ದ.ಕ.ಜಿಲ್ಲೆಯ ವಿವಿಧೆಡೆ ಸರಕಾರಿ ಶಾಲೆಗಳಿಂದ ಬ್ಯಾಟರಿ ಕಳವು ಪ್ರಕರಣ- ಕಡಬದ ನಾಲ್ವರು ಯುವಕರ ಬಂಧನ

0
  • ಧರ್ಮಸ್ಥಳ ಠಾಣೆ ಪೊಲೀಸರ ಕಾರ್ಯಾಚರಣೆ
  • 2 ಲಕ್ಷ ರೂ.ಮೌಲ್ಯದ ಬ್ಯಾಟರಿ ವಶ
  • ಕಾರು ಸಹಿತ ಕೃತ್ಯಕ್ಕೆ ಬಳಸುತ್ತಿದ್ದ ಸೊತ್ತುಗಳೂ ವಶ

ನೆಲ್ಯಾಡಿ: ದ.ಕ.ಜಿಲ್ಲೆಯ ವಿವಿಧೆಡೆಯ ಸರಕಾರಿ ಪ್ರೌಢ ಶಾಲೆಗಳಿಂದ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪದಲ್ಲಿ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಾಲ್ವರು ಯುವಕರನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ದೋಲ ಮನೆ ನಿವಾಸಿ ಹೊನ್ನಪ್ಪ ಗೌಡರವರ ಪುತ್ರ ರಕ್ಷಿತ್ ಡಿ.,(24ವ.), ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಧರ್ಣಪ್ಪ ಗೌಡರವರ ಪುತ್ರ ತೀರ್ಥೇಶ್ ಎಂ.,(29 ವ.), ಕುಟ್ರುಪ್ಪಾಡಿ ಗ್ರಾಮದ ಉರುಂಬಿ ನಿವಾಸಿ ಕುಶಾಲಪ್ಪ ಗೌಡರ ಪುತ್ರ ಯಜ್ಞೇಶ್ ಯು.ಕೆ(30ವ.) ಹಾಗೂ ಕುಟ್ರುಪ್ಪಾಡಿ ಗ್ರಾಮದ ಹಳ್ಳಿಮನೆ ವಿಶ್ವನಾಥ ಶೆಟ್ಟಿಯವರ ಪುತ್ರ ರೋಹಿತ್ ಹೆಚ್.ಶೆಟ್ಟಿ (23ವ.)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳವುಗೈದ ಬ್ಯಾಟರಿ, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಸಹಿತ ಸುಮಾರು 3 ಲಕ್ಷ ರೂ.ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆ: ಮಾ.27ರಂದು ಸಂಜೆ 5 ಗಂಟೆಯಿಂದ 28ರ ಬೆಳಿಗ್ಗೆ 9 ಗಂಟೆಯ ಮಧ್ಯದ ಅವಽಯಲ್ಲಿ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಸ್ಟಾಕ್ ರೂಮ್ ಬಾಗಿಲು ದೂಡಿ ತೆರೆದು ಅದರೊಳಗಿದ್ದ ಸುಮಾರು 32 ಸಾವಿರ ರೂ.ಮೌಲ್ಯದ 8 ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕೊಕ್ಕಡ ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಕೇರಿ ಪ್ರಭಾಕರ ನಾಯ್ಕರವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 457. 380 ಭಾ.ದಂ.ಸಂ.ನಂತೆ ಪ್ರಕರಣದ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐಗಳಾದ ಅನೀಲ ಕುಮಾರ ಡಿ.,(ಕಾ.ಸು.), ರೇಣುಕ (ತನಿಖೆ)ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ರಾಜೇಶ್, ಪ್ರಶಾಂತ, ಸತೀಶ ನಾಯ್ಕ ಜಿ., ಲಾರೆನ್ಸ್ ಪಿ.ಆರ್, ಕೃಷ್ಣಪ್ಪ, ಶೇಖರ ಗೌಡ, ಮಂಜುನಾಥ, ಪ್ರಮೋದಿನಿ, ಕಾನ್‌ಸ್ಟೇಬಲ್‌ಗಳಾದ ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ್, ಮಹಿಳಾ ಕಾನ್‌ಸ್ಟೇಬಲ್ ರಾಧಾ ಕೋಟಿನ್, ವಾಹನ ಚಾಲಕ ಲೋಕೇಶ್‌ರವರು ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ.

9 ಶಾಲೆಗಳಿಂದ ಕಳವು: ವಿಚಾರಣೆ ವೇಳೆ ಬಂಧಿತ ಆರೋಪಿಗಳು ದ.ಕ.ಜಿಲ್ಲೆಯ ಸುಮಾರು 9 ಸರಕಾರಿ ಪ್ರೌಢಶಾಲೆಗಳಿಂದ ಸುಮಾರು 2 ಲಕ್ಷ ರೂ.ಮೌಲ್ಯದ ಬ್ಯಾಟರಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಸರಕಾರಿ ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆಯಿಂದ, ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆ ಸೇರಿದಂತೆ ದ.ಕ ಜಿಲ್ಲೆಯ 9 ಸರಕಾರಿ ಪ್ರೌಢಶಾಲೆಗಳಿಂದ ಕಳವು ಮಾಡಿದ ಸುಮಾರು 2 ಲಕ್ಷ ರೂ., ಮೌಲ್ಯದ ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 1 ಲಕ್ಷ ರೂ., ಮೌಲ್ಯದ ಕೆಎ19 ಪಿ-2483 ನೇ ನೋಂದಣಿ ಸಂಖ್ಯೆಯ ಮಾರುತಿ ಆಲ್ಟೋ ಕಾರು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುಮಾರು ಎರಡೂವರೆ ಅಡಿ ಉದ್ದದ ಕಬ್ಬಿಣದ ಲಿವರ್ ಒಂದು, ಕೆಂಪು ಬಣ್ಣದ ಪ್ಲಾಸ್ಟಿಕ್ಡಿಯ ಕವರ್ ಇರುವ ಕಟಿಂಗ್‌ಪ್ಲೈಯರ್ ಒಂದು, ಮಾಸಲು ಹಳದಿ ಬಣ್ಣದ ಹಿಡಿ ಇರುವ ಸುಮಾರು 11 ಇಂಚು ಉದ್ದದ ಹಳೆಯ ಸ್ಕ್ರೂಡೈವರ್ ಒಂದು, ನೀಲಿ ಬಣ್ಣದ ಆಕ್ಸೋ ಬ್ಲೇಡ್-02, ಕಪ್ಪು ಬಣ್ಣದ ಗಮ್ ಟೇಫ್ ಹಾಕಿದ ಚಿಕ್ಕ ಟಾರ್ಚ್‌ಲೈಟ್ ಒಂದು, ಕಪ್ಪು ಬಣ್ಣದಲ್ಲಿ ಕಂಪನಿಯ ಡಿಸೈನ್ ಇರುವ 1 ಟೋಪಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು 3‌ ಲಕ್ಷ ರೂ.,ಎಂದು ಅಂದಾಜಿಸಲಾಗಿದೆ

ಗ್ರಾಮಸ್ಥರ ಕೈಗೆ ಸಿಕ್ಕಿಬದ್ದ ಆರೋಪಿಗಳು ?
ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ಬೆಳ್ತಂಗಡಿ ತಾಲೂಕಿನ ಬಂದಾರು ಪೆರ್ಲ ಬೈಪಾಡಿ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು ಎಂದು ವರದಿಯಾಗಿದೆ. ಎ.30ರಂದು ರಾತ್ರಿ 12ಗಂಟೆಯ ವೇಳೆಗೆ ಶಾಲೆಯ ಬೀಗ ಮುರಿದು ಇನ್ವರ್ಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ನಾಲ್ವರನ್ನೂ ಹಿಡಿದು ಧರ್ಮಸ್ಥಳ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಗ್ರಾಮಸ್ಥರು ನಾಲ್ವರು ಯುವಕರು ಜೊತೆಯಾಗಿರುವ ಭಾವಚಿತ್ರ ತೆಗೆದು ವಾಟ್ಸಪ್‌ಗಳಲ್ಲಿ ಹರಡಿದ್ದರು.

LEAVE A REPLY

Please enter your comment!
Please enter your name here