ಕಪೋಲಕಲ್ಪಿತ ವಿಚಾರಗಳ ಮೂಲಕ ಕೋಮು ಪ್ರಚೋದನೆ ಆರೋಪ – ಕೆದಿಲದ ಶ್ರೀಕೃಷ್ಣ ಉಪಾಧ್ಯಾಯರ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಕಪೋಲಕಲ್ಪಿತ ವಿಚಾರಗಳನ್ನು ಭಾಷಣಗಳ ಮೂಲಕ ಪ್ರಚುರಪಡಿಸಿ ಸಮಾಜದಲ್ಲಿ ಶಾಂತಿಯನ್ನು ಕದಡಿ ಕೋಮು ಪ್ರಚೋದನೆಯನ್ನು ಮಾಡಿದ ಆರೋಪದಲ್ಲಿ ಕೆದಿಲದ ಶ್ರೀಕೃಷ್ಣ ಉಪಾಧ್ಯಾಯರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕೆದಿಲ ಪಾಟ್ರಕೋಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಉಮ್ಮರ್ ಹಾಜಿ ಅವರು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಈ ಕುರಿತು ದೂರು ನೀಡಿದ್ದರು. ಕ್ಷೇತ್ರ ಚುನಾವಣಾಧಿಕಾರಿಯವರು ನಡೆಸಿದ ಪ್ರಾಥಮಿಕ ವಿಚಾರಣೆ ನಡೆಸಿ ಕಂಡು ಬಂದಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಎಫ್‌ಎಸ್‌ಟಿ ಅಧಿಕಾರಿಗಳು ಪ್ರಕರಣ ಪರಿಶೀಲಿಸಿ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಏ.29ರಂದು ಪುತ್ತೂರು ಅಶ್ಮಿ ಕಂಫರ್ಟ್‌ನಲ್ಲಿ ನಡೆದ ಅರುಣ್ ಕುಮಾರ್ ಪುತ್ತಿಲರ ಪರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಅವರು ತಮ್ಮ ಭಾಷಣದಲ್ಲಿ ‘ಕೆದಿಲ ಗ್ರಾಮದ ಪಾಟ್ರಕೋಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮಂಗಳೂರಿನ ಮತಾಂಧನೊಬ್ಬ ಹಿಂದು ಹೆಣ್ಣನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಅದನ್ನು ನೋಡಿದ ಹಿಂದು ಸಂಘಟನೆಯ ಕಾರ್ಯಕರ್ತನೊಬ್ಬ ಹಿಂಬಾಲಿಸಿದಾಗ ಅತ ತನ್ನನ್ನು ತಪ್ಪಿಸಿಕೊಳ್ಳಲು ಪಾಟ್ರಕೋಡಿ ಮಸೀದಿಗೆ ನುಗ್ಗಿದ. ಈ ವಿಷಯವನ್ನರಿತ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಆಗಮಿಸಿ ಮಸೀದಿಯೊಳಗೆ ನುಗ್ಗಿ, ಸಂಜೆಯೊಳಗಡೆ ಪೊಲೀಸ್ ಸ್ಟೇಷನ್‌ನಲ್ಲಿ ಆತ ಮತ್ತು ಅಪಹರಿಸಿರುವ ಆಕೆಯನ್ನು ಶರಣಾಗತಿ ಮಾಡದಿದ್ದಲ್ಲಿ ಪಾಟ್ರಕೋಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಧಗಧಗನೆ ಉರಿಯುತ್ತದೆ ಎಂದು ಅವಾಜ್ ಹಾಕಿದವರು ಇದೇ ಪುತ್ತಿಲ’ ಎಂದು ಭಾಷಣದಲ್ಲಿ ಹೇಳಿದ್ದರು. ಆದರೆ ಅಂತಹ ಘಟನೆ ಅಲ್ಲಿ ಯಾವತ್ತೂ ಕೂಡಾ ನಡೆದಿಲ್ಲ. ಇಂತಹ ಪ್ರಕರಣವನ್ನು ಸೃಷ್ಟಿಸಿ ಹಿಂದು ಮುಸಲ್ಮಾನರ ಮಧ್ಯೆ ದ್ವೇಷವನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿದ್ದಾಗಿದೆ.ಇಂತಹ ಕಪೋಲಕಲ್ಪಿತ ವಿಷಯಗಳನ್ನು ಸೃಷ್ಟಿ ಮಾಡಿ ಭಾಷಣದ ಮೂಲಕ ಹೇಳಿರುವುದರಿಂದ ಪಾಟ್ರಕೋಡಿ ಪರಿಸರದ ಮುಸಲ್ಮಾನ ಸಮುದಾಯದವರಿಗೆ ತೀರಾ ನೋವಾಗಿದೆ. ಚುನಾವಣಾ ಪ್ರಚಾರವನ್ನು ಕೋಮು ದ್ವೇಷಗಳನ್ನು ಬಿತ್ತಿ ಅಹಿತಕರ ಘಟನೆಗಳನ್ನು ಸೃಷ್ಟಿ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಭಾಷಣ ಮಾಡಿರುವ ಭಾಷಣಕಾರ ಕೆದಿಲ ಶ್ರೀಕೃಷ್ಣ ಉಪಾಧ್ಯಾಯರವರ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಉಮ್ಮರ್ ಹಾಜಿ ಅವರು ನೀಡಿದ ದೂರಿನಂತೆ
ಶ್ರೀಕೃಷ್ಣ ಉಪಾಧ್ಯಾಯರವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 125ರಡಿ ಪ್ರಕರಣ ದಾಖಲಿಸಲು ಚುನಾವಣಾ ಅಧಿಕಾರಿಯವರು ದೂರು ನೀಡಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ಮತ್ತು 1988 ಕಲಂ 125 ಮತ್ತು ಐಪಿಸಿ 1860 ದಡಿಯಲ್ಲಿ 153ಎ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here