ಪುತ್ತೂರು: ಕರ್ನಾಟಕ ವಿಧಾನಸಭೆಗೆ ಮೇ 10ರಂದು ಶಾಂತಿಯುತ ಮತದಾನ ನಡೆದಿದ್ದು ನಾಳೆ ಸುರತ್ಕಲ್ ಎನ್‌ಐಟಿಕೆ ಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪುತ್ತೂರು, ಸುಳ್ಯ, ಬಂಟ್ವಾಳ ಸಹಿತ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 60 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಎನ್‌ಐಟಿಕೆಯ ಕೇಂದ್ರ ಗ್ರಂಥಾಲಯದಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ.
ಎಕ್ಸಿಟ್ ಪೋಲ್ ನೀಡಿರುವ ಮಾಹಿತಿಯ ಹೊರತಾಗಿಯೂ ಜನ ಸಾಮಾನ್ಯ ಮತದಾರ ಇಂದಿನ ರಣ ಕೌತುಕ ಘಳಿಗೆಗಾಗಿ ಕಾಯುತ್ತಿದ್ದಾನೆ. ಈ ಮಧ್ಯೆ ಮತ ಎಣಿಕೆ ನಡೆಯುವ ದಿನದಂದು ಜಿಲ್ಲೆಯಾದ್ಯಂತ ಸೆಕ್ಷನ್ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ದ.ಕ ಜಿಲ್ಲಾ ಚುನಾವಣಾಧಿಕಾರಿ ರವಿ ಕುಮಾರ್ ಎಂ.ಆರ್. ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆಯ ಸಂದರ್ಭ ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಪತ್ರಕರ್ತರು ಹಾಗೂ ಅಭ್ಯರ್ಥಿಗಳ ಏಜೆಂಟರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆಯನ್ನು ಏರ್ಪಡಿಸಲು ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ತುಕಡಿಗಳನ್ನು ಬಳಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಮದ್ಯ ಬಂದ್: ಮೇ 13ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆ ತನಕ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಆದೇಶಿಸಲಾಗಿದೆ.