ರಾಮಕುಂಜ ಮಹಾವಿದ್ಯಾಲಯ-ಪದವಿ ಶಿಕ್ಷಣ ಪಡೆಯುವ ಹಳ್ಳಿ ಮಕ್ಕಳ ಕನಸು ಸಾಕಾರ

0

ಲೇಖಕರು:ಶ್ರದ್ಧಾ, ದ್ವಿತೀಯ ಬಿ.ಕಾಂ.

ಹಳ್ಳಿಯ ಮಕ್ಕಳೂ ಪದವಿ ಶಿಕ್ಷಣದಿಂದ ವಂಚಿತರಾಗಬಾರದು. ಪದವಿ ಶಿಕ್ಷಣ ಸಂಸ್ಥೆಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತಗೊಳ್ಳದೇ ಗ್ರಾಮೀಣ ಪ್ರದೇಶದಲ್ಲೂ ತಲೆ ಎತ್ತಬೇಕು. ಪದವಿ ಶಿಕ್ಷಣದ ಕನಸು ಕಾಣುವ ಸಾವಿರಾರು ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಕಾಶಿ ಎನಿಸಿಕೊಂಡಿರುವ ರಾಮಕುಂಜದಲ್ಲಿ 2008ರಲ್ಲಿ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ ಆರಂಭಗೊಂಡಿತು.


ರಾಮಕುಂಜದಲ್ಲಿ ಜನಿಸಿ ವೆಂಕಟ್ರಾಮನೆಂಬ ಹೆಸರನ್ನು ಧರಿಸಿ ಈ ಪವಿತ್ರ ಮಣ್ಣಲ್ಲಿ ನಡೆದಾಡಿ, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲೆಯಲ್ಲಿ ಕುಣಿದಾಡಿ, ತನ್ನ ಏಳನೇಯ ವಯಸ್ಸಿನಲ್ಲಿ ಬಂಧು ಬಳಗವನ್ನೆಲ್ಲಾ ತೊರೆದು ಸನ್ಯಾಸ ದೀಕ್ಷೆ ಸ್ವೀಕರಿಸಿ ಉಡುಪಿ ಶ್ರೀ ಕೃಷ್ಣನ ಪಾದಸೇವೆಗೆ ಅರ್ಪಿತವಾದ ಪುಷ್ಪ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಜನಮಾನಸದಲ್ಲಿ ಯತಿ ಚಕ್ರವರ್ತಿಯಾಗಿ ಜಗತ್ತಿನಾದ್ಯಂತ ಗೌರವ ಪಡೆದಿದ್ದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹುಟ್ಟಿದ ಊರಿನ ಅವರ ನೇತೃತ್ವದ ವಿದ್ಯಾಸಂಸ್ಥೆಗಳಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜೂ ಒಂದು. ಈ ಮಹಾವಿದ್ಯಾಲಯ ಶ್ರೀ ವಿಶ್ವೇಶತೀರ್ಥ ಶ್ರೀಗಳ ಜನ್ಮದಿನದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ, ಅಮೃತ ಮಹೋತ್ಸವದ ಸವಿನೆನಪಿಗಾಗಿ ಪ್ರಾರಂಭವಾಯಿತು. ರಾಮಕುಂಜದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ದಿ.ಕೆ. ಅನಂತರಾಮ ರಾವ್ ಇವರ ನೇತೃತ್ವದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು ಹಾಗೂ ಊರ ಜನರ ಸಲಹೆ ಸ್ವೀಕರಿಸಲಾಯಿತು. 2007ರಲ್ಲಿ ಡಿಗ್ರಿ ಕಾಲೇಜು ಕಟ್ಟಡ ಕೆಲಸ ಕಾರ್ಯ ಆರಂಭಗೊಂಡಿತು. ಡಿಗ್ರಿ ತರಗತಿಗಳನ್ನು ಅದೇ ವರ್ಷ ಆರಂಭಿಸುವ ವಿಚಾರ ವಿಮರ್ಶಿಸಿ, 2008 ಜೂ.21ರಂದು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು. 2008ರ ಮೊದಲ ಸೆಮಿಸ್ಟರ್ ಮುಕ್ತಾಯದ ಬಳಿಕ ಪ್ರಥಮ ಬ್ಯಾಚಿನ (37 ವಿದ್ಯಾರ್ಥಿಗಳು) ತರಗತಿಗಳನ್ನು ಪದವಿ ಕಾಲೇಜಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.


ದಶಮಾನೋತ್ಸವ:
2008ರಲ್ಲಿ ಕಿರಿದಾಗಿ ಪ್ರಾರಂಭಗೊಂಡು ನಿರಂತರ ಪರಿಶ್ರಮ, ಸಮಯೋಚಿತ ನಿರ್ಧಾರಗಳು ಸಂಸ್ಥೆಯನ್ನು ಎತ್ತರಕ್ಕೆ ಕೊಂಡ್ಯೊಯಿದಿದೆ. ದೃಢ ನಿಷ್ಠೆಯ ಕ್ರಿಯಾಶೀಲ ವ್ಯಕ್ತಿಗಳಿಂದ ಮಾತ್ರವೇ, ಒಂದು ಸಂಸ್ಥೆಯು ಅನನ್ಯ ಸ್ಥಾನವನ್ನು ಪಡೆಯುತ್ತದೆ. ಸ್ವಚ್ಛಂದವಾದ ಈ ಪರಿಸರದಲ್ಲಿ ಜನಮನ್ನಣೆಗಳಿಸಿರುವ ಬೃಹತ್ ವೃಕ್ಷದಂತಿರುವ ಈ ಸಂಸ್ಥೆಯು ತನ್ನ ದಶಮಾನೋತ್ಸವವನ್ನು 2019ರಲ್ಲಿ ಆಚರಿಸಿಕೊಂಡಿದೆ. ಕಳೆದ ಸಾಲಿನಲ್ಲಿ ತೃತೀಯ ಬಿ.ಕಾಂ ವಿಭಾಗದಲ್ಲಿ 97%, ತೃತೀಯ ಬಿಎ ವಿಭಾಗದಲ್ಲಿ 95% ಹಾಗೂ ತೃತೀಯ ಬಿಎಸ್ಸಿ ವಿಭಾಗದಲ್ಲಿ 90% ಫಲಿತಾಂಶವನ್ನು ವಿದ್ಯಾರ್ಥಿಗಳು ತಂದುಕೊಟ್ಟಿದ್ದಾರೆ. ಕಳೆದ ಸಾಲಿನಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಲ್ಲಿ ಹತ್ತಾರು ಮಂದಿ ವಿದ್ಯಾರ್ಥಿಗಳು ಸಿ ಎ ಫೌಂಡೇಶನ್ ಕೋರ್ಸ್‌ನಲ್ಲಿ ಉತ್ತೀರ್ಣರಾಗುವ ಮೂಲಕ ಸಂಸ್ಥೆಯ ಹೆಸರನ್ನು ಎತ್ತಿಹಿಡಿದಿದ್ದಾರೆ.


ಕ್ರೀಡೆ:-
ಕಾಲೇಜಿನ ಆರಂಭದಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮದೇ ಛಾಪನ್ನು ಇರಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ೫-೬ನೇ ಸ್ಥಾನವನ್ನು ಸಾರ್ವಕಾಲಿಕವಾಗಿ ದಾಖಲಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ನಿಯಮ ನಿಬಂಧನೆಗೊಳಪಟ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಸಾಹಿತ್ಯ, ವಾಣಿಜ್ಯ, ಪರಿಸರ, ಕ್ರೀಡೆ, ಲಲಿತಕಲೆ, ರೆಡ್ ಕ್ರಾಸ್, ಮತದಾರ ಸಾಕ್ಷರತಾಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳನ್ನು ವಿವಿಧ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿವೆ.


ರಾಷ್ಟ್ರೀಯ ಸೇವಾ ಯೋಜನೆ:-
ಪ್ರತಿವರ್ಷದಂತೆ ಈ ಬಾರಿ ೨೦೨೩ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕೊಲದಲ್ಲಿ ನಡೆಸಲಾಯಿತು. ಶಿಬಿರಾರ್ಥಿಗಳ ಸೇವೆಯು ಊರಿನವರ ಮೆಚ್ಚುಗೆಗೆ ಪಾತ್ರವಾಯಿತು. ಇದಲ್ಲದೆ ಕುಂಡಾಜೆ, ಬಿಳಿನೆಲೆ, ಮುಂತಾದ ಕಡೆಗಳಲ್ಲಿ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಪ್ರಸ್ತುತ ಸಂಸ್ಥೆಯು ಪರಮ ಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಅಧ್ಯಕ್ಷತೆಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕೈಗೆಟಕುವಂತೆ ಮೂಲಭೂತ ಸೌಕರ್‍ಯಗಳನ್ನು ಒದಗಿಸುತ್ತಿದೆ. ಭವ್ಯ ಕಾಲೇಜು ಕಟ್ಟಡ, ಸುಸಜ್ಜಿತ ಬೋಧನಾ ಕೊಠಡಿಗಳು, ವಿಶಾಲವಾದ ಗ್ರಂಥಾಲಯ, 400 ಮೀಟರ್ ಟ್ರಾಕ್ ಹೊಂದಿರುವ ವಿಶಾಲ ಕ್ರೀಡಾಂಗಣ, ಗಣಕ ಶಿಕ್ಷಣ ಕೇಂದ್ರ, ಇತ್ಯಾದಿಗಳನ್ನು ಹೊಂದಿದೆ. ಕೇವಲ 37 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜು ಇಂದು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಈ ಶೈಕ್ಷಣಿಕ ಸಾಲಿನಲ್ಲಿ 11 ಮಂದಿ ಉಪನ್ಯಾಸಕರನ್ನೂ 4 ಮಂದಿ ಪಠ್ಯೇತರ ಸಿಬ್ಬಂದಿಗಳನ್ನು ಹೊಂದಿರುತ್ತದೆ. ೨೦೨೪ರಲ್ಲಿ ಸಂಸ್ಥೆಯು ತನ್ನ ಪಂಚದಶೋತ್ಸವ (ಪಂಚದಶೀ) ವನ್ನು ಆಚರಿಸಿಕೊಳ್ಳುತ್ತದೆ ಎಂಬುದು ಸಂತಸದ ಸಂಗತಿಯಾಗಿದೆ.

ಬಿ.ಕಾಂ.,ಬಿ.ಎ.ಗೆ ದಾಖಲಾತಿ ಆರಂಭ:
2023-24ನೇ ಸಾಲಿನ ಬಿ.ಕಾಂ,ಹಾಗೂ ಬಿ.ಎ.ತರಗತಿಗಳಿಗೆ ದಾಖಲಾಗಿ ಆರಂಭಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ತರಗತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ (7760421005), ಕಾರ್ಯದರ್ಶಿ (9448125133)ಯವರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here