ಕಡಬ: ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರೀಸರ್ಚ್ ಇನ್ಸ್ಟಿಟ್ಯೂಟ್(ಸಿಪಿಸಿಆರ್ಐ)ಕಿದು ನೆಟ್ಟಣ, ಬಿಳಿನೆಲೆ ಕೇಂದ್ರದಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ತಾಂತ್ರಿಕ ಅಧಿಕಾರಿ ಮನಮೋಹನ್ ಭಟ್ರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಇತ್ತೀಚೆಗೆ ಸದ್ರಿ ಕೇಂದ್ರದ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಸಿಪಿಸಿಆರ್ಐ ಕೇಂದ್ರದ ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ್ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಕೇಂದ್ರದ ಪ್ರಧಾನ ವಿಜ್ಞಾನಿಗಳಾದ ಡಾ. ನಿರಾಲ್, ಡಾ.ಸಂಶುದ್ದೀನ್ ಹಾಗೂ ಕಿದುನೆಟ್ಟಣ ಕೇಂದ್ರದ ಪ್ರಭಾರ ವಿಜ್ಞಾನಿಗಳಾದ ಡಾ.ದಿವಾಕರ್ ಅವರು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಡಾ.ಬಾಲಚಂದ್ರ ಹೆಬ್ಬಾರ್ ಹಾಗೂ ಹಿರಿಯ ಅಧಿಕಾರಿಗಳು ನಿವೃತ್ತರಾದ ಮನಮೋಹನ್ ಭಟ್ರವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಸನ್ಮಾನಿತರ ಪತ್ನಿ ವನಲಕ್ಷ್ಮಿಯವರು ಉಪಸ್ಥಿತರಿದ್ದರು.
ಹಿತೈಷಿಗಳು ಹಾಗೂ ಸಹೋದ್ಯೋಗಿಗಳ ಪರವಾಗಿ ಡಾ.ಎಸ್.ಎಂ.ಹೆಗ್ಡೆ, ಬಿ.ಗೋಪಾಲಕೃಷ್ಣ ಭಟ್, ಎಂ.ಸತೀಶ ಭಟ್, ಪ್ರಮೋದ್, ಅಜಿತ್ ಕುಮಾರ್, ಪಿ.ನಾರಾಯಣ ನಾಯಕ್, ವಿಶ್ವನಾಥ ರೈ ಹಾಗೂ ಇತರರು ಶುಭಾಶಂಸನೆಗೈದು ನಿವೃತ್ತರ ಮುಂದಿನ ಜೀವನ ಸುಖಮಯ ವಾಗಿರಲೆಂದು ಹಾರೈಸಿದರು. ಮನಮೋಹನ್ ಭಟ್ರವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ತಾಂತ್ರಿಕ ಅಧಿಕಾರಿ ಎಂ.ನಾರಾಯಣ ನಾಯಕ್ರವರು ಸ್ವಾಗತಿಸಿದರು. ಸಹೋದ್ಯೋಗಿ ಜತ್ತಪ್ಪ ಅವರು ವಂದಿಸಿದರು. ಸಹೋದ್ಯೋಗಿಗಳಾದ ಸಹನಾ ಮತ್ತು ರಕ್ಷಿತಾ ಪ್ರಾರ್ಥಿಸಿದರು. ನಿವೃತ್ತರಾದ ಮನಮೋಹನ್ ಭಟ್ರವರ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.