ಪುತ್ತೂರು:ಮೂರು ವರ್ಷಗಳ ಹಿಂದೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನೆಟ್ಟಣಿಗೆಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿ ಬಾಯಿ ಬಾರದ, ಕಿವಿ ಕೇಳದ ಯುವತಿಯೋರ್ವರ ಮಾನಭಂಗಕ್ಕೆ ಯತ್ನಿಸಿ, ಜೀವಬೆದರಿಕೆಯೊಡ್ಡಿದ್ದ ಅಪರಾಧಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2020ರ ಜನವರಿ 22ರಂದು ಬೆಳಿಗ್ಗೆ 10.30ಕ್ಕೆ ಘಟನೆ ನಡೆದಿತ್ತು.ಹರೀಶ್ ಎನ್.ಎಂಬಾತ ನೊಂದ ಯುವತಿಯೊಬ್ಬರೇ ಮನೆಯಲ್ಲಿದ್ದ ಸಮಯ ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ್ದ.
ಈ ವೇಳೆ ಆಕೆ ತಡೆದಾಗ ಕೈಯನ್ನು ಹಿಡಿದು ಆಕೆಗೆ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಆಕೆಯ ಬಟ್ಟೆಯನ್ನು ಎತ್ತಲು ಪ್ರಯತ್ನಿಸಿ ಮಾನಭಂಗ ಉಂಟು ಮಾಡಿ, ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾಗಿ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಗ್ರಾಮಾಂತರ ಠಾಣೆಯ ಆಗಿನ ಎ.ಎಸ್.ಐ.ಸುರೇಶ್ ರೈಯವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರುನ ಎಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾ ಆರ್.ಜೊಗ್ಲೇಕರ್ ಅವರು ಆರೋಪಿ ಹರೀಶ್ ಎನ್.ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣ:
ಸೆಕ್ಷನ್ 354ರಡಿಯ ಅಪರಾಧಕ್ಕಾಗಿ 2 ವರ್ಷ ಕಠಿಣ ಶಿಕ್ಷೆ ಮತ್ತು 3 ಸಾವಿರ ರೂ.ದಂಡ ವಿಧಿಸಲಾಗಿದೆ.ದಂಡ ತೆರಲು ತಪ್ಪಿದರೆ ಮತ್ತೆ ನಾಲ್ಕು ತಿಂಗಳ ಸಾಮಾನ್ಯ ಸೆರೆವಾಸ ಶಿಕ್ಷೆ ಅನುಭವಿಸಬೇಕು.
ಸೆಕ್ಷನ್ 354ಎ ಅಡಿಯ ಅಪರಾಧಕ್ಕಾಗಿ 1 ವರ್ಷ ಕಠಿಣ ಶಿಕ್ಷೆ ಮತ್ತು 3 ಸಾವಿರ ರೂ.ದಂಡ.ದಂಡ ತೆರಲು ತಪ್ಪಿದಲ್ಲಿ 4 ತಿಂಗಳ ಸಾಮಾನ್ಯ ಸೆರೆಮನೆ ವಾಸ ಶಿಕ್ಷೆ.ಸೆಕ್ಷನ್ 448ರಡಿಯ ಅಪರಾಧಕ್ಕಾಗಿ ರೂ.1000 ದಂಡ. ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಸಾಮಾನ್ಯ ಸೆರೆಮನೆ ವಾಸ ಶಿಕ್ಷೆ.ಸೆಕ್ಷನ್ 323ರಡಿಯ ಅಪರಾಧಕ್ಕಾಗಿ 1 ಸಾವಿರ ರೂ.ದಂಡ.ಇದನ್ನು ಪಾವತಿಸಲು ತಪ್ಪಿದರೆ 2 ತಿಂಗಳ ಸಾಮಾನ್ಯ ಜೈಲು ವಾಸ ಶಿಕ್ಷೆ.ಸೆಕ್ಷನ್ 506ರಡಿಯ ಅಪರಾಧಕ್ಕಾಗಿ 6 ತಿಂಗಳ ಕಠಿಣ ಶಿಕ್ಷೆ ಮತ್ತು 1 ಸಾವಿರ ರೂ.ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಮಾನ್ಯ ಸೆರೆವಾಸ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಶಿಕ್ಷೆಯನ್ನು ಒಂದಾದ ಮೇಲೊಂದರಂತೆ ಅನುಭವಿಸಲು ತೀರ್ಪಿನಲ್ಲಿ ಸೂಚಿಸಲಾಗಿದೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾ ದೇವಿಯವರು ವಾದಿಸಿದ್ದರು.