ಶಾಸಕನಾದರೆ ವೇತನ ಸಹಿತ ಎಲ್ಲಾ ಭತ್ಯೆಯನ್ನು ಸಮಾಜ ಸೇವೆಗೆ ಬಳಕೆ; ಅಶೋಕ್ ರೈ
ಪುತ್ತೂರು: ಪುತ್ತೂರಿನ ಜನತೆಯ ಆಶೀರ್ವಾದದಿಂದ ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾದಲ್ಲಿ ಶಾಸಕನಾದವನಿಗೆ ಸಿಗುವ ಸರಕರಿ ವೇತನ ಹಾಗೂ ಎಲ್ಲಾ ಭತ್ಯೆಯನ್ನು ತಾನು ಸಮಾಜ ಸೇವೆಗೆ ಬಳಸುತ್ತೇನೆ, ಜನರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದರಿಂದ ನನಗೆ ಸಿಗುವ ಆ ಮೊತ್ತವನ್ನು ಜನರಿಗೆ ಬಳಸುತ್ತೇನೆ, ಬಡವರಿಗಾಗಿಯೇ ಖರ್ಚು ಮಾಡುತ್ತೇನೆ ಅದರಲ್ಲಿ ಒಂದು ರುಪಾಯಿಯನ್ನೂ ತನ್ನ ಸ್ವಂತ ಬಳಕೆಗೆ ಬಳಸುವುದೇ ಇಲ್ಲ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಪೆರ್ನೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ದುಡ್ಡು ಮಾಡುವುದಕ್ಕೆ ರಾಜಕೀಯ ಬಂದಿಲ್ಲ ಎಂದು ಈ ಮೊದಲೇ ಹೇಳಿದ್ದೆ. ದೇವರು ನನಗೆ ಬದುಕು ಸಾಗಿಸುವಷ್ಟ ಸಂಪತ್ತನ್ನು ಕೊಟ್ಟಿದ್ದಾನೆ. ಕಳೆದ ೧೨ ವರ್ಷಗಳಿಂದ ನಾನು ದುಡಿದ ಹಣದಿಂದ ಒಂದು ಪಾಲು ಬಡವರಿಗೆ ನೀಡುತ್ತಾ ಬಂದಿದ್ದೇನೆ. ಪುತ್ತೂರಿನ ಕ್ಷೇತ್ರದ ಜನರ ಸೇವೆ ಮಾಡಲು ನನಗೆ ಪುತ್ತೂರಿನವರೇ ಆಶೀರ್ವಾದ ಮಾಡಬೇಕಿದೆ, ಆಶೀರ್ವಾದ ಮಾಡಿ ಇನ್ನಷ್ಟು ಶಕ್ತಿಯುತವಾಗಿ ಸಮಾಜ ಸೇವೆಯನ್ನು ಮಾಡುವುದಾಗಿ ಘೋಷಣೆ ಮಾಡಿದರು.
ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದು ಜನರಿಗೆ ಅರಿವಾಗಿದೆ. ಬೆಲೆ ಏರಿಕೆಯ ಕಾರಣಕ್ಕೆ ಜನ ನೊಂದಿದ್ದಾರೆ. ಪ್ರಚಾರಕ್ಕೆ ಹೋದಕಡೆಯೆಲ್ಲಾ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ಜನ ತನ್ನ ಮುಂದೆ ಬರುತ್ತಿದ್ದಾರೆ. ಎಲ್ಲಾ ಕಡೆ ಸಮಸ್ಯೆ ಇದೆ ಸಮಸ್ಯೆಗೆ ಪರಿಹಾರ ಕಾಂಗ್ರೆಸ್ ಮಾತ್ರ ಎಂದು ಹೇಳಿದರು.
ತಾನು ಗೆದ್ದು ಶಾಕನಾದಲ್ಲಿ ಅಶೋಕ್ ರೈಯವರನ್ನು ಸಂಪರ್ಕಿಸುವುದು ಕಷ್ಟ ಎಂದು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ತಾನು ಹಿಂದೆ ಯಾವ ರೀತಿಯಲ್ಲಿ ಜನರಿಗೆ ಸಿಗುತ್ತಿದ್ದೆನೋ ಅದಕ್ಕಿಂತ ಸುಲಭದಲ್ಲಿ ನಾನು ನಿಮ್ಮ ಕೈಗೆ ಸಿಗಲಿದ್ದೇನೆ ಯಾವುದೇ ತಪ್ಪು ಬಾವನೆ ಬೇಡ ಎಂದು ಜನರಿಗೆ ತಿಳಿಸಿದರು. ತನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರವನ್ನು ಮಾಡುವ ಒಂದು ತಂಡವೇ ಪುತ್ತೂರಿನಲ್ಲಿದೆ ನಾನು ಇದುವರೆಗೆ ಯರಿಗೂ ದುಡ್ಡು ಹಿಡಿಸಿಲ್ಲ, ಯಾರಿಂದಲೂ ನಯಾ ಪೈಸೆ ಡೊನೇಶನ್ ಕೇಳಿಲ್ಲ, ಯಾರಿಂದಲೂ ಡೊನೇಶನ್ ಪಡೆದು ಬಡವರಿಗೆ ಹಂಚಿಲ್ಲ ಅಂಥ ಪರಿಸ್ತಿತಿ ನನಗೆ ಬಂದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಬಿಜೆಪಿ ಕಾರ್ಯಕರ್ತರಿಂದಲೂ ಭೇಟಿ
ಪುತ್ತೂರಿನ ವಿವಿಧ ಕಡೆಗಳಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರು ನನ್ನನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ನಮ್ಮದೇ ಶಾಸಕರಿದ್ದರೂ ನಾವಬು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಮ್ಮ ಅಕ್ರಮ ಸಕ್ರಮ ಫೈಲನ್ನು ವಿಲೇವಾರಿ ಮಾಡಿಲ್ಲ, ನಮ್ಮದೇ ಸರಕಾರ ಇದ್ದರೂ ನಮಗೆ ಬೆಲೆಯೇ ಇರಲಿಲ್ಲ ಈ ಬಾರಿ ನಿಮಗೆ ಬೆಂಬಲ ನೀಡುತ್ತೇವೆ ನೀವು ಜಾತಿ, ಮತ, ಪಕ್ಷ ಬೇಧವಿಲ್ಲದೆ ಎಲ್ಲರಿಗೂ ನೆರವಾಗಬೇಕು, ಭೃಷ್ಟಾಚಾರ ಮುಕ್ತ ಪುತ್ತೂರಾಗಿ ಪರಿವರ್ತನೆ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಅಶೋಕ್ ರೈ. ತಾನು ನೊಂದವರಿಗೆ ಬಡವರಿಗೆ ಜಾತಿ, ಮತ ಬೇಧವಿಲ್ಲದೆ ಎಲ್ಲರಿಗೂ ನೆರವು ನೀಡಲಿದ್ದೇನೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಕಳ್ಳ ಹಿಂದುತ್ವ ಒಡೆದಿದೆ ನಮ್ಮದೇ ನೈಜ ಹಿಂದುತ್ವ: ಶಕುಂತಳಾ ಶೆಟ್ಟಿ
ಮೊನ್ನೆಯವರೆಗೂ ಭುಜದ ಮೇಲೆ ಕೈ ಇಟ್ಟು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದವರು, ಹೋರಾಟ ಮಾಡುತ್ತಿದ್ದವರು, ಬೆಂಕಿ ಹಚ್ಚುವ ಪ್ಲಾನ್ ಮಾಡಿಕೊಂಡಿದ್ದವರು ಇಂದು ಪರಸ್ಪರ ಕಳ್ಳತನದ ಆರೋಪ ಹೊರಿಸಿ ಹಿಂದುತ್ವದ ಹೆಸರಲ್ಲಿ ಒಡೆದು ಹೋಗಿದ್ದಾರೆ. ನಮ್ಮದು ನಿಜವಾದ ಹಿಂದುತ್ವ ನಿಮ್ಮದಲ್ಲ ಎಂದು ಬಹಿರಂಗವಾಗಿ ಕೆಸರೆರಚಾಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ನ ಹಿಂದುತ್ವವೇ ನೈಜ ಹಿಂದುತ್ವ ಎಂಬುದು ಜನರಿಗೆ ಅರಿವಾಗಿದೆ ಎಂದು ಹೇಳಿದರು.
ಎಲ್ಲರನ್ನೂ ಒಗ್ಗೂಡಿಸಿ ಪರಸ್ಪರ ಸಹೋದರರಂತೆ ಬಾಳುವುದೇ ಹಿಂದುತ್ವ ಎಂದು ನಾವು ಹೇಳುತ್ತಲೇ ಬಂದಿದ್ದೇವೆ ನಾವು ಹೇಳಿದ್ದು ಇಂದು ಸತ್ಯವಾಗಿದೆ ಎಂದು ಜನತೆಗೆ ಗೊತ್ತಾಗಿದೆ. ಈ ಬರಿ ಪುತ್ತೂರಿನಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಸಮರ್ಥ ಅಭ್ಯರ್ಥಿಯನ್ನೇ ಇಂದು ಪಕ್ಷ ನೀಡಿದೆ ಅತ್ಯಧಿಕ ಬಹುಮತದಿಂದ ಅವರನ್ನು ಗೆಲ್ಲಿಸುವ ಮೂಲಕ ಪುತ್ತೂರಿನ ಅಭಿವೃದ್ದಿಗೆ ಚಾಲನೆ ನೀಡಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡೆ ಪ್ರತಿಬಾಕುಲಾಯಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ನಝೀರ್ ಮಠ, ಎಂ ಎಸ್ ಮಹಮ್ಮದ್ ಸೇರಿದಂತೆ ಅನೇಕ ಮಂದಿ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.