ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಗಮನಿಸುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಓರ್ವ ಮಾರ್ಗದರ್ಶೀ ಉಪನ್ಯಾಸಕರಿದ್ದು, ಕಲಿಕೆಯಲ್ಲಿ ಹಿಂದುಳಿದವರಿಗಾಗಿ ವಿಶೇಷ ತರಗತಿಗಳು, ತಂತ್ರಜ್ಞಾನ ಆಧಾರಿತ ತರಗತಿಗಳು, ಹವಾ ನಿಯಂತ್ರಿತ ತರಗತಿಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ಹಾಗೆಯೇ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿದ ಅಥವ ನಿರ್ವಹಿಸುತ್ತಿರುವ ಯೋಧರ ಮಕ್ಕಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇಲ್ಲಿ ದೊರಕುತ್ತದೆ. ಮಾತ್ರವಲ್ಲದೆ ವಿಶಾಲವಾದ ಕ್ರೀಡಾಂಗಣ, ಈಜುಕೊಳ, ಉತ್ಕೃಷ್ಟ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳೇ ಮೊದಲಾದವುಗಳು ಸಂಸ್ಥೆಯನ್ನು ಮತ್ತಷ್ಟು ಆಪ್ತವೆನಿಸುವಂತೆ ಮಾಡಿವೆ. ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಲಭ್ಯರಿರುವುದು ವಿದ್ಯಾರ್ಥಿಗಳಿಗೆ ವರದಾನವೆನಿಸಿದೆ. ಇವೆಲ್ಲದರ ಜತೆಗೆ ಯೋಗವನ್ನು ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಮೊದಲ ಶಿಕ್ಷಣ ಸಂಸ್ಥೆಯಾಗಿ ಅಂಬಿಕಾ ಗುರುತಿಸಿಕೊಂಡಿದೆ.


ಇಂಟೆಲಿಜೆಂಟ್ ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್:
ವಿದ್ಯಾರ್ಥಿಗಳ ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋಡ್‌ಗಳನ್ನು ಅಳವಡಿಸಲಾಗುತ್ತಿದೆ. ಇಂತಹ ಒಂದು ಸ್ಮಾಟ್ ಬೋರ್ಡ್‌ಗೆ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 3 ಡಿ ತಂತ್ರಜ್ಞಾನ, 4 ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರ್‍ಯಾಕ್ಟಿವ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸಲಿದೆ.

ಹೆತ್ತವರು ನಮ್ಮ ಮೇಲೆ ನಂಬಿಕೆಯಿಂದ ಮಕ್ಕಳನ್ನು ಬಿಡುತ್ತಾರೆ. ಆ ನಂಬಿಕೆಗೆ ಎಂದೂ ಧಕ್ಕೆ ಬರುವಂತಾಗಬಾರದು. ಹಾಗಾಗಿ ಪ್ರತಿನಿತ್ಯ ನಾನೇ ಸ್ವತಃ ಮಕ್ಕಳ ಮೇಲೆ ನಿಗಾ ಇಡುತ್ತೇನೆ. ರಾತ್ರೋರಾತ್ರಿ ಬಂದು ಹಾಸ್ಟೆಲ್ ಮಕ್ಕಳ ಚಟುವಟಿಕೆ ಗಮನಿಸುತ್ತಿರುತ್ತೇನೆ. ಮಕ್ಕಳ ಅಧ್ಯಯನಕ್ಕೆ ಏನು ಬೇಕೋ ಅವೆಲ್ಲವನ್ನೂ ಪೂರೈಸುವ ಹೊಣೆ ನಮ್ಮದು. ಹಾಗೆಯೇ ದೇಶಪ್ರೇಮವನ್ನು ಶಿಕ್ಷಣ ಸಂಸ್ಥೆಗಳು ತುಂಬದಿದ್ದರೆ ಇನ್ಯಾರು ತುಂಬಬೇಕು? ಭಗವದ್ಗೀತೆಯನ್ನು ಅದ್ಭುತ ವಿಚಾರಗಳನ್ನು ನಾವು ಮಕ್ಕಳಿಗೆ ಕೊಡದಿದ್ದರೆ ಇನ್ನೆಲ್ಲಿ ಸಿಗುವುದಕ್ಕೆ ಸಾಧ್ಯ? ಹಾಗಾಗಿ ಶಿಕ್ಷಣ ಸಂಸ್ಥೆಗಳಿಗೆ ಇಂತಹ ಜವಾಬ್ದಾರಿ ಇದ್ದಾಗ ಮಾತ್ರ ಉತ್ಕೃಷ್ಟ ವ್ಯಕ್ತಿತ್ವಗಳು ರೂಪುಗೊಳ್ಳಬಹುದು
—ಸುಬ್ರಹಣ್ಯ ನಟ್ಟೋಜ, ಕಾರ್ಯದರ್ಶಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

LEAVE A REPLY

Please enter your comment!
Please enter your name here