ಪರ್ಸಂಟೇಜ್ ವಿಚಾರ: ಇಂಜಿನಿಯರ್ ಕಿರುಕುಳ – ದ.ಕ.ಜಿಲ್ಲೆಯ ಗುತ್ತಿಗೆದಾರನಿಂದಲೂ ಪ್ರಧಾನಿಗೆ ದೂರು

0
  • ಟೆಂಡರ್‌ನಲ್ಲಿ ಭಾಗವಹಿಸದಂತೆ ಬೆದರಿಕೆ
  • ಶಾಸಕರಿಂದ ಪತ್ರ ಪಡೆದು ಇಲಾಖೆಗೆ ನೀಡಿ ಟೆಂಡರ್ ಹಿಂಪಡೆಯಲು ಬೆದರಿಕೆ
  • ಪರ್ಸಂಟೇಜ್ ವಿಚಾರದಲ್ಲಿ ಬೇರೆ ಗುತ್ತಿಗೆದಾರರಿಗೂ ತೊಂದರೆ
  • ಜೆಇಯವರಿಂದ ಪುತ್ತೂರು,ಮೈಸೂರು, ಮಂಗಳೂರುನಲ್ಲಿ ನೂರಾರು ಕೋಟಿಯ ಬೇನಾಮಿ ಸ್ಥಿರಾಸ್ತಿ
  • ಮುಂಬರುವ ಸರಕಾರದಿಂದಾದರೂ ನ್ಯಾಯ, ಪರಿಹಾರದ ನಿರೀಕ್ಷೆಯಲ್ಲಿ ಗುತ್ತಿಗೆದಾರ

ಪುತ್ತೂರು: ಪರ್ಸಂಟೇಜ್ ನೀಡದ್ದಕ್ಕೆ ತೊಂದರೆ ನೀಡುತ್ತಿರುವ ಕುರಿತು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ದೂರು ನೀಡಿರುವ ಬೆನ್ನಲ್ಲೇ ಇದೀಗ ದ.ಕ.ಜಿಲ್ಲೆಯ ಓರ್ವ ಗುತ್ತಿಗೆದಾರರೂ ಪ್ರಧಾನಿ ಮೋದಿಯವರಿಗೆ ದೂರು ನೀಡಿ, ಪರ್ಸಂಟೇಜ್ ವಿಚಾರದಲ್ಲಿ ಜೂನಿಯರ್ ಇಂಜಿನಿಯರ್ ಓರ್ವರು ಟೆಂಡರ್‌ನಲ್ಲಿ ಭಾಗವಹಿಸದಂತೆ ಬೆದರಿಕೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ಜನಪ್ರತಿನಿಧಿಗಳಿಗೆ ತನ್ನ ಬಗ್ಗೆ ತಪ್ಪು ಮಾಹಿತಿ ನೀಡಿ ಟೆಂಡರ್ ರದ್ದುಪಡಿಸುವಂತೆ ಶಾಸಕರಿಂದ ಪತ್ರವನ್ನು ತೆಗೆದು ನೀಡಿರುವುದಾಗಿ ಮತ್ತು ಟೆಂಡರ್ ಹಿಂಪಡೆಯುವಂತೆ ತನಗೆ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿಸಿ ಬೆಳ್ತಂಗಡಿಯ ಪಿಡಬ್ಲ್ಯೂಡಿ ಗುತ್ತಿಗೆದಾರ ಕೆ.ಎಂ.ನಾಗೇಶ್ ಕುಮಾರ್ ಎಂಬವರು ಮಂಗಳೂರು ಯೋಜನಾ ಉಪವಿಭಾಗದ ಜೆಇ ಉದಯ ಕುಮಾರ್ ಎಂಬವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ್ದಾರೆ.ಆಪಾದಿತ ಜೆಇಯವರು ವಿವಿಧ ಕಡೆಗಳಲ್ಲಿ ಬೇನಾಮಿ ಆಸ್ತಿ ಮಾಡಿರುವುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ವಿವರ: “ನಾನು ಟೆಂಡರ್‌ನಲ್ಲಿ ಭಾಗವಹಿಸಬೇಕಾದರೆ ಟೆಂಡರ್ ಮೊತ್ತದ 5ಶೇ.ಹಣವನ್ನು ಮುಂಚಿತವಾಗಿ ನೀಡಬೇಕು. ಇಲ್ಲದಿದ್ದಲ್ಲಿ ಟೆಂಡರ್‌ನಲ್ಲಿ ಭಾಗವಹಿಸದಂತೆ ನನಗೆ ತಾಕೀತು ಮಾಡಿದ್ದರು. ಕಾಮಗಾರಿ ನನ್ನ ಕೈಯಲ್ಲಿ ಇಲ್ಲದೆ ಇರುವುದರಿಂದ ನನ್ನ ಬಿಡ್ಡ್ ಕೆಪ್ಯಾಸಿಟಿಗೆ ಅನುಗುಣವಾಗಿ ಟೆಂಡರ್ ಸಲ್ಲಿಸಿದರೆ ಫೋನ್ ಮುಖಾಂತರ ನನಗೆ ಧಮ್ಕಿ ಹಾಕಿ ಟೆಂಡರ್ ಹಿಂಪಡೆಯುವಂತೆ ಬೆದರಿಸಿ ರೌಡಿಗಳನ್ನು ಕಳುಹಿಸಿ ಮತ್ತು ಶಾಸಕರಿಗೆ ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ಮಂಗಳೂರು ಐಬಿ ಸರ್ಕ್ಯೂಟ್ ಹೌಸ್‌ಗೆ ನನ್ನನ್ನು ಬಲವಂತವಾಗಿ ಕರೆಯಿಸಿ ಶಾಸಕರ ಮುಂದೆ, ನನಗೆ ಬೇರೆ ಕೆಲಸ ಕೊಡುತ್ತೇನೆ ಎಂದು ನಂಬಿಸಿ ತದನಂತರ ನನ್ನ ಟೆಂಡರನ್ನು ರಿಜೆಕ್ಟ್ ಮಾಡುವಂತೆ ಲೆಟರ್ ನೀಡಬೇಕಾಗಿ ಹೇಳಿ ಟೆಂಡರನ್ನು ರಿಜೆಕ್ಟ್ ಮಾಡಿ ಬೇರೆಯವರಿಗೆ 5ಶೇ.ನೀಡಿದ ಗುತ್ತಿಗೆದಾರರಿಗೆ ನೀಡಲಾಯಿತು.ಮುಂದೆ ನನಗೆ ನೀಡಿದ ಟೆಂಡರ್‌ನಲ್ಲಿಯೂ(ಟೆಂಡರ್ ಇಂಡೆಂಟ್ ನಂ.KRRDA/2022-23/ WORK INDENT 5489,Package nm.KS 11-72)ಪರ್ಸಂಟೇಜ್ ವಿಚಾರವಾಗಿ ಟೆಂಡರ್‌ನಲ್ಲಿ ನಾನು L1 ಆಗಿದ್ದರೂ ಶಾಸಕರಲ್ಲಿ ಪತ್ರವನ್ನು ಪಡೆದು ತೆಗೆದು ಇಲಾಖೆಗೆ ನೀಡಿ, ನನಗೆ ದಮ್ಕಿ ಹಾಕಿ ಟೆಂಡರನ್ನು ಹಿಂಪಡೆಯುವಂತೆ ಬೆದರಿಸುತ್ತಿದ್ದಾರೆ. ಜೆಇ ಉದಯ ಕುಮಾರ್ ಅವರು ಈಗಾಗಲೇ ಹಲವು ಗುತ್ತಿಗೆದಾರರಿಗೆ ತೊಂದರೆಯನ್ನು ನೀಡಿದ್ದು ರಾಜ್ಯದ ಹಲವು ಕಡೆ ಮೈಸೂರು, ಪುತ್ತೂರು, ಮಂಗಳೂರುನಲ್ಲಿ ಬೇನಾಮಿ ಸ್ಥಿರಾಸ್ತಿಗಳನ್ನು ಮಾಡಿದ್ದು ಬಂಗಲೆ, ವಿಲ್ಲಾಗಳನ್ನು ಹೊಂದಿದ್ದು ಇದೇ ತರಹ ನೂರಾರು ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಗಳಿಸಿರುತ್ತಾರೆ. ಜೆಇ ಉದಯ ಕುಮಾರ್ ಒಪ್ಪಿಗೆ ಇಲ್ಲದೆ ಟೆಂಡರ್ ಹಾಕಿದರೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಬೆದರಿಸಿ ಟೆಂಡರನ್ನು ಹಿಂಪಡೆಯುವಂತೆ ಸೂಚಿಸಿರುತ್ತಾರೆ.ಎಲ್ಲಾ ಕಾಮಗಾರಿಗಳಲ್ಲಿ ಟೆಂಡರ್‌ಗಿಂತ ಮುಂಚಿತವಾಗಿ 5ಶೇ., ಸೈಟ್ ಹ್ಯಾಂಡೋವರ್‌ಗೆ 5ಶೇ.,ಕಾಮಗಾರಿ ಬಿಲ್ಲುಗಳಿಗೆ 5ಶೇ.ನೀಡಬೇಕಾಗಿ ಜೆಇಯೊಬ್ಬರು ಬೆದರಿಸಿ ತಾಕೀತು ಮಾಡಿದ್ದಾರೆ. ಇಂಥವರಿಂದ ಕಪ್ಪುಚುಕ್ಕೆಗಳು ಬರುತ್ತಿರುವುದರಿಂದ ಇವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಿ ವಿಚಾರಣೆಗೆ ಒಳಪಡಿಸಬೇಕಾಗಿ ತಮ್ಮಲ್ಲಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತಾ, ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ಪ್ರಾರ್ಥಿಸಿಕೊಳ್ಳುತ್ತೇನೆ, ಸತ್ಯಮೇವ ಜಯತೇ. ಈ ವಿಚಾರಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ನೀಡಲು ಬದ್ಧನಾಗಿರುತ್ತೇನೆ” ಎಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ ಗುತ್ತಿಗೆದಾರ ಕೆ.ಎಂ.ನಾಗೇಶ್ ಕುಮಾರ್ ಎಂಬವರು ಕಳೆದ ಸೆಪ್ಟೆಂಬರ್ 15ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದರು. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಹೆಚ್.ಎಂ.ನಾಗೇಶ್ ಕುಮಾರ್ ಅವರಿಗೆ ಈಗಾಗಲೇ ಸ್ವೀಕೃತಿ ಪತ್ರವೂ ಬಂದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಂದನಾ ಶರ್ಮ, ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ವಿಪಕ್ಷ ನಾಯಕ ಸಿದ್ಧರಾಮಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಲೋಕಾಯುಕ್ತ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ, ದ.ಕ.ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ದ.ಕ.ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಕಮೀಷನರ್, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು,ಬೆಳ್ತಂಗಡಿ ಸೇರಿದಂತೆ ಸಂಬಂಧಿಸಿದ ಇತರ 17 ಪ್ರಮುಖರಿಗೂ ದೂರಿನ ಪ್ರತಿಯನ್ನು ಕೆ.ಎಂ.ನಾಗೇಶ್ ಕುಮಾರ್ ಕಳುಹಿಸಿದ್ದಾರೆ.

ನ್ಯಾಯ ಮತ್ತು ಪರಿಹಾರದ ನಿರೀಕ್ಷೆಯಲ್ಲಿದ್ದೇನೆ

ಕಳೆದ ಸೆಪ್ಟೆಂಬರ್ 15ರಂದು ನಾನು ಪ್ರಧಾನಿಯವರಿಗೆ ದೂರು ನೀಡಿದ್ದರೂ ಇನ್ನೂ ಯಾವುದೇ ಸ್ಪಂದನೆ ದೊರೆಯಲಿಲ್ಲ.‌ ಮುಂದೆ ಬರುವ ಸರಕಾರವಾದರೂ ನನಗೆ ನ್ಯಾಯ ಮತ್ತು ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಗುತ್ತಿಗೆದಾರ ಕೆ.ಎಂ.ನಾಗೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here