ಅಭಿವೃದ್ದಿ ಮಾಡಿದ್ದರೆ ಚರ್ಚೆಗೆ ಬನ್ನಿ; ಬಿಜೆಪಿಗೆ ಅಶೋಕ್ ರೈ ಚಾಲೆಂಜ್
ಪುತ್ತೂರು: ನಾನು ರಾಜಕೀಯಕ್ಕೆ ಬಂದ ಮೇಲೆ ಯಾರನ್ನೂ ವೈಯುಕ್ತಿಕವಾಗಿ ದೂಷಿಸುವ ಕೆಲಸವನ್ನು ಮಾಡಿಲ್ಲ, ಈಗಲೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ನಾನು ರಾಜಕೀಯಕ್ಕೆ ಬಂದಿರುವುದು ಬಡವರ ಸೇವೆ ಮಾಡಲು ಕ್ಷೆತ್ರವನ್ನು ಅಭಿವೃದ್ದಿ ಮಡುವುದಕ್ಕೋಸ್ಕರವಾಗಿದ್ದು ನಾನು ಮಾಡಿದ ಭಾಷಣವನ್ನು ತಿರುಚುವ ಕೆಲಸವನ್ನು ಬಿಜೆಪಿಗರು ತೆರೆಮರೆಯಲ್ಲಿ ಮಾಡುತ್ತಿದ್ದು ನೀವು ಆ ಕೆಲಸವನ್ನು ಬಿಟ್ಟು ನೀವು ಅಭಿವೃದ್ದಿ ಕೆಲಸ ಮಾಡಿದ್ದರೆ ಅದನ್ನು ಚರ್ಚಿಸುವ ಬನ್ನಿ ಎಂದು ಬಿಜೆಪಿಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸವಾಲು ಹಾಕಿದ್ದಾರೆ.
ವಿಟ್ಲದ ಚಂದಳಿಕೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಕಳೆದ ಐದು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ಪುತ್ತೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು ಮಾಡಿಲ್ಲ, ಪುತ್ತೂರಿನಲ್ಲಿ ರಿಂಗ್ ರೋಡ್ ಮಾಡುವುದಾಗಿ ಹೇಳಿದ್ದರು, ಬ್ರಹ್ಮನಗರದಲ್ಲಿ ಫ್ಲ್ಯಾಟ್ ನಿರ್ಮಿಸಿವುದಾಗಿ ಹೇಳಿದ್ದರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವುದಾಗಿ ಹೇಳಿದ್ದರು, ವಿಟ್ಲದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು, ಉಪ್ಪಿನಂಗಡಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡುವುದಾಗಿ ಮಾತುಕೊಟ್ಟಿದ್ದರು, ಮನೆ ಇಲ್ಲದ ಬಡವರಿಗೆ ಮನೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು ಇದರಲ್ಲಿ ಯಾವುದನ್ನಾದರೂ ಮಾಡಿದ್ದಾರ? ಎಂದು ಪ್ರಶ್ನಿಸಿದ ಅಶೋಕ್ ರೈ ರಸ್ತೆಗೆ ಅಷ್ಟು ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಫ್ಲೆಕ್ಸ್ ಹಾಕಿಸಿ ಕಳಪೆ ಕಾಮಗಾರಿ ನಡೆಸಿ ಅದರ ಮೂಲಕ 60% ಕಮಿಷನ್ ಹೊಡೆದದ್ದನ್ನು ಬಿಟ್ಟರೆ ಏನೂ ಮಾಡಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವರ್ಷಕ್ಕೆ ನೂರಾರು ಮನೆಗಳನ್ನು ಬಡವರಿಗೆ ನೀಡಲಾಗುತ್ತಿತ್ತು ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮನೆ ನೀಡಿಲ್ಲ. ಶಾಲಾ ಮಕ್ಕಳ ಶೂ ಭಾಗ್ಯ, ಕ್ಷೀರ ಭಾಗ್ಯ, ಮೊಟ್ಟೆ ಭಾಗ್ಯ , ಇಂದಿರಾ ಕ್ಯಾಂಟೀನ್ ಎಲ್ಲವನ್ನೂ ಬಂದ್ ಮಡಿದ್ದೇ ಬಿಜೆಪಿ ಸರಕಾರದ ಸಾಧನೆಯಾಗಿದೆ. ಕಾಂಗ್ರೆಸ್ ಸರಕಾರ ಬಡವರಿಗೆ ನೆರವು ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಅದೆಲ್ಲವನ್ನೂ ಬಿಜೆಪಿ ಕೈ ಬಿಟ್ಟು ಕೇವಲ ಭಾಷಣದಲ್ಲಿ ಮಾತ್ರ ಬಡವರ ಬಾಯಿಗೆ ಸಿಹಿ ಹಂಚುವ ಕೆಲಸವನ್ನು ಮಾಡಿದೆ ಎಂದು ಅಶೋಕ್ ರೈ ಹೇಳಿದರು. ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂ ಎಸ್ ಮಹಮ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.