ಪುತ್ತೂರು: ನೈತ್ತಾಡಿ ಗೋಲೆಕ್ಸ್ ಫ್ಯಾಕ್ಟರಿ ಎದುರಿನ ಡಿಸಿಆರ್ ಕೇಂದ್ರದ ಸುಮಾರು ಎರಡು ಎಕ್ರೆ ಗೇರುತೋಟಕ್ಕೆ ಎ.23 ರಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಇಡೀ ಗುಡ್ಡವೇ ಹೊತ್ತಿ ಉರಿದಿದ್ದು ಅಲ್ಲದೆ ಬೆಂಕಿಯ ಕೆನ್ನಾಲಿಗೆಗೆ ದೊಡ್ಡ ಗಾತ್ರದ ಹೆಬ್ಬಾವೊಂದು ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.
ಮಧ್ಯಾಹ್ನದ ಹೊತ್ತಿಗೆ ಜೆ ಸಿ ಸಂಪನ್ಮೂಲ ವ್ಯಕ್ತಿ ಕೃಷ್ಣಮೋಹನ್ ರವರ ಪತ್ನಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಗೋಲೆಕ್ಸ್ ನಲ್ಲಿನ ಮನೆಗೆ ಹಿಂತಿರುಗುವಾಗ ಗುಡ್ಡಕ್ಕೆ ಬೆಂಕಿ ತಗುಲಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಅವರು ಪತಿ ಕೃಷ್ಣಮೋಹನ್ ರವರಿಗೆ ವಿಷಯ ತಿಳಿಸಿದರು. ಕೃಷ್ಣಮೋಹನ್ ರವರು ಡಿಸಿಆರ್ ಕೇಂದ್ರಕ್ಕೆ ಈ ಕುರಿತು ವಿಷಯ ಮುಟ್ಟಿಸಿ ಬಳಿಕ ಮೊಟ್ಟೆತ್ತಡ್ಕದಲ್ಲಿರುವ ಅಗ್ನಿಶಾಮಕ ದಳಕ್ಕೆ ತಿಳಿಸಿದರು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಸ್ಥಿಯನ್ನು ನಿಯಂತ್ರಣಕ್ಕೆ ತಂದರು. ಇದೇ ಸಂದರ್ಭದಲ್ಲಿ ಮಾರ್ಗದ ಮತ್ತೊಂದು ಬದಿಯ ಗುಡ್ಡಕ್ಕೂ ಬೆಂಕಿ ವ್ಯಾಪಿಸಿತ್ತು. ಬಿರು ಬಿಸಿಲ ಬೇಗೆಗೆ ಬೆಂಕಿ ಹತ್ತಿಕೊಂಡಿತ್ತಾ ಅಥವಾ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಬೆಂಕಿ ತಗುಲಿರಬಹುದೇ ಅಥವಾ ಯಾರೋ ಪಾದಚಾರಿಗಳು ಬೆಂಕಿ ಹಚ್ಚಿರಬಹುದೇ ಎಂಬುದಾಗಿ ಸ್ಥಳೀಯರು ಮಾತನಾಡಿಕೊಳುತ್ತಿದ್ದರು.