ಹಿಂದೂ ವಿರೋಧಿ ನೀತಿಯ ಕಾಂಗ್ರೆಸ್ನ ಅಗತ್ಯ ರಾಜ್ಯಕ್ಕಿಲ್ಲ-ಪೂಂಜ
ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ತಾಲಿಬಾನ್ ಆಡಳಿತ ಬರಲಿದೆ. ಆದ್ದರಿಂದ ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಿಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಪುತ್ತೂರಿಗೆ ಆಗಮಿಸಲಿದ್ದು, ಇದರ ಪ್ರಚಾರಾರ್ಥವಾಗಿ ಬಿಜೆಪಿ ವತಿಯಿಂದ ಉಪ್ಪಿನಂಗಡಿಯಲ್ಲಿ ಮೇ 3ರಂದು ವಾಹನಗಳ ಮೂಲಕ ನಡೆದ ರೋಡ್ ಷೋನಲ್ಲಿ ಅವರು ಭಾಗವಹಿಸಿ, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಗೋಹತ್ಯೆ ನಿಷೇಧ ಕಾಯ್ದೆಯ ಜಾರಿಗೆ ಕಾರಣವಾದ, ಹಿಂದೂ ಸಂಸ್ಕಾರ- ಸಂಸ್ಕೃತಿಯ ಉಳಿವಿಗೆ ಕಾರಣವಾದ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾದ, ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ಮಂದಿರದೊಳಗೆ ಹಿಂದೂಗಳಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ, ಹಿಂದೂ ಧರ್ಮದ ಆಚಾರ- ವಿಚಾರಗಳ ಉಳಿವಿಗಾಗಿ ಹೋರಾಟ ನಡಸುತ್ತಿರುವ, ಧರ್ಮಕ್ಕೆ ಧಕ್ಕೆಯಾದಾಗ ಪ್ರತಿರೋಧ ಒಡ್ಡುವ ಸಂಘಟನೆ ಬಜರಂಗದಳ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಸಂಘಟನೆಯನ್ನೇ ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದ್ದರಿಂದ ಹಿಂದೂ ವಿರೋಧಿ ನೀತಿಯ ಕಾಂಗ್ರೆಸ್ನ ಅಗತ್ಯ ಈ ರಾಜ್ಯಕ್ಕಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಬಿಜೆಪಿಗೆ ಅಧಿಕಾರ ನೀಡಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಉಪ್ಪಿನಂಗಡಿಯ ಆದಿತ್ಯ ಹೊಟೇಲ್ನಿಂದ ಆರಂಭವಾದ ರೋಡ್ ಶೋ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದವರೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಮುಖಂಡರಾದ ಮುಕುಂದ ಬಜತ್ತೂರು, ಸುರೇಶ್ ಅತ್ರಮಜಲು, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಮುಳಿಯ, ಪ್ರಶಾಂತ್ ಪೆರಿಯಡ್ಕ, ಸಂತೋಷ್ ಕುಮಾರ್ ಪಂರ್ದಾಜೆ, ಪುನೀತ್ ಮಾಡತ್ತಾರು, ಆದೇಶ್ ಶೆಟ್ಟಿ, ಯತೀಶ್ ಆರುವಾರ, ಮಹೇಶ್ ಬಜತ್ತೂರು, ಅಜಿತ್ ಕುಮಾರ್ ರೈ ಹೊಸಮನೆ, ಚಂದ್ರಹಾಸ ಹೆಗ್ಡೆ, ಸದಾನಂದ ನೆಕ್ಕಿಲಾಡಿ, ಹೊನ್ನಪ್ಪ ಗೌಡ, ಮಾಧವ ಪೂಜಾರಿ ಒರುಂಬೋಡಿ, ವಸಂತ ಗೌಡ ಪಿಜಕ್ಕಳ, ಪ್ರಸಾದ್ ಪಚ್ಚಾಡಿ, ಉಮೇಶ್ ಓಡ್ರಪಾಲ್, ರಾಜೇಶ್ ನೆಕ್ಕರೆ, ಗಂಗಾಧರ ಕೆ.ಎಸ್., ನವೀನ್ ಪದೆಬರಿ, ಕಿಶೋರ್ ನೀರಕಟ್ಟೆ, ಧನಂಜಯ ನಟ್ಟಿಬೈಲು, ಹರೀಶ್ ಶೆಟ್ಟಿ ರೆಂಜಾಳ, ಸುದರ್ಶನ್ ಉಪ್ಪಿನಂಗಡಿ, ಲೊಕೇಶ್ ಬೆತ್ತೋಡಿ, ಸಹಜ್ ರೈ, ರವಿ ಇಳಂತಿಲ, ಜಯಂತ ಪೊರೋಳಿ, ಸುನೀಲ್ ಆನಾವು, ಜಯಾನಂದ ಕಲ್ಲಾಪು, ಸುಂದರ ಗೌಡ ಅರ್ಬಿ, ರಮೇಶ್ ನೆಕ್ಕರೆ, ರವಿನಂದನ್ ಹೆಗ್ಡೆ, ನಿತಿನ್ ತಾರಿತ್ತಡಿ, ಸುಜಾತ ಆಚಾರ್ಯ, ರಮೇಶ್ ಸುಭಾಶ್ನಗರ ಮತ್ತಿತರರು ಉಪಸ್ಥಿತರಿದ್ದರು.