ಇಚ್ಲಂಪಾಡಿ: ದಾರಿ ವಿವಾದ-ಚೂರಿ ಇರಿತ, ದೂರು

0

ನೆಲ್ಯಾಡಿ: ದಾರಿ ವಿವಾದಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿ ಇರಿದಿರುವ ಘಟನೆಯೊಂದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಅಲಂಗ ಎಂಬಲ್ಲಿ ಮೇ 16ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.


ಅಲಂಗ ನಿವಾಸಿ ಅಲೆಕ್ಸ್ ವರ್ಗೀಸ್ ಎಂಬವರ ಕೈಯ ತೋರು ಬೆರಳಿಗೆ ನೆರೆ ಮನೆಯ ತೋಮಸ್ ಎಂಬವರು ತಿವಿದು ಗಾಯಗೊಳಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಿರುವ ಅಲೆಕ್ಸ್ ವರ್ಗೀಸ್‌ರವರು, ಮೂರು ತಿಂಗಳಿನಿಂದ ಕಾಲು ದಾರಿಯ ವಿಚಾರದಲ್ಲಿ ನೆರೆಯ ಈಪನ್ ಮತ್ತು ತೋಮಸ್ ಎಂಬವರಿಗೆ ತಕರಾರು ಇದ್ದು 1 ತಿಂಗಳ ಹಿಂದೆ ಕಾಲು ದಾರಿಯ ವಿಚಾರದಲ್ಲಿ ತೋಮಸ್‌ರವರಲ್ಲಿ ಮಾತನಾಡಲು ಹೋದಾಗ ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಮೇ 16ರಂದು ಸಂಜೆ 3.30ಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ಅಲೆಕ್ಸ್ ವರ್ಗೀಸ್ ಹಾಗೂ ತೋಮಸ್‌ರವರ ನಡುವೆ ಗಲಾಟೆ ನಡೆದಿರುತ್ತದೆ. ಅದೇ ದಿನ ಸಂಜೆ 4.30ರ ವೇಳೆಗೆ ನೆರೆಯ ರೋಸಮ್ಮ ಎಂಬವರು ದನಗಳಿಗೆ ಹುಲ್ಲು ಕೀಳಲು ಅದೇ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತೋಮಸ್‌ರವರು ಅವಾಚ್ಯವಾಗಿ ಬೈದು ದೂಡಿ ಹಾಕಿದ್ದಾರೆ. ಈ ವೇಳೆ ರೋಸಮ್ಮರವರ ಬೊಬ್ಬೆ ಕೇಳಿ ಅಲೆಕ್ಸ್ ವರ್ಗೀಸ್‌ರವರು ಅಲ್ಲಿಗೆ ಹೋದಾಗ ತೋಮಸ್‌ರವರು ಕೈಯಲ್ಲಿದ್ದ ಚೂರಿಯಿಂದ ಬಲ ಕೈಯ ತೋರು ಬೆರಳಿಗೆ ತಿವಿದಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಅಲೆಕ್ಸ್ ವರ್ಗೀಸ್ ಹಾಗೂ ರೋಸಮ್ಮರನ್ನು ಅಟೋ ರಿಕ್ಷಾವೊಂದರಲ್ಲಿ ಈಪನ್ ತೋಮಸ್‌ರವರು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು ಅಲ್ಲಿ ಗಾಯಾಳುಗಳು ಒಳರೋಗಿಯಾಗಿ ದಾಖಲು ಆಗಿದ್ದಾರೆ. ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here