ಪುತ್ತೂರು- ಉಪ್ಪಿನಂಗಡಿ ಬೇರೆಯವರ ಪಾಲಾಗುವ ಮುನ್ನ ಎಚ್ಚೆತ್ತುಕೊಳ್ಳೋಣ :ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಅಮ್ರತ ಶೆಣೈ

0

ಉಪ್ಪಿನಂಗಡಿ: ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಬಡವರ ಉದ್ಧಾರವಾಗಿಲ್ಲ. ಬದಲಾಗಿ ಆಗರ್ಭ ಶ್ರೀಮಂತರಾದ ಅದಾನಿ ಮತ್ತು ಅಂಬಾನಿ ಮಾತ್ರ. ಈಗಾಗಲೇ ಈ ದೇಶದ ರೈಲ್ವೆ ನಿಲ್ದಾಣಗಳು, ಏರ್‌ಪೋರ್ಟ್‌ಗಳು, ಎಲ್‌ಐಸಿ ಸಂಸ್ಥೆ ಸೇರಿದಂತೆ ಹತ್ತು ಹಲವು ಸಾರ್ವಜನಿಕ ಸೊತ್ತುಗಳು ಅವರ ಪಾಲಾಗಿವೆ. ಮುಂದೆಯೂ ಬಿಜೆಪಿಗೆ ಅಧಿಕಾರ ಕೊಟ್ಟಲ್ಲಿ ಪುತ್ತೂರು, ಉಪ್ಪಿನಂಗಡಿಯೂ ಅದಾನಿ, ಅಂಬಾನಿಗಳ ಕೈಗೆ ಹೋಗಬಹುದು. ಆದ್ದರಿಂದ ಜನತೆ ಎಚ್ಚೆತ್ತುಕೊಂಡು ಮತದಾನ ಮಾಡುವ ಮೂಲಕ ದೇಶದ ಬಡ ಜನರ ಏಳಿಗೆಯ ಬಗ್ಗೆ ಚಿಂತನೆಯಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ವಕ್ತಾರ ಅಮ್ರತ ಶೆಣೈ ಹೇಳಿದರು.


ಉಪ್ಪಿನಂಗಡಿಯ ಹಳೆಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ಪರವಾಗಿ ಭಾನುವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಬೆಲೆಯೇರಿಕೆ ಸಮಸ್ಯೆಯಿಂದಾಗಿ ಬಡ ಜನರ ಬದುಕು ತತ್ತರಿಸಿ ಹೋಗಿದ್ದು, ಬಡವರು ಇನ್ನಷ್ಟು ಕುಸಿತ ಕಂಡರೆ, ಅದಾನಿ ಮತ್ತು ಅಂಬಾನಿಯಂತವರು ದಿನೇ ದಿನೇ ಶ್ರೀಮಂತರಾಗುತ್ತಾ ಹೋಗಿದ್ದಾರೆ. ಬಿಜೆಪಿಯು ಸುಳ್ಳನ್ನು ಉತ್ಪಾದಿಸುವ ಫ್ಯಾಕ್ಟರಿಯಾಗಿದ್ದು, ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ರೂಪಿಸುತ್ತಾರೆ. ಮೋದಿ ಹಾಗೂ ಅಮಿತ್ ಶಾ ಅವರು ಸೇರಿಕೊಂಡು ಈ ದೇಶವನ್ನು ಲೂಟಿ ಹೊಡೆದಿದ್ದು, ಅವರು ಈ ದೇಶಕ್ಕೆ ಕೊರೋನಾಕ್ಕಿಂತಲೂ ಮಾರಕ. ಆದ್ದರಿಂದ ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲಿಸಬೇಕು ಎಂದರು.


ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿ, ಉತ್ತಮ ಪರಿಕಲ್ಪನೆಯಿದ್ದಾಗ ಮಾತ್ರ ಉತ್ತಮ ಅಭಿವೃದ್ಧಿ ಸಾಧ್ಯ. ಆದರೆ ಬಿಜೆಪಿಗೆ ಅಂತಹ ಅಭಿವೃದ್ಧಿಯ ಪರಿಕಲ್ಪನೆನೇ ಇಲ್ಲ. ಉಪ್ಪಿನಂಗಡಿಯನ್ನು ಪ್ರವಾಸೋದ್ಯಮ ಕೇಂದ್ರ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿ ಶಾಸಕರು ಅದನ್ನು ಪ್ರವಾಸೋದ್ಯಮ ಕೇಂದ್ರ ಬಿಡಿ. ಅಲ್ಲಿ ಒಂದು ಕಟ್ಟ ಕಟ್ಟಿಯೂ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಉಪ್ಪಿನಂಗಡಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದು, ಇಲ್ಲಿ ಈಗಲೂ ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲ. ಪುತ್ತೂರು ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿಲ್ಲ. ಇದ್ದ ಸರಕಾರಿ ಆಸ್ಪತ್ರೆ, ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದೆ. ಬಿಜೆಪಿಯು 40 ಶೇ. ಕಮಿಷನ್ ಸಿಗುವ ಕಟ್ಟಡವನ್ನು ಕಟ್ಟೋಕೆ ಮಾತ್ರ ಆದ್ಯತೆ ನೀಡಿದೆ. ಆ ಕಟ್ಟಡದಿಂದ ಜನರಿಗೆ ಉಪಯೋಗವಾಗುವ ಯಾವ ಕೆಲಸಗಳೂ ನಡೆದಿಲ್ಲ. ಸರಕಾರಿ ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿದ್ದು, 94ಸಿ, ಅಕ್ರಮ – ಸಕ್ರಮ ಕಡತಗಳು ಮೂವ್ ಆಗಲು ಲಕ್ಷ ಲಕ್ಷ ಲಂಚ ಕೊಡಬೇಕಾದ ಸ್ಥಿತಿ ಇದೆ. ಆದ್ದರಿಂದ ಈ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಹಾಗೂ ಸಮಾಜ ಸೇವೆಯ ಮೂಲಕ ಜನರಿಗೆ ನೆರವಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಈಗಾಗಲೇ 1200 ಮುಸ್ಲಿಂ ಕುಟುಂಬಗಳು ಸೇರಿದಂತೆ 22 ಸಾವಿರ ಕುಟುಂಬಗಳಿಗೆ ನೆರವಾಗಿದ್ದು, ಎಲ್ಲಿಯೂ ಜಾತಿ, ಧರ್ಮ ನೋಡಿಲ್ಲ. ನನಗೂ ಬಡತನದ ಕಷ್ಟ ಗೊತ್ತಿದ್ದು, ಎಲ್ಲರೂ ಮನುಷ್ಯರು ಎಂಬ ಭಾವನೆಯಿಂದ ನೆರವಾಗಿದ್ದೇನೆ. ಉತ್ತಮ ಅಭಿವೃದ್ಧಿಯ ಕಲ್ಪನೆ ನನ್ನಲ್ಲಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶವನ್ನು ನನಗೆ ಈ ಬಾರಿ ನೀಡಿ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ, ಧರ್ಮಾಧಾರಿತ ತಾರತಮ್ಯ ಮಾಡದೆ ಧರ್ಮದ ಹಾದಿಯಲ್ಲಿ ಮುನ್ನಡೆಯುವ ಮೂಲಕ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಅಂದು ನಳಿನ್ ಹೇಳಿದ್ದರು. ನಾವು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು. ಆದರೆ 2023ರಲ್ಲಿ ಬಿಜೆಪಿಯ ಎಲ್ಲರೂ ಬೇಸತ್ತು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಬಿಜೆಪಿ ಮುಕ್ತ ಮಾಡಿ ಎಲ್ಲರೂ ಕಾಂಗ್ರೆಸ್‌ಗೆ ಬರುವ ಕಾಲ ಸನ್ನಿಹಿತವಾದಂತಿದೆ. ಕಾಂಗ್ರೆಸ್ ಪಕ್ಷವು ಬಡವರ ಪಕ್ಷವಾಗಿದ್ದು, ಇಂದು ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಎಂದು ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷವೇ ಅಂದು ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರ ಪಂಪ್ ಶೆಡ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು ಎನ್ನುವುದನ್ನು ಪ್ರತಿಯೋರ್ವರು ನೆನಪಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಜಾತ್ಯಾತೀತ ಸಿದ್ಧಾಂತದ ಪಕ್ಷವಾಗಿದ್ದು, ಆರೋಗ್ಯ, ಶಿಕ್ಷಣ, ಭೂಮಿಯನ್ನು ಈ ದೇಶದ ಜನತೆಗೆ ನೀಡಿದೆ. ಆದ್ದರಿಂದ ಬಿಜೆಪಿಯ ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡದೇ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕಾಗಿದೆ. ಅದಕ್ಕಾಗಿ ಈ ಕ್ಷೇತ್ರದ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರನ್ನು ನಾವೆಲ್ಲರೂ ಗೆಲ್ಲಿಸಬೇಕಾಗಿದೆ ಎಂದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಬಿಜೆಪಿಯು ಧರ್ಮಾಧಾರಿತವಾಗಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಆದ್ದರಿಂದ ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎಂಬ ಸಮಾನತೆಯ ಸಿದ್ಧಾಂತದಡಿ ಮುಂದುವರಿಯುವ ಕಾಂಗ್ರೆಸ್ ಪಕ್ಷವು ಇಂದು ದೇಶಕ್ಕೆ ಹಾಗೂ ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದರು.


ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್, ಮುಖಂಡರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬಿಜೆಪಿಯ ಜನವಿರೋಧಿ ನೀತಿ, ಭ್ರಷ್ಟಾಚಾರದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.


ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಯೂತ್ ಕಾಂಗ್ರೆಸ್‌ನ ಫಾರೂಕ್ ಪೆರ್ನೆ, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಕಾಂಗ್ರೆಸ್ ಮುಖಂಡರಾದ ಡಾ. ರಘು, ಸೋಮನಾಥ, ನೂರುದ್ದೀನ್ ಸಾಲ್ಮರ, ಫಝಲ್ ರಹೀಂ, ವಿಜಯಕುಮಾರ್ ಸೊರಕೆ, ವೇದವ್ಯಾಸ ಕಾಮತ್, ಸಿದ್ದೀಕ್ ಕೆಂಪಿ, ಯು.ಟಿ. ತೌಸೀಫ್, ಚಂದ್ರಹಾಸ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ಅಯೂಬ್, ಅಶ್ರಫ್ ಬಸ್ತಿಕ್ಕಾರ್, ಚಂದ್ರಹಾಸ ಶೆಟ್ಟಿ, ಇಸಾಕ್ ಸಾಲ್ಮರ, ಮಹೇಶ್ ಅಂಕೊಂತ್ತಿಮಾರ್, ಹನೀಫ್ ಪೆರ್ನೆ, ಆಚಿ ಕೆಂಪಿ, ಶಾಂಭವಿ ರೈ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರಾದ ಕೃಷ್ಣರಾವ್ ಆರ್ತಿಲ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಕೆ. ವಂದಿಸಿದರು. ನಝೀರ್ ಮಠ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here