5 ವರ್ಷದ ಹಿಂದೆ ಕೂರ್ನಡ್ಕದಲ್ಲಿ ನಡೆದ ಹಲ್ಲೆ ಪ್ರಕರಣದ ವಾರಂಟ್ ಆರೋಪಿ ಬಂಧನ – ಬಾಂಡ್ ಮೂಲಕ ಜಾಮೀನು ಮಂಜೂರು

0

ಪುತ್ತೂರು: 5 ವರ್ಷಗಳ ಹಿಂದೆ ಕೂರ್ನಡ್ಕದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 3ನೇ ಆರೋಪಿ ಕೂರ್ನಡ್ಕದ ನಾಸೀರ್ ಎಂಬವರನ್ನು ಪುತ್ತೂರು ಪೊಲೀಸರು ಮೇ 6ರಂದು ಕೇರಳದ ಕರಿಪುರಂನಲ್ಲಿ ಬಂಧಿಸಿದ್ದಾರೆ.


ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಂಜಯನಗರದ ಯೂಸುಫ್ ಎಂಬವರ ಪುತ್ರ ನಾಸೀರ್ ಎಂಬವರು ಬಂಧಿತ ಆರೋಪಿ. 2018ರಲ್ಲಿ ಕೂರ್ನಡ್ಕದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಸೀರ್ ಮೂರನೇ ಆರೋಪಿಯಾಗಿದ್ದರು. ಘಟನೆಗೆ ಸಂಬಂಧಿಸಿ ಸಾಲ್ಮರದ ನೌಫಲ್ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಆರೋಪಿ ನಾಸೀರ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದಾಗ ಆತ ವಿದೇಶಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿತ್ತು. ಸೌದಿ ಅರೇಬಿಯಾದ ದಮಾಮ್‌ನಲ್ಲಿ ಒಂದು ವರ್ಷ ಕೆಲಸ ಮಾಡಿಕೊಂಡಿದ್ದ ಆರೋಪಿ ನಾಸಿರ್ ಅವರು ಮೇ 5ರಂದು ದಮಾಮ್‌ನಿಂದ ಕೇರಳ ರಾಜ್ಯದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿರುವ ಮಾಹಿತಿ ಪಡೆದ ಪೊಲೀಸರು ಮೇ 6ರಂದು ಕೇರಳದ ಕರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯ ಆರೋಪಿಯಿಂದ ರೂ. 10ಸಾವಿರದ ಬಾಂಡ್ ಬರೆಸಿಕೊಂಡು. ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಪುತ್ತೂರು ನಗರ ಪೊಲಿಸ್ ಠಾಣೆ ಇನ್‌ಸ್ಪೆಕ್ಟರ್ ಅವರ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಮತ್ತು ಸಿಬ್ಬಂದಿ ಸಂತೋಷ್ ಕಾಗಲೆ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here