‘ನೂರಕ್ಕೆ ನೂರು ಗೆಲುವು ನಮ್ಮದೆ-ಧರ್ಮ ಆಧಾರಿತ ರಾಜಕಾರಣ ಮಾಡುತ್ತೇನೆ’ – ಗ್ರಾಮ, ನಗರ ಬೂತ್ ಪ್ರಮುಖರ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ

0

ಮುಂದಿನ ಗೆಲುವು ಕಾರ್ಯಕರ್ತರದ್ದು -ಡಾ.ಮುದ್ರಾಜೆ

ಯುದ್ಧದಲ್ಲಿ ಜಯಗಳಿಸಿದ ಅನುಭವ ಆಗಿದೆ -ಡಾ.ಸುರೇಶ್ ಪುತ್ತೂರಾಯ

ಅರುಣಣ್ಣನಿಗೆ ಸಚಿವ ಸ್ಥಾನ ಸಿಗಲಿ -ಹರಿಣಿ ಪುತ್ತೂರಾಯ

ಪುತ್ತೂರು:ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯ ಗೆಲುವು ನೂರಕ್ಕೆ ನೂರು ನಮ್ಮದೆ, ಇದು ಕಾರ್ಯಕರ್ತರ ಗೆಲುವು. ಮೋಸ, ಅವಮಾನ, ಸಂಘರ್ಷ ಮಾಡುವವರ ವಿರುದ್ಧದ ಗೆಲುವಾಗಲಿದೆ. ಆ ಮೂಲಕ ಧರ್ಮ ಆಧಾರಿತ ರಾಜಕಾರಣವನ್ನು ಮುಂದಿನ ೫ ವರ್ಷ ಮಾಡಲಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಪುತ್ತೂರು ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮೇ 11ರಂದು ಸಂಜೆ ಸುಭದ್ರ ಸಭಾಭವನದಲ್ಲಿ ನಡೆದ ಗ್ರಾಮ ಮತ್ತು ನಗರ ಬೂತ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರಿಗೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದ್ದಾರೆ. ‘ಮುಂದಿನ ದಿವಸಗಳಲ್ಲಿ ಉತ್ತರ ಕೊಡುತ್ತೇವೆ’ ಎಂಬ ವಿಚಾರದ ಮೂಲಕ ಸಂಘರ್ಷ ಮಾಡುವ ವಿಚಾರವನ್ನು ಕಾರ್ಯಕರ್ತರ ಜೊತೆ ಹಂಚಿಕೊಂಡಿದ್ದಾರೆ. ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಉದ್ಯೋಗದಿಂದ ತೆಗೆಸುವ ಕಾರ್ಯಕ್ಕೂ ಕೈ ಹಾಕಿರುವ ಕುರಿತು ಕಾರ್ಯಕರ್ತರು ನಮ್ಮ ಜೊತೆ ವಿಚಾರ ಹಂಚಿಕೊಂಡಿದ್ದರು. ಹಿರಿಯರ ಕಣ್ಣೀರು ಹಾಕಿಸುವ ಕೆಲಸ ಮಾಡಿದ್ದೂ ನಮಗೆ ತಿಳಿದಿದೆ. ಆದರೆ ನಮ್ಮ ಕಾರ್ಯಕರ್ತರು ಹಣದ ವಿಚಾರಕ್ಕೆ, ಅಧಿಕಾರದ ವಿಚಾರಕ್ಕೆ ಮಣಿಯುವುದಿಲ್ಲ, ಬಲತ್ಕಾರದ ಒತ್ತಡಕ್ಕೂ ಮಣಿಯುವುದಿಲ್ಲ. ಯಾವತ್ತಿದ್ದರೂ ಹಿಂದುತ್ವದ ಪರ ಇದ್ದೇವೆ ಎಂಬ ಒಂದೇ ಒಂದು ಯೋಚನೆಯ ನಡುವೆ ನನ್ನ ಜೊತೆಗೆ ನಿಂತಿರುವ ನಿಮ್ಮ ಜೊತೆ ನನ್ನ ಕೊನೆಯ ಉಸಿರಿರುವ ತನಕ ಇರುತ್ತೇನೆ. ಸಂಘರ್ಷಕ್ಕೆ, ಅಪಮಾನ ಅವಮಾನಗಳಿಗೆ ಉತ್ತರ ಕೊಡುತ್ತೇನೆ. ಧರ್ಮ ಆಧಾರಿತ ರಾಜಕಾರಣವನ್ನು 5 ವರ್ಷಗಳ ಕಾಲ ಮಾಡುತ್ತೇನೆ ಎಂದು ಹೇಳಿದ ಅವರು, ಅಧಿಕಾರ ಹಣಕಾಸಿನ ವಿಚಾರಕ್ಕೆ ನೀವ್ಯಾರೂ ನನ್ನ ಜೊತೆ ಬಂದಿಲ್ಲ.ಆದರೆ ಅನೇಕ ವರ್ಷಗಳಿಂದ ಕಾರ್ಯಕರ್ತರಿಗೆ ಮಾಡಿದ, ಸಂಘದ ಹಿರಿಯರಿಗೆ, ಪಕ್ಷದ ಹಿರಿಯರಿಗೆ ಮಾಡಿದ ಅವಮಾನ, ಜನತೆಗೆ ಮಾಡಿದ ಮೋಸಕ್ಕೆ ಉತ್ತರ ನೀಡುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೇನೆ ಹೊರತು ಬೇರೆ ಯಾವ ವಿಚಾರಕ್ಕೂ ಅಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಾಗಾಗಿ ನಿಶ್ಚಿತವಾಗಿಯೂ ಈ ಬಾರಿಯ ಗೆಲುವು ನಮ್ಮದೆ ಎಂದರು. ಹಿಂದು ರಾಷ್ಟ್ರದ ಕಲ್ಪನೆಯನ್ನು ನಾವೆಲ್ಲ ಸಾಕಾರಗೊಳಿಸೋಣ, ಸಿದ್ಧಾಂತ, ಭದ್ರತೆಯ ಆಧಾರದಲ್ಲಿ ಹಿಂದು ಸಮಾಜಕ್ಕೆ ಶಕ್ತಿಯನ್ನು ಕೊಡುವ ಕೆಲಸವನ್ನು ನಾವೆಲ್ಲ ಮಾಡೋಣ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ವಿಚಾರಗಳನ್ನು ಕೂಡಾ ಚುನಾಣೆಯ ನಂತರದ 5 ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಿಮ್ಮೆಲ್ಲರ ಸಹಕಾರದೊಂದಿಗೆ ನಾನು ಕೆಲಸ ನಿರ್ವಹಿಸುತ್ತೇನೆಂಬ ವಿಶ್ವಾಸ ನನಗಿದೆ.ಮುಂದಿನ ಯಾವ ಸಂದರ್ಭದಲ್ಲೂ ನಿಮ್ಮ ಜೊತೆಗೆ ನಾನಿರುತ್ತೇನೆ ಎಂಬ ಆಣೆಯನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪುಣ್ಯ ಭೂಮಿಯಲ್ಲಿ ಮಾಡುತ್ತೇನೆ ಎಂದರು.

ಕಾರ್ಯಕರ್ತರು ನೀಡಿದ ಹಣದಲ್ಲೇ ಚುನಾವಣೆ ನಿರ್ವಹಿಸಿರುವುದು ಉತ್ತಮ ಸಂದೇಶ: ಚುನಾವಣೆ ನಿರ್ವಹಿಸಲು ನಮಗೆ ಹಣಕಾಸಿನ ಕೊರತೆ ಇತ್ತು. ಆದರೆ ಈ ಬಾರಿ ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಿ ಚುನಾವಣೆಯಲ್ಲಿ ಗೆಲುವಿನ ದಡ ಹೇಗೆ ದಾಟೋದು ಎಂದಾದಾಗ ಆರ್ಥಿಕವಾಗಿ ನಾವು ಜೊತೆಗಿದ್ದೇವೆ ಎಂಬ ರೀತಿಯಲ್ಲಿ ಕಾರ್ಯಕರ್ತರು ನೀಡಿದ ಹಣದಿಂದಲೇ ಈ ಚುನಾವಣೆ ನಿರ್ವಹಿಸಿದ್ದೇವೆ. ಇದರಿಂದ ದೇಶಕ್ಕೆ ಒಂದು ಒಳ್ಳೆಯ ಸಂದೇಶ ಹೋಗಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಮುಂದಿನ ಗೆಲುವು ಕಾರ್ಯಕರ್ತರದ್ದು: ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಅವರು ಮಾತನಾಡಿ ಅರುಣ್ ಕುಮಾರ್ ಪುತ್ತಿಲ ನಮಗೆಲ್ಲ ಒಂದು ಶಕ್ತಿ.ಅವರ ಗೆಲುವಿನ ವಿಜಯೋತ್ಸವ ಹೇಗೆ ನಡೆಯಬೇಕೆಂಬ ಕುರಿತು ಚಿಂತನೆ ಮಾಡಿ. ಮೇ 13ಕ್ಕೆ ಇಲ್ಲಿ ದೊಡ್ಡ ಸ್ಕ್ರೀನ್ ಹಾಕಿ ಮತದಾನ ಎಣಿಕೆ ಕಾರ್ಯದ ವೀಕ್ಷಣೆ ನಡೆಯಬೇಕು. ಇದರ ಜೊತೆಗೆ ಅಂದು ವಿಜಯೋತ್ಸವಕ್ಕೆ ತಯಾರಿ ಕೂಡಾ ನಡೆಯಬೇಕು.ಮುಂದಿನ ಗೆಲವು ಕಾರ್ಯಕರ್ತರದ್ದಾಗಿದೆ ಎಂದರು.

ಗೆಲುವು ನಮ್ಮದಲ್ಲ ಹಿಂದುತ್ವದ ಗೆಲುವು: ಉದ್ಯಮಿ ರಾಜಶೇಖರ್ ಅವರು ಮಾತನಾಡಿ ಕಳೆದ 23 ದಿನಗಳಿಂದ ನಾನು ನಿಮ್ಮ ಜೊತೆಗಿದ್ದೆ. ಪ್ರತಿ ಗ್ರಾಮದ ಮೂಲೆಯಲ್ಲೂ ರಾತ್ರಿ 12 ಗಂಟೆ ಆದರೂ ನಮ್ಮ ಬರುವಿಕೆಗಾಗಿ ಕಾದು ನೀವು ತೋರಿಸಿದ ಪ್ರೀತಿಗೆ ಋಣಿಯಾಗಿದ್ದೇನೆ. ಅರುಣಣ್ಣ ಇವತ್ತು ಕರ್ನಾಟಕಕ್ಕೆ ಯಾರು ಎಂದು ತಿಳಿದಿದೆ. ಅವರು ಮಾಡಿದ ಧರ್ಮ ವಿಚಾರ ಎಲ್ಲರಿಗೂ ತಿಳಿದಿದೆ.ಕಾರ್ಯಕರ್ತರು ತಮ್ಮ ಕೈಲಾದಷ್ಟು ಕೆಲಸ ಮಾಡಿದ್ದಾರೆ.ನಾವು ಹಳ್ಳಿಗಳಿಗೆ ಹೋದಾಗ ಭರವಸೆ ನೀಡಿದ್ದೇವೆ. ಅದು ಭರವಸೆಯಾಗಿ ಉಳಿಯದೇ ಮುಂದಿನ ದಿನ ಅರುಣಣ್ಣ ಶಾಸಕರಾಗಿ ಬಂದಾಗ ಭರವಸೆಗೆ ಒಂದು ಚೂರು ಚ್ಯುತಿ ಬಾರದ ರೀತಿಯಲ್ಲಿ ಕೆಲಸ ನಡೆಯಲಿದೆ.ಈ ನಿಟ್ಟಿನಲ್ಲಿ ಮತದಾನ ಮಾಡಿದ ಮತದಾರರ ಮನೆಗೆ ತೆರಳಿ ಧನ್ಯವಾದ ಹೇಳಿ ಎಂದರಲ್ಲದೆ,ಈ ಗೆಲುವು ನಮ್ಮದಲ್ಲ ಹಿಂದುತ್ವದ ಗೆಲುವು ಎಂದರು.

ಯುದ್ಧದಲ್ಲಿ ಜಯಗಳಿಸಿದ ಅನುಭವ ಆಗಿದೆ: ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ ಕಾರ್ಯಕರ್ತರಿಗೆ ಅಭಿನಂದನೆಗಳು.ಯಾಕೆಂದರೆ ಕಳೆದ 25 ದಿನಗಳಲ್ಲಿ ನಾನು ನೋಡಿದಂತೆ ಅರುಣಣ್ಣನಿಗೆ ಇಷ್ಟೊಂದು ಮಂದಿ ಅಭಿಮಾನಿಗಳು ಇದ್ದಾರೆಂದು ನೋಡಿ ಆಶ್ಚರ್ಯವಾಗಿದೆ.ಇದು ಹಿಂದು ಸಮಾಜದ ಒಗ್ಗಟ್ಟನ್ನು ನೋಡಿದ ಅನುಭವ ಆಗಿದೆ.ಹಾಗಾಗಿ ಯುದ್ಧದಲ್ಲಿ ನಾವು ಜಯಗಳಿಸಿದ ಅನುಭವ ಕೂಡಾ ಆಗಿದೆ ಎಂದರು.
ದೇವದುರ್ಲಭ ಕಾರ್ಯಕರ್ತರಿಗೆ ಮೊದಲ ಪ್ರಣಾಮಗಳು: ರಾಜಾರಾಮ್ ಭಟ್ ಅವರು ಮಾತನಾಡಿ ನಾನು ನೋಡಿದಂತೆ ದೇವರಿದ್ದಾರೆ.ಆದರೆ ದೇವರ ಸಮಾನವಾಗಿ ಯಾವುದೇ ರೀತಿಯ ಪ್ರತಿ-ಲಾಪೇಕ್ಷೆ ಇಲ್ಲದೆ ದುಡಿದ ಕಾರ್ಯಕರ್ತರು ದೇವದುರ್ಲಭ ಕಾರ್ಯಕರ್ತರು ಅವರು ದೇವರ ಪರಿವಾರ ಗಣದಲ್ಲಿದ್ದಂತೆ ಅವರಿಗೆ ಮೊದಲ ಪ್ರಣಾಮಗಳು ಎಂದರು.

ಅರುಣಣ್ಣನಿಗೆ ಸಚಿವ ಸ್ಥಾನ ಸಿಗಲಿ: ಹರಿಣಿ ಪುತ್ತೂರಾಯ ಅವರು ಮಾತನಾಡಿ ಮೇ ೧೩ಕ್ಕೆ -ಲಿತಾಂಶ ಹೊರಬಂದು ನಮ್ಮ ಅರುಣಣ್ಣ ಶಾಸಕರಾಗಿ ಮುಂದಿನ ದಿನ ಪ್ರಭಾವಿ ಸಚಿವ ಸ್ಥಾನಮಾನ ಸಿಗಲಿ ಎಂದು ಶುಭ ಹಾರೈಸಿದರು.

ಕಾರ್ಯಕರ್ತರ ಋಣ ತೀರಿಸುವ ಕೆಲಸ ಆಗಲಿದೆ: ಪ್ರಸನ್ನ ಕುಮಾರ್ ಮಾರ್ತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚುನಾವಣೆ ಎದುರಿಸುವ ಸಂದರ್ಭ ನಮಗೆ ಧೈರ್ಯ ತುಂಬಿದವರು ಕಾರ್ಯಕರ್ತರು.ಅವರ ಉತ್ಸಾಹ ಅರುಣಣ್ಣನಿಗೆ ಶಕ್ತಿ ನೀಡಿದೆ.ಮುಂದಿನ ದಿನ ಕಾರ್ಯಕರ್ತರ ಋಣ ತೀರಿಸುವ ಕೆಲಸ ಆಗಲಿದೆ ಎಂದರಲ್ಲದೆ, ನಮ್ಮ ವಿಜಯೋತ್ಸವವು ಅದ್ದೂರಿಯಾಗಿ ನಡೆಯಲಿದೆ ಎಂದರು.

ಮನೀಶ್ ಕುಲಾಲ್ ಜನ್ಮ ದಿನಾಚರಣೆ: ಕಾರ್ಯಕ್ರಮದ ಕೊನೆಯಲ್ಲಿ, ಅರುಣ್ ಕುಮಾರ್ ಪುತ್ತಿಲ ಅವರ ಆಪ್ತ ಮಿತ್ರ ಮನೀಶ್ ಕುಲಾಲ್ ಅವರ ಜನ್ಮದಿನಾಚರಣೆ ನಡೆಸಲಾಯಿತು. ಕಾರ್ಯಕರ್ತರು ಮನೀಶ್ ಕುಲಾಲ್ ಅವರಿಗೆ ಮಲ್ಲಿಗೆ ಹಾರ ಹಾಕಿದರು. ಮನೀಶ್ ಕುಲಾಲ್ ಅವರು ದೀಪ ಬೆಳಗಿಸಿ ಕೇಕ್ ಕತ್ತರಿಸಿದರು. ಅನಿಲ್ ತೆಂಕಿಲ, ಭಾಸ್ಕರ್ ಆಚಾರ್ ಹಿಂದಾರು, ಉಮೇಶ್ ವೀರಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಮೇಶ್ ವೀರಮಂಗಲ ಸ್ವಾಗತಿಸಿ,ಗಿರೀಶ್ ವಂದಿಸಿದರು. ರವಿ ಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು.ಪುತ್ತಿಲ ಅವರ ಚುನಾವಣಾ ಏಜೆಂಟ್ ಪ್ರವೀಣ್ ಶೆಟ್ಟಿ ತಿಂಗಳಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವೈದ್ಯರು ಇಟ್ಟಿರುವ ಹೆಜ್ಜೆ ನಮಗೆ ಭವಿಷ್ಯ ರೂಪಿಸಿದೆ

ಚುನಾವಣೆಯ ಆರಂಭದಲ್ಲಿ ನಮ್ಮನ್ನು, ಗೂಂಡಾಯಿಸಮ್ ಮಾಡುತ್ತಾರೆ ಅವರೊಂದಿಗೆ ಯಾರೂ ಇಲ್ಲ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಅವಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಜೊತೆಗೆ ಕೈ ಹಿಡಿದು ಹೆಜ್ಜೆ ಹಾಕಿದ ವೈದ್ಯರುಗಳು ನಮಗೆ ಪ್ರಾತಃ ಸ್ಮರಣೀಯರು.ಅವರು ಇಟ್ಟಿರುವ ಹೆಜ್ಜೆ ನಮಗೆ ಭವಿಷ್ಯ ರೂಪಿಸಿದೆ.ನನ್ನ ಜೀವಮಾನದ ಕೊನೆಯ ಕ್ಷಣದವರೆಗೂ ನಾನು ನಿಮ್ಮನ್ನು ಮರೆಯುವುದಿಲ್ಲ ಎಂದು ಡಾ.ಸುರೇಶ್ ಪುತ್ತೂರಾಯ ಮತ್ತು ಡಾ.ಗಣೇಶ್‌ಪ್ರಸಾದ್ ಮುದ್ರಾಜೆಯವರಿಗೆ ಅರುಣ್ ಕುಮಾರ್ ಪುತ್ತಿಲ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here