ಅಂಬಿಕಾ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಬಿಡುಗಡೆ

0

ಯುವ ಜನತೆ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗುವುದು ಅಗತ್ಯ: ಡಾ. ವರದರಾಜ ಚಂದ್ರಗಿರಿ

ಪುತ್ತೂರು: ಆಧುನಿಕ ತಂತ್ರಜ್ಞಾನ ಹೊಸ ಪೀಳಿಗೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇದು ಸಾಹಿತ್ಯ ಕ್ಷೇತ್ರಕ್ಕೂ ತಟ್ಟಿದೆ. ಶೈಕ್ಷಣಿಕ ವಿಚಾರಗಳಿಗೂ ವಿದ್ಯಾರ್ಥಿಗಳು ತಂತ್ರಾಂಶಗಳನ್ನು ಅವಲಂಬಿಸಿಕೊಳ್ಳುವಂತಾಗಿದೆ. ಇದು ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಿದ್ದು, ಯುವ ಸಮೂಹ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗುವಂತೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಹೊಸ ತಲೆಮಾರು ಸಾಹಿತ್ಯ ಚಟುವಟಿಕೆಗಳಿಗೆ ಹೇಗೆ ಸ್ಪಂದಿಸುತ್ತದೆ ಹಾಗೂ ಸ್ವೀಕರಿಸುತ್ತದೆ ಎನ್ನುವ ಬಗ್ಗೆಯೂ ಅರಿತುಕೊಳ್ಳುವುದು ಅತ್ಯಗತ್ಯ ಎಂದು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕ ಆಯೋಜಿಸಿದ್ದ ಪುತ್ತೂರು ಕ.ಸಾ.ಪ ದತ್ತಿನಿಧಿ 2015, 21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಸಿಂಧೂರ’ ಬಿಡುಗಡೆ ಹಾಗೂ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆ ಅವರ ಚಿಂತನಗಾಥ ವಿಮರ್ಶಾ ಲೇಖನದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಮುಂದುರಿದಿದ್ದು, ಅವುಗಳಿಗೆ ಕಮಾಂಡ್ ನೀಡಿದರೆ ಅವುಗಳೇ ಸಾಹಿತ್ಯ ರಚನೆಗೆ ಸ್ಪಂದನೆ ನೀಡಿ ನಮ್ಮ ಮುಂದೆ ಇಡುತ್ತವೆ. ಹೀಗಾದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ.

ಕನ್ನಡ ನಾಡು- ನುಡಿ ಎಂಬುದನ್ನು ನಾವು ಬಳಸುತ್ತೇವೆ. ಇದು ವಿಶಾಲ ಅರ್ಥವನ್ನು ಒಳಗೊಂಡಿದ್ದು, ಪಂಚ ಭೂತಗಳನ್ನು ಇದು ಒಳಗೊಂಡಿವೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾಡು- ನುಡಿ ಸೃಷ್ಟಿಯ ಒಂದು ಭಾಗವಾಗಿದ್ದು ಇದರ ಉಳಿವಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯತೆ ಇದೆ. ಮಾತು, ಬರಹ, ಲಿಪಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಅವುಗಳು ಅಭಿವೃದ್ಧಿ ಹೊಂದಿ ಮನೆ ಮನಗಳನ್ನು ತಲುಪಲು ಸಾಧ್ಯವಿದೆ. ಆದ್ದರಿಂದ ಯುವ ಪೀಳಿಗೆ ಈ ವಿಚಾರಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಪ್ರೋತ್ಸಾಹ ನೀಡಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆ, ಗಾದೆಗಳನ್ನು ಆಧರಿಸಿ ಬರೆದ ಚಿಂತನಾ ಬರಹವೇ ಚಿಂತನಾಗಾಥಾ. ಇವುಗಳನ್ನು ಅಂಕಣಗಳನ್ನಾಗಿ ಪ್ರಕಟಿಸಿದ ಬಳಿಕ ಇವುಗಳು ಸಾರ್ವಜನಿಕರನ್ನು ತಲುಪಿರುವ ಬಗ್ಗೆ ಅರಿಯಲು ಸ್ಪರ್ಧೆ ನಡೆಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗಿದೆ ಎಂದರು.

21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಸಿಂಧೂರ’ ಬಿಡುಗಡೆಗೊಳಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಶಿಕ್ಷಣ ಸಂಸ್ಥೆಗಳು ರಾ‌ಷ್ಟ್ರಪ್ರೇಮ, ಸಂಸ್ಕೃತಿ, ಭಾಷೆಯ ಉಳಿವಿಗೆ ಸದಾ ಕಾರ್ಯ ನಿರ್ವಹಿಸುತ್ತದೆ. ಕನ್ನಡ ಭಾಷೆಯ ಸೇವೆಗೆ ಸಂಸ್ಥೆ ಸಿದ್ಧವಾಗಿದ್ದು, ಕನ್ನಡ ಪರ ಕೆಲಸ ನಿರ್ವಹಿಸುವುದು ಸ್ವಾಭಿಮಾನದ ಸಂಕೇತವಾಗಿದೆ. ಮುಂದೆಯೂ ಇಂತಹಾ ಭಾಷೆಯ ಉಳಿವಿಗೆ ಸಹಕರಿಸುವ ಕಾರ್ಯಕ್ರಮಗಳು ನಡೆದಲ್ಲಿ ಸಹಕಾರ ನೀಡಲಾಗುವುದು ಎಂದರು.

ಪುತ್ತೂರು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ತಾಲೂಕು ಅಧ್ಯಕ್ಷ ಡಾ. ಶ್ರೀ ಧರ್ ಎಚ್. ಜಿ. ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥಿತವಾಗಿ ನಡೆದಿದೆ. ಇನ್ನಷ್ಟೂ ಕನ್ನಡ ಪರ ಕಾರ್ಯಕ್ರಮಗಳು ತಾಲೂಕಿನಲ್ಲಿ ನಡೆಯಬೇಕಿದೆ. ಸಾಹಿತ್ಯ ಸಮ್ಮೇಳನದ ಚಿತ್ರಣವನ್ನು ಸಿಂಧೂರ ಸ್ಮರಣ ಸಂಚಿಕೆಯಲ್ಲಿ ಹಿಡಿದಿಡುವ ಪ್ರಯತ್ನ ನಡೆಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಕಾರ್ಯಗಳು ನಿರಂತರವಾಗಿ ನಡೆಯಲಿದೆ. ಮುಖ್ಯ ಯುವ ಜನತೆಯನ್ನು ತಲುಪುವ ಉದ್ದೇಶದಿಂದ ಅವರ ಬಳಿಗೆ ತೆರಳಿ ಕಾರ್ಯವನ್ನು ಆಯೋಜನೆ ಮಾಡಲಾಗುತ್ತಿದೆ. ಸ್ಮರಣ ಸಂಚಿಕೆ ವ್ಯವಸ್ಥಿತವಾಗಿ ಹೊರ ತಂದಿದ್ದು, ಸಾಹಿತ್ಯ ಸಮ್ಮೇಳನದ ದಾಖಲೀಕರಣ ನಡೆಸಲಾಗಿದೆ ಎಂದರು.

ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸಿದವರಿಗೆ ಗೌರವಾರ್ಪಣೆ ನಡೆಸಲಾಯಿತು. ಸಿಂಧೂರ ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ, ಕ.ಸಾ.ಪ. ಜಿಲ್ಲಾ ಗೌರವ ಕೋಶಾಧಿಕಾರಿ ಬಿ. ಐತಪ್ಪ ನಾಯ್ಕ್ ಉಪಸ್ಥಿತರಿದ್ದರು. ಅಂಬಿಕಾ ಸಿ.ಬಿ.ಎಸ್.ಸಿ. ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ.ಸಾ.ಪ. ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ. ಸ್ವಾಗತಿಸಿದರು. ಕನ್ನಡ ಶಿಕ್ಷಕ ಸತೀಶ್ ಇರ್ದೆ ನಿರೂಪಿಸಿ, ಕ.ಸಾ.ಪ. ಪುತ್ತೂರು ಘಟಕ ಕಾರ್ಯಕಾರಿ ಸಮಿತಿ ಸದಸ್ಯೆ ಶಂಕರಿ ಶರ್ಮ ವಂದಿಸಿದರು.

ಪ್ರೊ.ವಿ ಬಿ ಆರ್ತಿ ಕಜೆ ಅವರ ಚಿಂತನ ಗಾಥಾ ವಿಮರ್ಶಾ ಲೇಖನದ ಸ್ಪರ್ಧಾ ವಿಜೇತರು:
ಪ್ರಥಮ ಸ್ಥಾನವನ್ನು ಅರುಣ್ ಕಿರಿ ಮಂಜೇಶ್ವರ ಹಾಗೂ ಶ್ರೀಕಲಾ ಕಾರಂತ್, ದ್ವಿತೀಯ ಸ್ಥಾನ ಸುಕೃತಿ ಅನಿಲ್ ಪೂಜಾರಿ, ತೃತೀಯ ಸ್ಥಾನ ಮಾನಸ ವಿಜಯ ಕೈತಜೆ, ಪ್ರೋತ್ಸಾಹಕ ಬಹುಮಾನಗಳನ್ನು ಅಶೋಕ್ ಗೌಡ ಕಾಣಿಯೂರು, ಸುಂದರ ಪುತ್ತೂರು, ಸುಜಾತಾ ರೈ ಕಡಬ, ಮಲ್ಲಿಕಾ ಜೆ ರೈ, ರೇಖಾ ಶ್ರೀನಿವಾಸ್ ಬದಿಯಡ್ಕ ಪಡೆದುಕೊಂಡರು.

ಭ್ರಷ್ಟಾಚಾರ ವಿರುದ್ಧ ಯಶಸ್ವಿ ಅಭಿಯಾನ
ಬಹುಮಾನ ವಿತರಣೆ ನಡೆಸಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳು ಮುಖ್ಯಸ್ಥ ಡಾ. ಯು.ಪಿ. ಶಿವಾನಂದ್, ವಿ.ಬಿ. ಅರ್ತಿಕಜೆ ಅವರು ನಿರಂತರ ಅಂಕಣಗಳನ್ನು ಬರೆಯುತ್ತಿದ್ದು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಪ್ರಸ್ತುತ ಮೂರು ಅಂಕಣಗಳು ಪ್ರಕಟವಾಗುತ್ತಿವೆ. ಇದರಲ್ಲಿ ಚಿಂತನಾಗಾಥಾ ಕುರಿತು ಸ್ಪರ್ಧೆ ಏರ್ಪಡಿಸಲಾಗಿದ್ದು ಬಹುಮಾನ ವಿತರಣೆ ನಡೆಸುತ್ತಿರುವುದು ಸಂತಸದ ವಿಚಾರ. ಅರ್ತಿಕಜೆ ಅವರಿಂದ ಇನ್ನಷ್ಟು ಬರಹಗಳು ಬರುವಂತಾಗಲಿ ಎಂದರಲ್ಲದೆ ಸುದ್ದಿ ಮೂಲಕ ವರುಣಾ ಕ್ಷೇತ್ರದಲ್ಲಿ ಭ್ರಷ್ಟಚಾರ ವಿರೋಧಿ ಅರಿವನ್ನು ಮೂಡಿಸಲಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

LEAVE A REPLY

Please enter your comment!
Please enter your name here