ನೆಲ್ಯಾಡಿ: ಪಿಕಪ್ ಹಾಗೂ ಕಂಟೈನರ್ ಈಚರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಪಿಕಪ್ ವಾಹನ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಎ.20ರಂದು ಮಧ್ಯಾಹ್ನ ನಡೆದಿದೆ.
ಪಿಕಪ್ ವಾಹನ ಚಾಲಕ ಚೇತನ್ ಎಂಬವರು ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಅರೇಹಳ್ಳದ ಕೊಪ್ಪಲು ನಿವಾಸಿ ಲೋಕೇಶ್ ಎಸ್.,ಎಂಬವರು ಚೇತನ್‌ಕುಮಾರ್ ಚಾಲಕರಾಗಿರುವ ಪಿಕಪ್ ವಾಹನ (ಕೆಎ 31 ಎ 2153)ದಲ್ಲಿ ಹೊಳೆನರಸೀಪುರದಿಂದ ಎಳನೀರು ಲೋಡು ಮಾಡಿಕೊಂಡು ಮಂಗಳೂರು ಕಡೆಗೆ ಬಂದಿದ್ದು ಎ.20ರಂದು ಮಧ್ಯಾಹ್ನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಕಂಟೈನರ್ ಈಚರ್ ಲಾರಿ(ಕೆಎ02 ಎಹೆಚ್ 5126) ನಡುವೆ ಡಿಕ್ಕಿ ಸಂಭವಿಸಿದೆ. ಕಂಟೈನರ್ ಈಚರ್ ಲಾರಿ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಕಂಟೈನರ್ ಈಚರ್ ಲಾರಿಯನ್ನು ಚಲಾಯಿಸಿದ ಪರಿಣಾಮ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಪಿಕಪ್ ವಾಹನದ ಚಾಲಕ ಚೇತನ್ ಕುಮಾರ್‌ರವರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಲೋಕೇಶ್‌ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.