ಬೆಂಗಳೂರು:ಈ ಬಾರಿ ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಸ್ವಲ್ಪ ವಿಳಂಬವಾಗುವ ನಿರೀಕ್ಷೆ ಇದ್ದು, ಜೂನ್ 4 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆಯೂ ಇರುತ್ತದೆ. ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಈ ಬಾರಿ 4 ದಿನ ವಿಳಂಬವಾಗಿ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಮಾನ್ಸೂನ್ ಕಳೆದ ವರ್ಷ ಮೇ 29 ರಂದು, 2021ರಲ್ಲಿ ಜೂನ್ 3 ಮತ್ತು 2020ರಲ್ಲಿ ಜೂನ್ 1 ರಂದು ದೇವರ ನಾಡು ದಕ್ಷಿಣ ರಾಜ್ಯ ಪ್ರವೇಶಿಸಿತ್ತು. ವಿಕಸನಗೊಳ್ಳುತ್ತಿರುವ ಎಲ್ ನಿನೋ ಪರಿಸ್ಥಿತಿಗಳ ಹೊರತಾಗಿಯೂ ನೈಋತ್ಯ ಮುಂಗಾರು ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಳೆದ ತಿಂಗಳು ಹೇಳಿತ್ತು. ಈ ವರ್ಷ ಮುಂಗಾರು ಋತುವಿನಲ್ಲಿ ಭಾರತವು ಸಾಮಾನ್ಯ ಮಳೆ ವೀಕ್ಷಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.