ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಉತ್ಸವ-ಧಾರ್ಮಿಕ ಸಭೆ

0

ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ರಾಜೇಶ್ ಆಯ್ಕೆ-ಯು. ಜಿ. ರಾಧ ಘೋಷಣೆ

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಉತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಮೇ 7ರಂದು ರಾತ್ರಿ ನಡೆಯಿತು.


ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧ ಮಾತನಾಡಿ, ನಮ್ಮ ದೇವಳದ ಜೀರ್ಣೋದ್ಧಾರ ನಡೆದು 2009ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಬಳಿಕ 2022ರ ದಶಂಬರ್ ತಿಂಗಳಿನಲ್ಲಿ ಹತ್ತೂರಿಗೆ ಮಾದರಿಯಾಗಿ, ಸರಳವಾಗಿ, ಅನುಕರಣೀಯವಾಗಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದೆ. ಆಸ್ತಿಕ ಬಂಧುಗಳ ಸಮರ್ಪಣಾ ಮನೋಭಾವದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ ಎಂದರು.

ಹೊಸತನದ ಮೂಲಕ ನಮ್ಮ ಶಾಂತಿನಗರ ಮಹಾವಿಷ್ಣು ದೇವಸ್ಥಾನ ಹೆಸರು ಪಡೆದಿದೆ. ನಮ್ಮ ಕಾರ್ಯಕ್ರಮಗಳಲ್ಲಿಯೂ ಹೊಸತನ ಇರುತ್ತದೆ. ಅದೇ ರೀತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮೊಕ್ತೇಸರರಾಗಿದ್ದ ಹಿರಿಯರಾದ ಪುರುಷೋತ್ತಮ ಪ್ರಭು ಹನಂಗೂರು, ಗಣಪತಿ ಭಟ್ ಪರನೀರು, ರಾಜೀವ ರೈ ಅಲಿಮಾರ ಮತ್ತು ಡಾ. ಬಿ. ರಘುರವರು ಸ್ವಯಂಪ್ರೇರಣೆಯಿಂದ ಮೊಕ್ತೇಸರ ಸ್ಥಾನಕ್ಕೆ ನಿವೃತ್ತಿ ಘೋಷಿಸಿ ಆದರ್ಶ ಮೆರೆದಿದ್ದಾರೆ. ಅವರ ಸ್ಥಾನಕ್ಕೆ ಮೊಕ್ತೇಸರರಾಗಿ ವಿಜಯ ಕುಮಾರ್ ನಾಯಕ್ ನೆಕ್ಕಿಲಾಡಿ, ವಿನೋದ್ ರೈ ಅಲಿಮಾರ, ರತ್ನಾಕರ ಇಪ್ಪನೊಟ್ಟು ಮತ್ತು ಬಾಬು ನಾಯ್ಕ ಹನಂಗೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ ಯು.ಜಿ.ರಾಧರವರು ನಾನು 13 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕ್ತೇಸರನಾಗಿದ್ದೇನೆ. ಎಲ್ಲೆಡೆಯೂ ಅಧಿಕಾರದ ಹಪಹಪಿ ಕಾಣುವ ಸನ್ನಿವೇಶ ಇದೆ. ಆದರೆ, ನಮ್ಮಲ್ಲಿ ಹಿರಿಯರು ಹೊಸಬರಿಗೆ ಅವಕಾಶ ಮಾಡಿಕೊಟ್ಟು ಅನುಕರಣೀಯರಾಗಿದ್ದಾರೆ. ಅವರ ಆದರ್ಶವನ್ನು ಪಾಲಿಸಬೇಕಿದೆ. ಹಾಗಾಗಿ ನಾನು ಕೂಡ ಆಡಳಿತ ಮೊಕ್ತೇಸರ ಸ್ಥಾನದಿಂದ ನಿರ್ಗಮಿಸಲಿದ್ದು ನೂತನ ಆಡಳಿತ ಮೊಕ್ತೇಸರರಾಗಿ ರಾಜೇಶ್ ಶಾಂತಿನಗರರವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಮುಂದೆಯೂ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಉಪ್ಪಿನಂಗಡಿ ಶ್ರೀರಾಮ ಶಾಲೆ ಮತ್ತು ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರೂ ಆಗಿರುವ ಯು.ಜಿ. ರಾಧ ಹೇಳಿದರು.


ಧಾರ್ಮಿಕ ಉಪನ್ಯಾಸ ನೀಡಿದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜ್‌ನ ಉಪನ್ಯಾಸಕ ಚೇತನ್ ಮೊಗ್ರಾಲ್ ಮಾತನಾಡಿ ಫಲಾಪೇಕ್ಷೆ ಇಲ್ಲದೆ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು.


ಕು. ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿದರು. ಭರತ್ ಕುಮಾರ್ ಸ್ವಾಗತಿಸಿ, ಪ್ರೀತಂ ಶೆಟ್ಟಿ ಬಿ.ಕೆ. ವಂದಿಸಿದರು. ಶೇಖರ ಪೂಜಾರಿ ನಿಡ್ಯ ಮತ್ತು ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.


ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ 6 ಮತ್ತು 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಳದ ಅರ್ಚಕ ನಾಗರಾಜ ಭಟ್ ಕುಕ್ಕಿಲ ಸಹಕರಿಸಿದರು. ಧಾರ್ಮಿಕ ಸಭೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ನಂತರ ಸುಪ್ರಸಿದ್ಧ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ರವೀಶ್ ಎಚ್.ಟಿ. ಉಪ್ಪಿನಂಗಡಿ ಅವರ ಸಂಯೋಜನೆಯಲ್ಲಿ `ನರಕಾಸುರ ಮೋಕ್ಷ’ ಯಕ್ಷಗಾನ ಬಯಲಾಟ ನಡೆಯಿತು.

ಆಡಳಿತ ಮೊಕ್ತೇಸರರಾಗಿ ರಾಜೇಶ್ ಆಯ್ಕೆ


ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿಯ್ಕೆಯಾಗಿರುವ ರಾಜೇಶ್ ಶಾಂತಿನಗರ ಅವರು ಶಾಂತಿನಗರ ತ್ರಿವೇಣಿ ಯುವಕ ಮಂಡಲದ ಅಧ್ಯಕ್ಷರಾಗಿ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾಗಿ, ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ, ಬಿಜೆಪಿ ನೆಕ್ಕಿಲಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ರಾಜೇಶ್ ಅವರು ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕರಾಗಿದ್ದು ಪುತ್ತೂರು ಟಿಎಪಿಸಿಯಂಎಸ್‌ನ ಉಪಾಧ್ಯಕ್ಷರಾಗಿದ್ದಾರೆ. ದೇವಳದ ಆಡಳಿತ ಮಂಡಳಿಯಲ್ಲಿ ಯು.ಜಿ. ರಾಧ ಶಾಂತಿನಗರ, ರಮೇಶ್ ಗೌಡ ಬೇರಿಕೆ, ದಿವಾಕರ ಶೆಟ್ಟಿ ಕಾರ್ನೋಜಿ, ರತ್ನಾಕರ ಇಪ್ಪನೊಟ್ಟು, ವಿನೋದ್ ರೈ ಅಲಿಮಾರ, ವಿಜಯ ಕುಮಾರ್ ನಾಯಕ್ ನೆಕ್ಕಿಲಾಡಿ, ಬಾಬು ನಾಯ್ಕ ಹನಂಗೂರು ಮತ್ತು ವಸಂತ ಕಾಮತ್ ಪರನೀರು ಅವರು ಮೊಕ್ತೇಸರರಾಗಿದ್ದಾರೆ.

LEAVE A REPLY

Please enter your comment!
Please enter your name here