‘ಡಿವಿ ಸಿಎಂ ಆಗಿದ್ದಾಗ ಪುತ್ತೂರಿಗೆ ಏನು ಕೊಡುಗೆ ನೀಡಿದ್ದರೆಂದು ತಿಳಿಸಲಿ’ – ಬನ್ನೂರುಕಜೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾವು ಹೇಮನಾಥ ಶೆಟ್ಟಿ ಆಗ್ರಹ

0

ಪುತ್ತೂರು: ಚುನಾವಣೆ ಸಂದರ್ಭದಲ್ಲಿ ಪುತ್ತೂರಿಗೆ ಬಂದು ಬಾಯಿಗೆ ಬಂದತೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರು ಸಿಎಂ ಆಗಿದ್ದಾಗ ಅವರ ರಾಜಕೀಯ ಕ್ಷೇತ್ರದ ತಾಯಿಯಾಗಿರುವ ಪುತ್ತೂರಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಕ್ಷೇತ್ರದ ಜನತೆಗೆ ತಿಳಿಸಲಿ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಸವಾಲು ಹಾಕಿದ್ದಾರೆ.

ಬನ್ನೂರು ಕಜೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಡಿ ವಿ ಸದಾನಂದ ಗೌಡರು ತನ್ನ ರಾಜಕೀಯ ಜೀವನ ಆರಂಭಿಸಿದ್ದೇ ಪುತ್ತೂರಲ್ಲಿ. ಇಲ್ಲಿ ಗೆದ್ದು ಶಾಸಕರಾದವರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಕೊನೆಗೆ ರಾಜ್ಯದ ಮುಖ್ಯಮಂತ್ರಿಯೂ ಆದರು ಆ ವೇಳೆ ಅವರು ಪುತ್ತೂರಿಗೆ ಏನೂ ಕೊಡುಗೆ ನೀಡಿಲ್ಲ. ಸಿಎಂ ಎಂಬ ಮಹತ್ತರ ಹುದ್ದೆಯಲ್ಲಿದ್ದ ಅವರಿಗೆ ಏನು ಬೇಕಾದರೂ ಯೋಜನೆಯನ್ನು ತರಬಹುದಿತ್ತು ಆದರೆ ಅವರು ಇಲ್ಲಿಗೆ ಬಂದು 32 ಹಲ್ಲು ಬಿಟ್ಟುಕೊಂಡು ನಗಾಡಿದ್ದು ಮಾತ್ರ ಎಂದು ವ್ಯಂಗ್ಯವಾಡಿದರು. ಎತ್ತಿನ ಹೊಳೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕರಾವಳಿ ಜಿಲ್ಲೆಯ ಪ್ರತಿರೋಧಕ್ಕೆ ಹೆದರಿ ಕ್ಷೇತ್ರ ಬಿಟ್ಟು ಹೋಗಿದ್ದ ಡಿ ವಿ ಸದಾನಂದ ಗೌಡರು ಚುನಾವಣೆಯ ವೇಳೆ ಪುತ್ತೂರಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಿದ್ದು ಈಗ ಅವರ ಮಾತಿಗೆ ನಯಾಪೈಸೆ ಬೆಲೆ ಇಲ್ಲ ಎಂದು ಹೇಳಿದರು. ಸಿಎಂ ಆದ ಎಲ್ಲರೂ ತಮ್ಮ ತವರು ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಡಿ ವಿಯವರು ಪುತ್ತೂರಿಗೆ ಬಂದು ಅದು ಮಾಡುತ್ತೇನೆ ಇದು ಮಾಡುತ್ತೇನೆ ಎಂದು ರೈಲು ಬಿಟ್ಟದ್ದು ಬಿಟ್ಟರೆ ಏನೂ ಮಾಡಿಲ್ಲ ಇದು ಪುತ್ತೂರಿನ ಪ್ರತೀಯೊಬ್ಬರಿಗೂ ಗೊತ್ತಿದೆ ಎಂದು ಹೇಳಿದರು. ಸಿಎಂ ಆಗಿ ಪುತ್ತೂರಿಗೆ ಬಂದು ಅಭಿವೃದ್ದಿ ವಿಚಾರ ಮಾತನಾಡುವುದರ ಬದಲು ಚಪ್ಪೆ ಸೋಡ ಮತ್ತು ಚಟ್ಟಂಬಡೆ ತಿಂದು ಹಲ್ಲು ಬಿಟ್ಟು ಹೋಗಿದ್ದಾರೆ ಅದುವೇ ಅವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಕೇವಲ ಭರವಸೆ ಮಾತ್ರ ನೀಡುವುದು ಎಂದು ಜನತೆಗೆ ಗೊತ್ತಾಗಿದೆ ಈ ಬಾರಿ ಪುತ್ತೂರಿನಲ್ಲಿ ಜನ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಬಡವರನ್ನು ಭಿಕ್ಷುಕರೆಂದ ಬಿಜೆಪಿಗೆ ತಕ್ಕ ಪಾಠಕಲಿಸಲಿದ್ದಾರೆ: ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವಾರು ಜನಪರ ಯೋಜನೆಗಳನ್ನು ನೀಡಿದೆ. ಅದರಲ್ಲೂ ಬಡವರಿಗೆ ವಿಶೇಷ ಸವಲತ್ತುಗಳನ್ನು ಘೋಷಣೆ ಮಾಡಿದೆ ಆದರೆ ಬಿಜೆಪಿ ಉಚಿತ ಸವಲತ್ತುಗಳನ್ನು ಪಡೆಯಲು ನಾವೇನು ಭಿಕ್ಷುಕರಲ್ಲ ಎಂದು ಹೇಳುವ ಮೂಲಕ ಸ್ವಾಭಿಮಾನದ ಬದುಕು ಸಾಗಿಸುವ ಬಡವರನ್ನು ಭಿಕ್ಷುಕರಿಗೆ ಹೋಲಿಸಿದ್ದು ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಚುನಾವಣಾ ಉಸ್ತುವಾರಿ ಕಾಂಗ್ರೆಸ್ ಮುಖಂಡ ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ ಹೇಳಿದರು. ಬಡವ ಹೊಟ್ಟೆ ತುಂಬ ಊಟ ಮಾಡಿ ರಾತ್ರಿ ಮಲಗಬೇಕು, ಯಾರೂ ಹಸಿವಿನಿಂದ ಇರಬಾರದು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಇದಕ್ಕಾಗಿಯೇ ಕಾಂಗ್ರೆಸ್ ಮಹಿಳೆಯರಿಗೆ ತಿಂಗಳಿಗೆ 2000 ರೂ ನೀಡುತ್ತದೆ. ಜನರ ತೆರಿಗೆಯ ಹಣವನ್ನೇ ನಾವು ಜನರಿಗೆ ನೀಡುತ್ತಿದ್ದೇವೆ, ಕೂಡಿಟ್ಟರೆ ಮೋದಿ ಮಾರಿಬಿಡ್ತಾರೆ ಅದಕ್ಕೆ ಜನರಿಗೆ ನಾವು ಉಚಿತ ಯೋಜನೆಗಳನ್ನು ನೀಡಿ ಬಡವರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಬರಲು ಪ್ರಧಾನಿ ಮೋದಿಗೆ ಪುರುಸೋತ್ತು ಇರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಬಂದು ಮತ್ತೆ ಬೊಗಳೆ ಬಿಡುತ್ತಿದ್ದಾರೆ. ಇವರು ಹೇಳಿದ ಅಚ್ಚೇದಿನ್ ಎಲ್ಲಿ? 15 ಲಕ್ಷ ಎಲ್ಲಿ? ಎಂದು ಪ್ರಶ್ನಿಸಿದರು. ಜನ ಈಗ ಬುದ್ದಿವಂತರಾಗಿದ್ದು ಮೋಸದಾಟ ಇನ್ನು ನಡೆಯುವುದಿಲ್ಲ . ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರಲಿದ್ದು ಪುತ್ತೂರಲ್ಲಿ ಕಾಂಗ್ರೆಸ್ ಜಯಶಾಲಿಯಾಗಲಿದೆ. ಜನ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಧರಿದ್ರ ಸರಕಾರ ತೊಲಗಬೇಕು: ಡಾ. ರಾಜಾರಾಂ: ದೇಶದ ಜನರನ್ನು ದಾರಿದ್ರ್ಯಕ್ಕೆ ತಳ್ಳಿದ ಬಿಜೆಪಿ ಸರಕಾರ ರಾಜ್ಯ ಮತ್ತು ದೇಶದಿಂದ ತೊಲಗಿದರೆ ಜನತೆಗೆ ನೆಮ್ಮದಿ ಸಿಗಲಿದೆ. ಪ್ರತೀ ಬಾರಿಯೂ ಭರವಸೆಯನ್ನೇ ಕೊಟ್ಟು ಜನರನ್ನು ಮೋಸ ಮಾಡುವ ಬಿಜೆಪಿಗೆ ಈ ಬಾರಿ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ. ಪಡಿತರ ಅಕ್ಕಿಗೂ ಕನ್ನ ಹಾಕಿದ್ದ ಬಿಜೆಪಿ ಸರಕಾರ ಬಡವರ ಪರ ಇರುವ ಎಲ್ಲಾ ಯೋಜನೆಯನ್ನು ರದ್ದು ಮಾಡಿದೆ ಇದು ಬಡವರಿಗೆ ಮಾಡಿದ ಮಹಾ ದ್ರೋಹವಾಗಿದೆ ಎಂದು ಹೇಳಿದರು. ಪುತ್ತೂರಿನ ಜನತೆ ಬುದ್ದಿವಂತರು, ಶಾಂತಿಪ್ರಿಯರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು.

ಎಲ್ಲಾ ಮನೆಗಳಿಗೂ ತೆರಳಿ ಮತಯಾಚಿಸಿ: ಅಶೋಕ್ ರೈ: ಅಭ್ಯರ್ಥಿ ಅಶೋಕ್ ರೈ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಮಾತ್ರ ಪಕ್ಷ ಗೆಲ್ಲಬಹುದು, ಪ್ರತೀಯೊಬ್ಬ ಕಾರ್ಯಕರ್ತನೂ ಬೂತ್‌ಮಟ್ಟದ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಕಾಂಗ್ರೆಸ್ ಪ್ರಣಾಳಿಕೆಯನ್ನು ತಿಳಿಸಬೇಕು. ಬಿಜೆಪಿಯವರ ಮನೆಗೂ ತೆರಳಿ ಮತ ಕೇಳಬೇಕು. ಜಾತಿ, ಧರ್ಮ ಬೇದವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲರ ಜೊತೆಯೂ ನಾವು ಅನ್ಯೋನ್ಯತೆಯಿಂದ ಇದ್ದು ಅವರ ಪ್ರೀತಿಗಳಿಸಿ ಕಾಂಗ್ರೆಸ್ ಸರಕಾರ ಬಂದರೆ ಮಾತ್ರ ನಾವು ಮುಂದೆ ಉತ್ತಮ ಜೀವನ ಮಾಡಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಉಳಿದ ಕೇವಲ ದಿನಗಳಲ್ಲಿ ನಾವು ಹೆಚ್ಚು ಕೆಲಸವನ್ನು ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಪುತ್ತೂರಿನ ಜನ ಬದಲಾವಣೆಯನ್ನು ಬಯಸಿದ್ದಾರೆ. ಬಿಜೆಪಿಯ ಅಭಿವೃದ್ದಿ ಶೂನ್ಯ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ. ನೊಂದ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಪುತ್ತೂರಿನ ಅಭಿವೃದ್ದಿ ಮತ್ತು ಬಡವರ ಏಳಿಗೆಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು

ವೇದಿಕೆಯಲ್ಲಿ ಡೆನ್ನಿಸ್, ಯು ಟಿ ತೌಸೀಫ್, ಫಾರೂಕ್ ಬಾಯಬೆ, ಮಹೇಶ್ ರೈ ಅಮಕೊತ್ತಿಮಾರ್, ಟಿ ಎಂ ಸಹೀದ್ ಸುಳ್ಯ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಜಯಪ್ರಕಾಶ್ ಬದಿನಾರ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here