ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಲ್ತಡ್ಕರಿಂದ ರೋಡ್ ಶೋ

0

ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಎ.19ರಂದು ತೆನೆ ಹೊತ್ತ ಮಹಿಳೆಯೊಂದಿಗೆ ಪುತ್ತೂರಿನಲ್ಲಿ ರೋಡ್ ಶೋ. ಮೂಲಕ ಮತ ಯಾಚಿಸಿದರು.


ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಬೆ ಶ್ರೀರಾಮ ಸೌಧದ ಮಹಡಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಳಿಕ ಮೆರವಣಿಯು ಪ್ರಾರಂಭಗೊಂಡಿತು. ದರ್ಬೆ ವೃತ್ತದ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆಯ ಮೂಲಕ ಸಂಚರಿಸಿ ಬೊಳುವಾರುವರೆಗೆ ಸಾಗಿ ಬಂದಿದೆ.


ಗಮನ ಸೆಳೆದ ತೆನೆ ಹೊತ್ತ ಮಹಿಳೆಯ ವೇಷ:
ಜೆಡಿಎಸ್‌ ಪಕ್ಷದ ಚಿನ್ನೆಯಾಗಿರುವ ತೆನೆ ಹೊತ್ತ ಮಹಿಳೆಯ ವೇಷವು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು. ಸಭಾ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ತೆನೆ ಹೊತ್ತ ಮಹಿಳೆಯು ವಿಶೇಷ ಆಕರ್ಪಣೆಯಾಗಿತ್ತು. ನಾಟಕ ಕಲಾವಿದ ದಯಾನಂದ ಕುಂತೂರು ತೆನೆ ಹೊತ್ತ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಸಿಂಗಾರಿ ಮೇಳದ ಸದ್ದಿನೊಂದಿಗೆ ಮೆರವಣಿಗೆಯು ಸಾಗಿ ಬಂದಿದೆ. ಜೆಡಿಎಸ್ ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಐ.ಸಿ ಕೈಲಾಸ್, ಪ್ರಧಾನ ಕಾರ್ಯದರ್ಶಿ ಮಹಾವೀರ ಜೈನ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮಣಿಯನ್,ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪ್ರಿಯ ಸಾಲ್ಯಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಪ್ರಭಾಕರ ಸಾಲ್ಯಾನ್, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಯರಾಜ ಅಮೀನ್, ನಗರ ಜೆಡಿಎಸ್ ಅಧ್ಯಕ್ಷ ವಿಕ್ಟರ್ ಗೊನ್ಸಾಲ್ವೀಸ್, ಯುವ ಜೆಡಿಎಸ್ ಶಿವು ಸಾಲ್ಯಾನ್, ಪಕ್ಷದ ಪ್ರಮುಖರಾದ ಗಧಾದರ ಗೌಡ ಮಲ್ಲಾರ, ಇಬ್ರಾಹಿಂ ಪರ್ಪುಂಜ, ರಾಧಾಕೃಷ್ಣ ಸಾಲ್ಯಾನ್, ಶ್ರೇಯಾಂಸ್ ಕುಮಾರ್ ಜೈನ್, ನಝೀರ್ ಬಪ್ಪಳಿಗೆ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾರ್ಯಕರ್ತರ ಸಭೆ:
ರೋಡ್ ಶೋ.ದ ಪ್ರಾರಂಭದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಪಕ್ಷದ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ರೈತರ ನೆಮ್ಮದಿಯ ಜೀವನಕ್ಕೆ ಜೆಡಿಎಸ್ ಮೂಲಕ ಮಾತ್ರ ಸಾಧ್ಯ. ಜೆಡಿಎಸ್ ಈ ಭಾರಿ ಪುತ್ತೂರಿನಲ್ಲಿ ಹೊಸ ಇತಿಹಾಸ ಸೃಷ್ಠಿಸಬೇಕು. ಇದಕ್ಕಾಗಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರಬೇಕು ಎಂದರು. ಜನರಿಗೆ ಸೂಕ್ತ ಆರೋಗ್ಯ ಕಲ್ಪಿಸಲು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು, ಗ್ರಾಮೀಣ ಪ್ರದೇಶಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರಿ ಐಟಿಐ, ಪಾಲಿಟೆಕ್ನೆಕ್ ಕಾಲೇಜು, ಕ್ರಿಕೆಟ್, ಸ್ಪೋರ್ಟ್ಸ್ ಅಕಾಡೆಮಿ ನಿರ್ಮಿಸುವ ಯೋಜನೆಯಿದೆ. ರೈತರ ಪರವಾದ ಯೋಜನೆಗಳನ್ನು ತಂದಿರುವ ಜೆಡಿಎಸ್ ಬೆಂಬಲಿಸಬೇಕು. ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗದ ಜನರಿಗೆ ಪೂರಕವಾದ ಅದ್ಬುತವಾದ ಪಂಚರತ್ನ ಯೋಜನೆಗಳನ್ನು ನೀಡಿದ್ದಾರೆ. ಇದನ್ನು ಪ್ರತಿ ಮನೆಗಳಿಗೆ ತಲುಪಿಸಬೇಕು ಎಂದು ಹೇಳಿದರು.
ಯುವ ಶಕ್ತಿ ದೇಶಶಕ್ತಿ ಎಂದು ಹೇಳುತ್ತಿದ್ದರೂ ಯುವಕರಿಗೆ ಉದ್ಯೋಗ ನೀಡಿಲ್ಲ. ಶಿಕ್ಷಣ ಗುಣಮಟ್ಟ ಹಾಳುಮಾಡಿದ್ದಾರೆ. ಉದ್ಯೋಗ ಆವಕಾಶ ಇಲ್ಲದಂತೆ ಆಗಿದೆ. ಇಲಾಖೆಗಳಲ ಖಾಲಿಯಿದ್ದರೂ ಭರ್ತಿ ಮಾಡಿಲ್ಲ. ರೈತ ಸಾಲ ಮನ್ನಾ ಮಾಡಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಸಮರ್ಪಕವಾದ ಸೌಲಭ್ಯಗಳಿಲ್ಲ. ವಿಟ್ಲ ಪಟ್ಟಣ ಪಂಚಾಯತ್ ಆಗಿದ್ದರೂ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ. ಕಟ್ಟಡ ಅನುಮತಿಗೆ ಮಂಗಳೂರಿಗೆ ಹೋಗಬೇಕಾದ ಆವಶ್ಯಕತೆಯಿದೆ. ಸ್ವಾರ್ಥ ಶೋಕಿ, ಹೆಸರಿಗೆ ರಾಜಕಾರಣ ಮಾಡುವವರನ್ನು ಬೆಂಬಲಿಸಬೇಡಿ. ಜನರ ಮೂಲಭೂತ ಸೌಲಭ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಜನಪ್ರತಿನಿಧಿಗಳನ್ನು ಬೆಂಬಲಿಸಬೇಕು ಎಂದ ದಿವ್ಯಪ್ರಭಾ ಗೌಡ ತಿಳಿಸಿದರು.


ಜೆಡಿಎಸ್ ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಐ.ಸಿ ಕೈಲಾಸ್ ಮಾತನಾಡಿ, ಬಿಜೆಪಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈಯವರು ಪಕ್ಷಕ್ಕಾಗಿ ಕೆಲಸ ಮಾಡಿದವರು. ಆದರೆ ಅಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸದೇ ಸುಳ್ಯದಿಂದ ಆಮದು ಮಾಡಿರುವುದರಿಂದ ಅವರಿಬ್ಬರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಬಂದವರೇ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್ ಬಿಜೆಯ ಬಿ-ಟೀಮ್ ಆಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯ ಸಾಲಮನ್ನಾ, ಗ್ಯಾಸ್ ಬೆಲೆ 500 ರೂಪಾಯಿಗೆ ಇಳಿಕೆ, ಆಟೋ ಚಾಲಕರಿಗೆ ಮಾಸಿಕ ರೂ.3000 ಸೇರಿದಂತೆ ಇನ್ನಿತರ ಹಲವು ಯೋಜನೆಗಳನ್ನು ಜಾರಿ ಮಾಡಲಿದ್ದಾರೆ ಎಂದರು. ಬಿಜೆಪಿ ಸರಕಾರದಿಂದ ಜನರು ಬೇಸತ್ತು ಹೋಗಿದ್ದಾರೆ. ಜನರಿಗೆ ನ್ಯಾಯ ಒದಗಿಸಲು ಪ್ರಾದೇಶಿಕ ಪಕ್ಷದ ಆವಶ್ಯಕತೆಯಿದ್ದು ಜೆಡಿಎಸ್ ಪಕ್ಷವನ್ನು ಬೆಳೆಸಬೇಕು ಎಂದರು.


ಜೊಹೋರಾ ನಿಸಾರ್ ಮಾತನಾಡಿ, ಕಾಂಗ್ರೆಸ್ ಯುದ್ದಕ್ಕೆ ಮೊದಲೇ ಶಸ್ತ್ರಾಸ್ತ್ರ ತ್ಯಾಗ ಮಾಡಿದಂತಿದೆ. ಅವರ ಪರಿಸ್ಥಿತಿ ಮೆರವಣಿಗೆಯಲ್ಲಿ ಜನರಿಗೆ ಅರಿವಾಗಿದೆ. ಹೊರಗಿನಿಂದ ಬಂದವರಿಗೆ ಅವಕಾಶ ನೀಡಿದೆ. ಮುಂದೆ ಅವರು ಗೆದ್ದ ಬಳಿಕ ನಮ್ಮನ್ನು ಪುಟ್ಬಾಲ್ ತರ ಹೊದ್ದು ಹೊರಹಾಕಲಿದ್ದಾರೆ. ಬಿಜೆಪಿ ಸರಕಾರ ಜನರಿಂದ ಟೋಲ್, ತೆರಿಗೆ ಸಂಗ್ರಹಿಸಿ ಪುಕ್ಸಟೆ ಭರವಸೆಗಳನ್ನು ನೀಡುತ್ತಾರೆ ಇದಕ್ಕೆ ಯಾರೂ ಮಾರುಹೋಗದೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ಜೆಡಿಎಸ್ ಪಕ್ಷವು ಒಂದು ಜಾತಿಗೆ ಸೀಮಿತವಾಗಿರದೆ ಎಲ್ಲಾ ಜಾತಿಯವರನ್ನು ಸೌಹಾರ್ಧತೆಯಲ್ಲಿ ಮುಂದುವರಿದ ಪಕ್ಷವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದರು.


ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮಣಿಯನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಪ್ರಭಾಕರ ಸಾಲ್ಯಾನ್, ಯುವ ಜೆಡಿಎಸ್ ಅಧ್ಯಕ್ಷ ಶಿವು ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗದಾಧರ ಮಲ್ಲಾರ ಸ್ವಾಗತಿಸಿ, ವಂದಿಸಿದರು. ಬೊಳುವಾರಿನಲ್ಲಿ ರೋಡ್ ಶೋ ಸಮಾಪನಗೊಂಡ ಬಳಿಕ . ಬೊಳುವಾರಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹಾಗೂ ಪಕ್ಷದ ರಾಜ್ಯ ನಾಯಕ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿದರು.

LEAVE A REPLY

Please enter your comment!
Please enter your name here