‘ಅಸಂಘಟಿತ ಕಾರ್ಮಿಕರ ನೋವಿಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ’- ಸಾರಥಿ ಸಂಗಮದಲ್ಲಿ ಅರುಣ್ ಕುಮಾರ್ ಪುತ್ತಿಲ ಭರವಸೆ

0

ಪುತ್ತೂರು: ಅಟೋ ರಿಕ್ಷಾ, ಇತರ ವಾಹನ ಚಾಲಕರು ಸೇರಿದಂತೆ ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೀಡಲಾದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ಮಾಡಬೇಕು. ಈ ಬಾರಿಯ ಗೆಲುವು ನಮ್ಮದೇ. ಚುನಾವಣೆಯ ನಂತರ ನಿಮ್ಮೆಲ್ಲರ ವಿಶ್ವಾಸ ಪಡೆದು ಯಾರು ಅಸಂಘಟಿತ ಕಾರ್ಮಿಕರಿದ್ದಾರೋ, ವಿವಿಧ ಸಂಘಟನೆಯವರಿದ್ದಾರೋ ಅವರಿಗೆಲ್ಲ ಆಗಿರುವ ನೋವು ಶಾಶ್ವತವಾಗಿ ಪರಿಹಾರ ಮಾಡಲು ಪ್ರಯತ್ನಿಸುತ್ತೇನೆ ಎಂದು ಮಹಾಲಿಂಗೇಶ್ವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಪುತ್ತೂರು ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಮೇ 3ರಂದು ನಡೆದ ಸಾರಥಿ ಸಂಗಮದಲ್ಲಿ ಅವರು ಮಾತನಾಡಿದರು. ಸಾರಥಿ ಸಂಗಮ ನಡೆದ ಸಭಾಂಗಣ ಅಸಂಘಟಿತ ಕಾರ್ಮಿಕರಿಂದ ತುಂಬಿರುವುದನ್ನು ನೋಡಿ ನಿಮ್ಮೆಲ್ಲರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ನೀವು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮುಂದಿನ 5 ವರ್ಷಗಳ ಕಾಲ ನಿಮ್ಮ ಜೊತೆಗಿದ್ದು, ಪ್ರೀತಿ ವಿಶ್ವಾಸದ ರಾಜಕಾರಣವನ್ನು ಈ ಕ್ಷೇತ್ರದಲ್ಲಿ ಮಾಡುತ್ತೇನೆ. ಧರ್ಮಾಧಾರಿತ ರಾಜಕಾರಣ ಮಾಡುತ್ತೇನೆ. ಅಸಂಘಟಿತ ಕಾರ್ಮಿಕರು ಎಲ್ಲರು ಕೂಡಾ ನನ್ನ ಮನೆಯವರು ಎಂಬ ರೀತಿಯಲ್ಲಿ ದಿನದ 24 ಗಂಟೆಯೂ ಕೂಡಾ ಸೇವೆ ಮಾಡುತ್ತೇನೆ ಎಂದ ಪುತ್ತಿಲ, ನಾನು ಚುನಾವಣೆಗೆ ನಿಂತ ಸಂದರ್ಭದಲ್ಲಿ ಅಭ್ಯರ್ಥಿಯ ಮಾನಹರಣ, ಕಾರ್ಯಕರ್ತರ ಮನಸ್ಸನ್ನು ಕುಗ್ಗಿಸುವ ವ್ಯವಸ್ಥಿತ ಷಡ್ಯಂತ್ರ ಮಾಡಲಾಗುತ್ತಿದೆ. ಆದರೆ ನಾನು ಯಾವುದೇ ಪಕ್ಷದಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿಲ್ಲ. ಹೊಂದಾಣಿಕೆ ಮಾಡಿಲ್ಲ. ನಾನು ನಿಂತಿರುವುದು ದೇವದುರ್ಲಭ ಕಾರ್ಯಕರ್ತರಿಂದ, ಅಸಂಘಟಿತ, ಕಾರ್ಮಿಕ ವಲಯದ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೂ ಚೈತನ್ಯ ನೀಡುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು. ಯಾರು ಅಪಪ್ರಚಾರ ನೋವು ಮಾಡಿದ್ದಾರೋ ಅವರೆಲ್ಲರಿಗೂ ಭಗವಂತನು ಮೇ 10ರಂದು ನೋಡುತ್ತಾನೆ. ಮೇ 13ಕ್ಕೆ ನಡೆಯುವ ವಿಜಯೋತ್ಸವದಲ್ಲಿ ನಾವೆಲ್ಲ ಭಾಗವಹಿಸಬೇಕೆಂದರು.

ನಮ್ಮದು ಬಂಡಾಯವಲ್ಲ ಪ್ರತಿರೋಧ: ಹಿಂದುತ್ವಕ್ಕಾಗಿ ಹೋರಾಟ ಮಾಡುವ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಬಿಜೆಪಿ ಅಭ್ಯರ್ಥಿ ಆಗುವ ಎಲ್ಲಾ ಸಾಧ್ಯತೆ ಇದ್ದರೂ ಘೋಷಣೆ ಆಗದಾಗ ಮಹಾಲಿಂಗೇಶ್ವರ ದೇವರ ಆಶೀರ್ವಾದವಾಗಿ ಕಾರ್ಯಕರ್ತರು ಆಯ್ಕೆ ಮಾಡಿದ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ. ಇವತ್ತು ನಾವು ರಥದಲ್ಲಿ ಕೂತು ಕೊಳ್ಳುವಾಗ ರಥ ಸಾರಥಿಯಾದ ನಿಮ್ಮ ಸಹಕಾರ ಬಹಳ ಅಗತ್ಯ ಎಂದು ಮನ್ಮಥ ಶೆಟ್ಟಿ ಹೇಳಿದರು. ಧರ್ಮಕ್ಕಾಗಿ ಹಲವು ಕೇಸುಗಳು ಇರುವ ಅರುಣ್ ಕುಮಾರ್ ಪುತ್ತಿಲ ಇವತ್ತಿಗೂ ಕೂಡಾ 24 ಗಂಟೆಯೂ ಸಿಗುವ ಪುತ್ತೂರಿನ ಏಕೈಕ ವ್ಯಕ್ತಿ. ಪುತ್ತೂರಿನಲ್ಲಿ ಯು ಪಿ ಮಾದರಿ ಆಡಳಿತ ಬರಬೇಕಾದರೆ ಪುತ್ತಿಲ ಬೇಕು. ಪುತ್ತಿಲ ಓಟಿಗೆ ನಿಂತದ್ದಲ್ಲ ಕಾರ್ಯಕರ್ತರು ನಿಲ್ಲಿಸಿದ್ದು. ನಮ್ಮದು ಬಂಡಾಯವಲ್ಲ ಪ್ರತಿರೋಧ ಎಂದರು.

ಶನಿಪೂಜೆ ಗಲಾಟೆ ಸತ್ಯಾಂಶವನ್ನು ದೇವರು ಹೇಳಿಸಿದ್ದಾರೆ: ಶನಿಪೂಜೆ ಗಲಾಟೆಯ ಸಂದರ್ಭ ಎನ್‌ಕೌಂಟರ್ ವಿಚಾರದ ಕುರಿತು ಸರಿಯಾದ ಮಾಹಿತಿ ಗೊಂದಲದಲ್ಲಿತ್ತು. ಆದರೆ ನಿನ್ನೆಯ ದಿನ ಮಾಜಿ ಮುಖ್ಯಮಂತ್ರಿಗಳ ಬಾಯಲ್ಲೇ ಮಹಾಲಿಂಗೇಶ್ವರ ದೇವರು ಸತ್ಯಾಂಶವನ್ನು ಹೇಳಿಸಿದ್ದಾರೆ. ಇವತ್ತು ಅರುಣ್ ಕುಮಾರ್ ಪುತ್ತಿಲ ಗೆದ್ದರೆ ಅದರಲ್ಲಿ ಕಾರ್ಯಕರ್ತರ ಗೆಲುವಿದೆ. ಈ ಸ್ಪರ್ಧೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ವಿರುದ್ಧ. ಅರುಣ್ ಕುಮಾರ್ ಪುತ್ತಿಲ ಅವರನ್ನು ಸೋಲಿಸಬೇಕೆಂದು ರಾಷ್ಟ್ರ ನಾಯಕರನ್ನು ಕರೆಸುತ್ತಿದ್ದಾರೆ. ಅದೇ ಕೆಲಸವನ್ನು ಉಳ್ಳಾಲದಲ್ಲಿ ಮಾಡಿದರೆ ಸತೀಶ್ ಕುಂಪಾಲ ಅವರು ಗೆಲ್ಲುತ್ತಾರೆ ಎಂದು ತಿಳಿಯಬೇಕು ಎಂದು ಮನ್ಮಥ ಶೆಟ್ಟಿ ಹೇಳಿದರು.

ಅಟೋ, ಲಾರಿ, ಕಾರು ಚಾಲಕರ ಸೇವಾ ಕೇಂದ್ರ ಭರವಸೆ: ಉದ್ಯಮಿ ರಾಜಶೇಖರ್ ಕೋಟ್ಯಾನ್ ಅವರು ಮಾತನಾಡಿ ಅರುಣ್ ಕುಮಾರ್ ಪುತ್ತಿಲ ಮುಂದೆ ಶಾಸಕರಾದರೆ ವಾಹನ ಚಾಲಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸುವ ಭರವಸೆ ನಮ್ಮದು. ಆಟೋ ಚಾಲಕರಾಗಲಿ ಇತರ ವಾಹನ ಚಾಲಕರಿಗೆ ಇರುವ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕ್ರಮವನ್ನು ಈ ಹಿಂದಿನ ಶಾಸಕರೂ ಮಾಡಿಲ್ಲ ಈಗಿನ ಶಾಸಕರು ಕೂಡಾ ಮಾಡಿಲ್ಲ. ಆದರೆ ನಮ್ಮ ಅರುಣಣ್ಣ ಶಾಸಕರಾದರೆ ಇದಕ್ಕೆಲ್ಲ ಪರಿಹಾರ ಸಿಗಲಿದೆ. ಆಟೋ ಚಾಲಕರಿಗೆ ಸಂಬಂಧಿಸಿ ಯಾವ ಕಡೆಯಲ್ಲಾದರೂ 20ಕ್ಕೂ ಹೆಚ್ಚು ಆಟೋಗಳು ಪಾರ್ಕ್ ಮಾಡುವ ಸ್ಥಳವನ್ನು ಆಟೋ ಸ್ಟಾಂಡ್ ಮಾಡುವ ಜೊತೆಗೆ ಎಲ್ಲಾ ಪಾರ್ಕ್‌ಗಳಲ್ಲೂ ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗುವುದು. ಆಟೋ ಚಾಲಕರ ಮತ್ತು ಲಾರಿ, ಕಾರು ಚಾಲಕರ ಸೇವಾ ಕೇಂದ್ರವನ್ನು ಮಾಡುತ್ತೇವೆ. ಬಿಜೆಪಿಯವರಿಗೆ ನಕಲಿ ಹಿಂದುತ್ವ ಬೇಕಾಗಿದೆ. ಆ ನಕಲಿ ಹಿಂದುತ್ವಕ್ಕೆ ಕೊನೆ ನೀಡಲು ಅರುಣ್ ಕುಮಾರ್ ಪುತ್ತಿಲ ಗೆಲುವಾಗಬೇಕೆಂದರು. ಬಿಜೆಪಿ ಬೂತ್‌ನ ಪ್ರಮುಖ್ ಅಗಿರುವ ಅನಿಲ್ ತೆಂಕಿಲ, ಶನಿಪೂಜೆ ಸಂದರ್ಭದಲ್ಲಿ ಸಕ್ರಿಯರಾಗಿದ್ದ ರಾಜೀವ ಸುವರ್ಣ, ಬಿಜೆಪಿ ನಗರ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಸಮೇತ ಮಹಾಲಿಂಗೇಶ್ವರನ ನಡೆಗೆ ಬರಲಿ-ಪುತ್ತಿಲ ಸವಾಲು

ನಾನಾ ರೀತಿಯ ಹೇಳಿಕೆ ಕೊಟ್ಟು ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಮತ್ತು ಕಾಂಗ್ರೆಸ್ ಗೆಲ್ಲಿಸುವ ಯೋಚನೆ ಅಡಿಯಲ್ಲಿ ಮಾಜಿ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿರುವ ಡಿ.ವಿ.ಸದಾನಂದ ಗೌಡರು ನಿನ್ನೆಯ ದಿನ ನೀಡಿದ ಹೇಳಿಕೆ ನನಗೆ ಅತ್ಯಂತ ನೋವಾಗಿದೆ. ಆದರೆ ನಾವ್ಯಾರೂ ಖಲಿಸ್ಥಾನದ ನಾಯಕರಲ್ಲ ಎಂದು ಹೇಳಿದ ಅರುಣ್ ಕುಮಾರ್ ಪುತ್ತಿಲ ಅವರು, ಕಳೆದ 30 ವರ್ಷಗಳಲ್ಲಿ ಈ ಕ್ಷೇತ್ರದ ನರನಾಡಿಯನ್ನು ಅರಿತವನಾಗಿದ್ದೇನೆ. ಜನರ ಕಷ್ಟ ನೋವುಗಳ ಸಂದರ್ಭದ ಹೋರಾಟದ ನಡುವಲ್ಲಿ ನಿಮ್ಮ ಧ್ವನಿಯಾಗಿರುವ ನನ್ನ ಮೇಲಿನ ಆರೋಪಗಳನ್ನು ಸಾಕ್ಷಿ ಸಮೇತ ಸಾಬೀತು ಮಾಡಲಿ.ಮಹಾಲಿಂಗೇಶ್ವರನ ನಡೆಗೆ ಬರಲಿ. ನಾನು ಸ್ವೀಕಾರ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಅಸಂಘಟಿತ ಕಾರ್ಮಿಕರಿಂದ ಗಂಟೆಯೊಳಗೆ ಚುನಾವಣಾ ನಿಧಿಗೆ ರೂ.1 ಲಕ್ಷಕ್ಕೂ ಮಿಕ್ಕಿ ನೆರವು

ಚುನಾವಣೆ ಸಂದರ್ಭ ನಮ್ಮಲ್ಲಿ ಇತರ ಪಕ್ಷಗಳಂತೆ ಕಾರ್ಯಕರ್ತರಿಗೆ ಕೊಡಲು ಏನೂ ಇಲ್ಲ. ಆದರೆ ನಮಗೆ ಪೂರ್ಣ ಸಹಕಾರ ನೀಡಿರುವ ನಿಮಗೆ ನಾವು ಧನ್ಯರು. ಮೊನ್ನೆಯ ಸೀತಾಪರಿವಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಕೇವಲ ರೂ.10 ನೀಡಲು ಮನವಿ ಮಾಡಿದಕ್ಕೆ ಎಲ್ಲಾ ಬೆಂಬಲಿಗರು ಸಹಕರಿಸಿದ್ದರು. ಈ ನಿಟ್ಟಿನಲ್ಲಿ ಸಹಕರಿಸಿದ ನಿಮಗೆ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಕೃತಜ್ಞತೆ ನೀಡುತ್ತಿದ್ದೇನೆ ಎಂದು ಮನ್ಮಥ ಶೆಟ್ಟಿಯವರು ಸಭೆಯಲ್ಲಿ ಹೇಳಿದ್ದೇ ತಡ ಸಭೆಗೆ ಆಗಮಿಸಿದ ಅಸಂಘಟಿತ ಕಾರ್ಮಿಕರು ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ಅರುಣ್ ಪುತ್ತಿಲ ಚುನಾವಣಾ ನಿಧಿಗೆ ಸಮರ್ಪಣೆ ಮಾಡಿದರು. ಕೇವಲ 1 ಗಂಟೆಯೊಳಗೆ ಸುಮಾರು ರೂ.1 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಣೆ ಆಗಿದ್ದು ಅದನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here