ಮೇ 12 ಕ್ಕೆ ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯ ಜೀರ್ಣೋದ್ಧಾರ, ಪುನಃಪ್ರತಿಷ್ಠಾಪನೆ
ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿಯ ನೇಮನಡಾವಳಿಯಲ್ಲಿ ದರ್ಶನ ಪಾತ್ರಿಯ ಮೂಲಕ ದೇವಿಯು ‘ನಾನು ತೊಟ್ಟಿಲಕಯದಿಂದ ಆವಿರ್ಭವಿಸಿದ್ದೇನೆ’ ಎನ್ನುವ ಮಾತನ್ನು ಉಚ್ಚರಿಸುವುದು ಐತಿಹಾಸಿಕ ವಿಷಯಕ್ಕೆ ಹಿಡಿದ ಕೈಗನ್ನಡಿಯಂತೆ ಇದೀಗ ಮೇ 12 ಕ್ಕೆ ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ದಾರ, ಪುನಃಪ್ರತಿಷ್ಠಾಪನೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್ ಕೆ ಜಗನ್ನಿವಾಸ ರಾವ್ ಅವರು ಮಾತನಾಡಿ ಅನಾಧಿ ಕಾಲದಿಂದಲೂ ನಟ್ಟೋಜ ಕುಟುಂಬದವರು ಪಾರ್ವತಿಯ ಸ್ವರೂಪವಾಗಿರುವ ಶ್ರೀ ಉಳ್ಳಲ್ಲಿ ದೇವಿಯನ್ನು ತೊಟ್ಟಿಲಕಯದಲ್ಲಿ ಆರಾಧಿಸುತ್ತಾ ಬರುತ್ತಿದ್ದರು. ತದನಂತರ ನಟ್ಟೋಜ ಮನೆತನದ ಪೂರ್ವಜರು ಶ್ರೀ ಉಳ್ಳಾಲ್ತಿ ಅಮ್ಮನವರ ನಡಾವಳಿಯನ್ನು ನಡೆಸಲು ಇಚ್ಛಿಸಿದರು. ಆದರೆ ತೊಟ್ಟಿಲಕಯದಲ್ಲಿ ಸ್ಥಳಾವಕಾಶದ ಕೊರತೆಯನ್ನು ಮನಗಂಡು ಬಲ್ನಾಡಿನಲ್ಲಿ ಈಗ ಆರಾಧಿಸುತ್ತಿರುವ ‘ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರನ್ನು ಪ್ರತಿಷ್ಠಾಪಿಸಿದ್ದು ಇತಿಹಾಸ. ಇದಕ್ಕೆ ಸಾಕ್ಷಿಯೆಂಬಂತೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿಯ ನೇಮನಡಾವಳಿಯಲ್ಲಿ ದರ್ಶನ ಪಾತ್ರಿಯ ಮೂಲಕ ದೇವಿಯು ‘ನಾನು ತೊಟ್ಟಿಲಕಯದಿಂದ ಆವಿರ್ಭವಿಸಿದ್ದೇನೆ’ ಎನ್ನುವ ಮಾತನ್ನು ಉಚ್ಚರಿಸುವುದು ಐತಿಹಾಸಿಕ ವಿಷಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ದಿವ್ಯಸಾನ್ನಿಧ್ಯವಿರುವ ಶ್ರೀ ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯವು ಕಾಲಕಳೆದು ಶಿಥಿಲವಾಗಿತ್ತು. ಈ ಸಂದರ್ಭದಲ್ಲಿ ದೈವಜ್ಞರ ತಾಂಬೂಲಪ್ರಶ್ನೆಯಲ್ಲಿ ಜೀರ್ಣೋದ್ಧಾರವನ್ನು ಮಾಡಬೇಕೆನ್ನುವ ಸೂಚನೆಯು ಕಂಡುಬಂದಿತು. ದೈವ ಸಂಕಲ್ಪದಂತೆ ಈ ಪುನಃಪ್ರತಿಷ್ಟಾಪನಾ ಮಹೋತ್ಸವವು ನಡೆಸಲ್ಪಡುತ್ತಿದೆ. ಈ ಪುಣ್ಯಕೈಂಕರ್ಯದಲ್ಲಿ ಭಾಗಿಯಾಗಿ ಶ್ರೀ ಅಮ್ಮನವರ, ಪೂರ್ಣಕೃಪೆಗೆ ಭಾಜನರಾಗುವ ಮಹದವಕಾಶವು ಈ ಮೂಲಕ ಭಗವದಕ್ತರೆಲ್ಲರಿಗೂ ಲಭಿಸಿದೆ ಎಂದರು.
ಜೀರ್ಣೋದ್ಧಾರ ಮತ್ತು ಮನಃಪ್ರತಿಷ್ಠಾಪನೆ : ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ವರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ವೈಶಾಖ ಕೃಷ್ಣ ಸಪ್ತಮಿಯು ಮೇ 12ರಂದು ಬೆಳಿಗ್ಗೆ ಗಂಟೆ 8.22ಕ್ಕೆ ಶ್ರೀ ಬಲ್ನಾಡು ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ದಾರ ಮತ್ತು ಪುನಃಪ್ರತಿಷ್ಠಾಪನೋತ್ಸವವು ವೇದಮೂರ್ತಿ ಜಗದೀಶ ಭಟ್ ಭಟಪಾಡಿ ಇವರ ನೇತೃತ್ವದಲ್ಲಿ ಜರುಗಲಿರುವುದು. ಭಗವದ್ಭಕ್ತರಾದ ತಾವೆಲ್ಲರೂ ಈ ಮಹೋತ್ಸವಕ್ಕೆ ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಅವರು ವಿನಂತಿಸಿದರು.
ಮಾರ್ಚ್ ಹುಣ್ಣಿಮೆಯ ದಿನ ಹೂವಿನ ಪೂಜೆ ವಿಶೇಷ:
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ತೊಟ್ಟಿಲಕಯದಲ್ಲಿ ಕೇವಲ ಮೂರು ತಿಂಗಳಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಿದ್ದೇವೆ. ಸಂಪೂರ್ಣ ಶಿಲಾಮಯವನ್ನಾಗಿ ಮೂಲಸ್ಥಾನವನ್ನು ಮಾಡಿದ್ದು, ಅಂದಾಜು ರೂ. 30ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆದಿದೆ. ವೈದಿಕಪಾರಂಪರಿಕವಾಗಿ ಆರಾಧನೆ ಮಾಡುತ್ತಿರುವ ಇಲ್ಲಿ ಮಾರ್ಚ್ ಹುಣ್ಣಿಮಯ ದಿನದ ಹೂವಿನ ಪೂಜೆ ವಿಶೇಷವಾಗಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಬಾಲಕೃಷ್ಣ ರಾವ್ ಎಂ, ಉಪಾಧ್ಯಕ್ಷ ರವಿಕೃಷ್ಣ ಕಲ್ಲಾಜೆ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಉಪಸ್ಥಿತರಿದ್ದರು.