ಪುತ್ತೂರು; ಮಳೆಗಾಲಕ್ಕೆ ಮುಂಚಿತವಾಗಿ ಪುತ್ತೂರು -ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಮಳೆ ಬಂದರೆ ಕಾಮಗಾರಿಗೆ ಅಡ್ಡಿಯಾಗಬಹುದು. ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ರಸ್ತೆ ಕಾಮಗಾರಿಯಲ್ಲಿ ಎಳ್ಳಷ್ಟೂ ಕಳಪೆಯಾಗಬಾರದು. ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡುವ ಮೂಲಕ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಬೇಕು ಎಂದು ಶಾಸಕರು ಸೂಚನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಪ್ರಾರಂಭಗೊಂಡ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಬಹುದು ಎಂಬುದರ ಬಗ್ಗೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು.
ಕಟ್ಕನ್ವರ್ಶನ್ನಿಂದ ಜನರಿಗೆ ತೊಂದರೆ: ಕಂದಾಯ ಇಲಾಖೆಯ ಕಟ್ಕನ್ವರ್ಶನ್ನಿಂದಾಗಿ ಜನರಿಗೆ ತೊಂದರೆಯಾಗಿದೆ, 94 ಸಿ ಇನ್ನೂ ಹಲವಾರು ಮಂದಿಗೆ ಸಿಕ್ಕಿಲ್ಲ, ಅಕ್ರಮ ಸಕ್ರಮ ಫೈಲು ಪೆಂಡಿಂಗ್ ಇದೆ ಎಲ್ಲವನ್ನೂ ಸರಿಮಾಡಬೇಕಿದೆ. ಉಪ್ಪಿನಂಗಡಿಯಿಂದ ನೀರು ಲಿಫ್ಟ್ ಮಾಡಿ ಗ್ರಾಪಂಗಳಿಗೆ ಹಂಚುವ ಕಾರ್ಯ ನಡೆಯಬೇಕೆಂಬುದು ನನ್ನ ಕನಸು. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ. ಕೊಳವೆ ಬಾವಿಯ ನೀರು ಫಿಲ್ಟರ್ ಆಗಿಯೇ ಸಾರ್ವಜನಿಕ ಟ್ಯಾಂಕ್ಗೆ ಶೇಖರಣೆಯಾಗುವ ಕೆಲಸವೂ ಆಗಬೇಕಿದೆ ಎಂದು ರೈ ಹೇಳಿದರು.
ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ: ಮಹಾಲಿಂಗೆಶ್ವರ ದೇವಸ್ಥಾನದಲ್ಲಿ ಅಭಿವೃದ್ದಿ ಕೆಲಸಗಳು ತುಂಬಾ ಬಾಕಿ ಇದೆ. ಸೂಕ್ತ ಶೌಚಾಲಯದ ವ್ಯವಸ್ಥೆ ಬೇಕಿದೆ. ಮಹಾಲಿಂಗೇಶ್ವರ ದೇವಳವನ್ನು ಮಾಸ್ಟರ್ ಪ್ಲ್ಯಾನ್ ಮಾಡಿ ಅಭಿವೃದ್ದಿ ಮಾಡುವ ಯೋಜನೆಯೂ ಇದೆ. ಭಕ್ತಾದಿಗಳಿಗೆ ಎಲ್ಲಾ ಸೌಕರ್ಯವನ್ನು ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ಶಾಸಕರು ಹೇಳಿದರು.
ಮಳೆಗಾಲಕ್ಕೆ ಮೊದಲು ಅಧಿಕಾರಿಗಳ ಸಭೆ: ಮಳೆಗಾಲಕ್ಕೆ ಪೂರ್ವಭಾವಿಯಾಗಿ ಕೆಲವೇ ದಿನಗಳಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯುತ್ತೇನೆ. ಮಳೆಗಾಲಕ್ಕೆ ಪ್ರತಿಯೊಂದು ಇಲಾಖೆ ಸಜ್ಜುಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ತುರ್ತು ವ್ಯವಸ್ಥೆಗಳನ್ನು ಕೈಗೊಳ್ಳುವಲ್ಲಿ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಸೂಚನೆಯನ್ನು ನೀಡಲಿದ್ದೇನೆ.
ಪಕ್ಷದ ನಾಯಕರ ಸಲಹೆ ಪಡೆಯುವೆ: ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡಬೇಕಾದರೆ ಪಕ್ಷದ ಪ್ರಮುಖರ ಸಲಹೆಯನ್ನು ಪಡೆದೇ ಕೆಲಸವನ್ನು ಮುಂದುವರೆಸುತ್ತೇನೆ. ಸ್ವಯಂ ಆಗಿ ನಾನು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಪಕ್ಷದ ನಾಯಕರ ಸಲಹೆ ಸೂಚನೆಯನ್ನು ಗೌರವಿಸುತ್ತೇನೆ ಎಂದು ಹೇಳಿದರು.
ಕಾನೂನುಬಾಹಿರ ಕೆಲಸ ಮಾಡಿದರೆ ಕಠಿಣಕ್ರಮ: ಯಾರೂ ಶಾಂತಿಯನ್ನು ಕದಡುವ ಕೆಲಸವನ್ನು ಮಾಡಬಾರದು. ಅಶಾಂತಿಗೆ ಯಾರೇ ಕಾರಣರಾದರೂ ಅಂಥವರ ವಿರುದ್ದ ಕಠಿಣಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆಯನ್ನು ನೀಡುತ್ತೇನೆ. ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇಲ್ಲಿ ಬಾಳ್ವೆ ನಡೆಸಬೇಕು ಎಂಬುದೇ ನನ್ನ ಕನಸಾಗಿದೆ. ಕಾಂಗ್ರೆಸ್ನವರು ಗೂಂಡಾಗಿರಿ ಮಾಡುತ್ತಾರೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಶಾಂತಿಪ್ರಿಯರು. ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಪುತ್ತೂರು ಕ್ಷೇತ್ರ ಮೆರುಗನ್ನು ಪಡೆಯಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಭ್ರಷ್ಟಾಚಾರ ಸಹಿಸುವುದೇ ಇಲ್ಲ
ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಇರುವ ಬಗ್ಗೆ ದೂರುಗಳು ಬಂದಿದೆ. ನಾನು ಭ್ರಷ್ಟಾಚಾರಿಯಲ್ಲದ ಕಾರಣ ನಾನು ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನಯೇ ಇಲ್ಲ. ಸಾರ್ವಜನಿಕರ ಕೆಲಸಕಾರ್ಯಗಳು ನಡೆಯಬೇಕಾದರೆ ಅಧಿಕಾರಿಗಳು ಬೇಕೇಬೇಕು. ಎಲ್ಲರ ಸಹಕಾರದಿಂದ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ. ಜನರ ಕೆಲಸ ಸುಲಭ ರೀತಿಯಲ್ಲಿ ಮಾಡಿಕೊಡುವಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಿದ್ದೇನೆ. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಲು ಪರಮಾತ್ಮನಿಂದಲೂ ಸಾಧ್ಯವಿಲ್ಲ ಆದರೆ ಅಧಿಕಾರದಲ್ಲಿರುವವರು ಭ್ರಷ್ಟಾಚಾರ ಮಾಡದೇ ಇದ್ದರೆ ಇತರರೂ ಅದನ್ನೇ ರೂಡಿಸಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ.
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು