ಪುತ್ತೂರು: ವಿಶ್ವಗುರು , ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಬಿಜೆಪಿಯಿಂದ ಪದೇ ಪದೇ ಅಪಮಾನ ನಡೆಯುತ್ತಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಆರೋಪಿಸಿದರು.
ಗಡಿಯಾರದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಿದ್ದು ಮಾತ್ರವಲ್ಲದೆ ಗಣರಾಜ್ಯೋತ್ಸವ ದಿನದಂದು ನಾರಾಯಣ ಗುರುಗಳ ಟ್ಯಾಬ್ಲೋ ಅಳವಡಿಗೆ ಬಿಜೆಪಿ ಸರಕಾರ ಅವಕಾಶ ನೀಡದೇ ಇರುವುದು ಗುರುಗಳಿಗೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಹೇಳಿದರು.
ನಾರಾಯಣ ಗುರುಗಳ ಸಂದೇಶ ಇಂದು ವಿಶ್ವದಾದ್ಯಂತ ಪ್ರಚಾರದಲ್ಲಿದೆ ಮತ್ತು ಎಲ್ಲಾ ಧರ್ಮದವರೂ ಅವರನ್ನು ಭಾರೀ ಗೌರವದಿಂದ ಕಾಣುತ್ತಿದ್ದಾರೆ. ವಿಶ್ವಗುರು ಎಂದೇ ವಿಶ್ವ ವಿಖ್ಯಾತಿ ಪಡೆದಿರುವ ನಾರಾಯಣ ಗುರುಗಳು ಅಸ್ಪೃಶ್ಯತಾ ನಿವಾರಣೆಗಾಗಿ ದೇವಸ್ಥಾನವನ್ನೇ ನಿರ್ಮಾಣ ಮಾಡುವ ಮೂಲಕ ಹೊಸ ಕ್ರಾಂತಿಗೆ ಕಾರಣರಾಗಿದ್ದರು. ಇವರ ಇದೇ ತತ್ವವನ್ನು ಬೆಂಬಲಿಸುವ ಉದ್ದೇಶದಿಂದ ಅಂದಿನ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಕಾಂಗ್ರೆಸ್ ಸರಕಾರ ದೇಶದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾನೂನನ್ನೇ ಜಾರಿ ಮಾಡಿತ್ತು. ಇದೇ ನಾರಾಯಣ ಗುರುಗಳ ಪಠ್ಯವನ್ನು ಕಾಂಗ್ರೆಸ್ ಶಾಲಾ ಪಠ್ಯದಲ್ಲಿ ಸೇರಿಸಿತ್ತು ಆದರೆ ಬಿಜೆಪಿ ಸರಕಾರ ಅದನ್ನು ತೆಗೆದು ಹಾಕುವ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸಿಗೆ ಆಘಾತವನ್ನು ತಂದಿದೆ. ಕಳೆದ ಗಣರಾಜ್ಯೋತ್ಸವದಂದು ನಾರಾಯಣ ಗುರುಗಳ ಟ್ಯಾಬ್ಲೋ ಅಳವಡಿಕೆಗೆ ಕೇರಳ ಸರಕಾರ ಅನುಮತಿ ಕೇಳಿದರೂ ಕೇಂದ್ರದ ಬಿಜೆಪಿ ಸರಕಾರ ಅವಕಾಶ ನೀಡದೆ ಮಹಾನ್ ಮಾನವತಾವಾದಿಗೆ ಅಪಮಾನ ಮಾಡಿದೆ. ಕರಾವಳಿಯ ಶಾಸಕರು ಈ ವಿಚಾರದಲ್ಲಿ ಸರಕಾರವನ್ನು ಪ್ರಶ್ನಿಸದೇ ಇರುವುದು ಜನಪ್ರತಿನಿಧಿಗಳು ಅವರ ಅಭಿಮಾನಿಗಳಿಗೆ ಮಾಡಿದ ದ್ರೋಹವಾಗಿದೆ. ಮುಂದಿನ ದಿನಗಳಲ್ಲಿ ತಾನು ಶಾಸಕನಾದರೆ ಸರಕಾರದ ಮೇಲೆ ಒತ್ತಡ ತಂದು ನಾರಾಯಣ ಗುರುಗಳ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸುವಲ್ಲಿ ಹೋರಾಟವನ್ನೇ ಮಾಡಲಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.