ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಳದ ಪ್ರತಿಷ್ಠಾ ವಾರ್ಷಿಕ ಉತ್ಸವ ಮೇ.7 ರಂದು ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ನಾಗದೇವರುಗಳು ಹಾಗೂ ಶ್ರೀ ರಕ್ತೇಶ್ವರಿ, ಮಹಿಷಂದಾಯ, ಪಂಜುರ್ಲಿ, ಗುಳಿಗ ದೈವಗಳು ಹಾಗೂ ವೃಕ್ಷರಾಜ ಅಶ್ವತ್ಥ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ.
ಮೇ.6ರಂದು ಬೆಳಿಗ್ಗೆ ಗಂ.8.35ಕ್ಕೆ ನಿತ್ಯ ಮಹಾಪೂಜೆ, ಮಧ್ಯಾಹ್ನ ಗಂ.11.30ಕ್ಕೆ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ಶ್ರೀದೇವರಿಗೆ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ 12.15 ರಿಂದ ತುಲಾಭಾರ ಸೇವೆ, ಗಂಟೆ 1 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮೇ.7 ರಂದು ಬೆಳಿಗ್ಗೆ ಗಂ.8.35ಕ್ಕೆ ನಿತ್ಯ ಮಹಾಪೂಜೆ, ಗಂ.9 ರಿಂದ ಶ್ರೀ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಗಂ.12.30 ರಿಂದ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂ.10 ರಿಂದ 12.30 ರವರೆಗೆ ವಿದುಷಿ ಶ್ಯಾಮಲ ನಾಗರಾಜ ಭಟ್ ಕುಕ್ಕಿಲ ಮತ್ತು ಬಳಗ ಶೃತಿಲಯ ಕ್ಲಾಸಿಕಲ್ಸ್ ಮಡಂತ್ಯಾರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಗಂ.3 ರಿಂದ ರಾತ್ರಿ ಗಂ. 7.15 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ, ರಾತ್ರಿ 7.15ರಿಂದ ಶ್ರೀದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂ.8 ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ ರಾಧಾ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಗಂ.9.30 ರಿಂದ ಯಕ್ಷಗಾನ ನರಕಾಸುರ ಮೋಕ್ಷ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.