ನಿರಂತರ ಅಪಪ್ರಚಾರ, ಭಾವನಾತ್ಮಕ ವಿಚಾರಗಳನ್ನು ಕೆದಕುವ ಮೂಲಕ ರಮಾನಾಥ ರೈಯವರಿಗೆ ಕಳೆದ ಬಾರಿ ಸೋಲಾಗಿದೆ ಪತ್ರಿಕಾಗೋಷ್ಠಿಯಲ್ಲಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಆರೋಪ

0

ವಿಟ್ಲ: ಮಾಜಿ ಸಚಿವರೂ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈಯವರು ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ 5000ಕೋ.ರೂಪಾಯಿಗಳ ಅಭಿವೃದ್ಧಿಯ ನ್ನು ಮಾಡಿ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ಆದರೆ ನಿರಂತರ ಅಪಪ್ರಚಾರದಿಂದ ಮತ್ತು ಭಾವನಾತ್ಮಕ ವಿಚಾರಗಳನ್ನು ಕೆದಕುವುದರ ಮುಖಾಂತರ ಅವರಿಗೆ ಸೋಲಾಯಿತು. ಆದರೆ ಕಳೆದ ಐದು ವರುಷದ ಅವಧಿಯ ಆಡಳಿತ ಅನುಭವ ಹೊಂದಿರುವ ಬಂಟ್ವಾಳ ಕ್ಷೇತ್ರದ ಮತದಾರರು ಮತ್ತೊಮ್ಮೆ ರಮಾನಾಥ ರೈಯವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡುವ ನಿರ್ಧಾರದಲ್ಲಿದ್ದಾರೆ ಎಂದು ಬಂಟ್ವಾಳ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಚುನಾವಣಾ ಉಸ್ತುವಾರಿಯಾಗಿರಯವ ಪಂಚಾಯತ್ ರಾಜ್ ಘಟಕದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲುರವರು ಹೇಳಿದರು.

ಅವರು ಕೊಳ್ನಾಡು ವಲಯ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸರ್ವ ಧರ್ಮ ಜಾತಿಯನ್ನು ಸಮಾನವಾಗಿ ಕಾಣುವ ರಮಾನಾಥ ರೈ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರದ ನೇತೃತ್ವ ವಹಿಸುವುದರ ಜೊತೆಗೆ ಸಹಕಾರವನ್ನು ನೀಡುತ್ತಾ ಬಂದವರಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ತಕರ್ತರು ಮೂರನೇ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪ್ರದೇಶ ಕಾಂಗ್ರೆಸ್ ವತಿಯಿಂದ ಘೋಷಿಸಲಾದ ಗ್ಯಾರೆಂಟಿ ಭರವಸೆಗಳನ್ನು ಮನೆ ಮನೆಗಳಿಗೆ ತಲುಪಿಸಿ, ಮತದಾರರಿಗೆ ಮನವರಿಕೆ ಮಾಡಿ ಕೊಟ್ಟಿರುತ್ತಾರೆ. ಈ ಗ್ಯಾರೆಂಟಿಗೆ ಮತದಾರರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜನ ಕಾಂಗ್ರೆಸ್ ನತ್ತ ಒಲವು ವ್ಯಕ್ತ ಪಡಿಸಿದೆ. ಈ ಭಾರಿ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈರವರು ಗೆಲುವು ನಿಶ್ಚಿತವಾಗಿದೆ.

ಈಗಿನ ಬಿಜೆಪಿ ಸರಕಾರ ಸತತವಾಗಿ‌ ವೈಫಲ್ಯವನ್ನು ಕಂಡಿದ್ದು ನಮ್ಮ ಕ್ಷೇತ್ರದಲ್ಲಿ ಪ್ರಸ್ತುತ ಭರಗಾಲದಿಂದ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗಿದ್ದು,
ಗ್ರಾಮಪಂಚಾಯತ್ ಗೆ ಈ ವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ರಮಾನಾಥ ರೈಗಳ ಅವಧಿಯಲ್ಲಿ ದೂರದೃಷ್ಟಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ದಿಂದಾಗಿ ಪ್ರಸ್ತುತ ಬಂಟ್ವಾಳ ಕ್ಷೇತ್ರದ ಬಹುಭಾಗ ಜನತೆ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಕಂಡುಬಂದಿಲ್ಲ. ಇಲ್ಲವಾದಲ್ಲಿ ಜನತೆ ಕುಡಿಯವ ನೀರಿಗಾಗಿ ಬಡಿದಾಟ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಜನಸಾಮಾನ್ಯರ ಬದುಕಿನಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡಿದ್ದರು ಅರ್ಹ ಫಲಾನುಭವಿಗಳಿಗೆ ಈವರೆಗೆ ಮನೆ ಮಂಜೂರು ಮಾಡಿರುವುದಿಲ್ಲ‌. ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನಿರ್ಮಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರ ಪರವಾನಿಗೆಯನ್ನು 9/11 ಮಾಡದೆ ನವೀಕರಿಸ ಬಾರದೆನ್ನುವ ಆದೇಶವನ್ನು ಸರಕಾರ ನೀಡಿದೆ. ಈ ಆದೇಶದಿಂದಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಪ್ರಸ್ತುತ ನಿಯಮದಲ್ಲಿ ಸದ್ರಿ ಕಟ್ಟಡಗಳಿಗೆ ರಸ್ತೆ ಮಾರ್ಜಿನ್ ಕಾರಣದಿಂದ 9/11 ಒದಗಿಸುವುದು ಕಷ್ಟಸಾಧ್ಯವಾಗಿದೆ. ಸರಕಾರದ ಇಂತಹ ಅವೈಜ್ಞಾನಿಕ ಆದೇಶಗಳಿಂದಾಗಿ ಜನರ ಬದುಕ ದುಸ್ತರವಾಗಿದೆ‌.
ಒಟ್ಟಾರೆಯಾಗಿ ಬಿಜೆಪಿ ಸರಕಾರ ಮತದಾರರಿಗೆ ನೀಡಿದ ಭರವಸೆಗಳನ್ನು ಪೂರೈಸದೆ ಜನರಿಗೆ ಮೋಸಮಾಡಿದೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಪರೀತ ತೆರಿಗೆಗಳನ್ನು ವಸೂಲು ಮಾಡುವುದರಿಂದ ಬೆಲೆಏರಿಕೆ ಅಧಿಕವಾಗಿದ್ದು ಜನಸಾಮಾನ್ಯರಿಗೆ ಮತ್ತಷ್ಟು ಸಮಸ್ಯೆಯಾಗುತ್ತಿದೆ‌. ಪಾನ್ ಕಾರ್ಡ್ ನೊಂದಿಗೆ ಆದಾರ್ ಲಿಂಕ್ ಮಾಡಲು 1200ರೂಪಾಯಿವರೆಗೆ ಜನಸಾಮಾನ್ಯರಿಂದ ವಸೂಲು ಮಾಡುತ್ತಿದ್ದು, ಬ್ಯಾಂಕಿನಲ್ಲಿ ಠೇವಣಿ ಇಡುವಾಗಲೂ ಹಿಂಪಡೆಯುವಾಗಲೂ ಸೇವಾ ತೆರಿಗೆಯನ್ನು ವಸೂಲು ಮಾಡುವುದರ ಮೂಲಕ ವಸೂಲು ಬಾಜಿ ಸರಕಾರ ಎಂಬುದು ಜನಜನಿತವಾಗಿದೆ‌‌. ರಾಜ್ಯಮಟ್ಟದಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೂ ಪ್ರತಿಯೊಂದೂ ಸರಕಾರಿ‌ ಕೆಲಸಗಳಲ್ಲಿ ಲಂಚದ ಬೇಡಿಕೆ ಸಾಮಾನ್ಯವಾಗಿದ್ದು, ಸಾರ್ವಜನಿಕರಿಗೆ ಇದು ನುಂಗಲಾರದ ತುತ್ತಾಗಿದೆ. ಬಿಜೆಪಿ ಸರಕಾರ ಇಂತಹ ಪೊಳ್ಳು ಭರವಸೆಗಳ ಬಗ್ಗೆ ಜನರಿಗೆ ತಿಳಿದಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ರಮಾನಾಥ ರೈಯವರು ಅತೀ ಹೆಚ್ಚಿನ ಮತಗಳ ಅಂತರದಿಂದ ವಿಜಯಿಶಾಲಿಯಾಗುತ್ತಾರೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಲಯಾಧ್ಯಕ್ಷ ಪವಿತ್ರಪೂಂಜ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಕೆ.ಅಶ್ರಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here