ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯಿರುವ ನೇತ್ರಾವತಿ ಸೇತುವೆಯ ಕೆಳಗೆ ವ್ಯಕ್ತಿಯೋರ್ವ ಅಂಗಾಂತ ಮಲಗಿದ್ದ ದೃಶ್ಯ ಮೇ 18ರಂದು ಕಂಡು ಬಂದಿದ್ದು, ಈತ ಮೃತಪಟ್ಟಿದ್ದಾನೆ ಎಂದು ಎಂದು ಭ್ರಮಿಸಿ ಜನರ ದಂಡೇ ಸೇತುವೆಯ ಮೇಲಿನಿಂದ ಕೆಳಗಡೆ ಇಣುಕುತ್ತಿತ್ತು. ಬಳಿಕ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಸದಸ್ಯರಿಬ್ಬರು ಆತನ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಈತ ಮದ್ಯಪಾನ ಮಾಡಿ ಮಲಗಿರುವುದು ಗಮನಕ್ಕೆ ಬಂದು ಬಳಿಕ ಬೇಸ್ತು ಬೀಳುವ ಸರದಿ ಎಲ್ಲರದ್ದಾಗಿತ್ತು.
ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ಸಾಲುಗಟ್ಟಿ ಜನ ನಿಂತು ಸೇತುವೆಯ ಕೆಳಗೆ ಇಣುಕುತ್ತಿದ್ದರು. ಕೆಲವರು ವಾಹನಗಳನ್ನು ಬದಿಗೆ ನಿಲ್ಲಿಸಿ ಅಲ್ಲಿ ಬಂದು ಇಣುಕುತ್ತಿದ್ದರೆ, ಇನ್ನು ಕೆಲವರು ಅಲ್ಲಿ ಜನ ನೆರೆದಿರುವ ಮಾಹಿತಿ ತಿಳಿದು ಪೇಟೆಯಿಂದಲೂ ಅಲ್ಲಿಗೆ ಓಡಿ ಬಂದಿದ್ದರು. ಯಾಕೆಂದರೆ ನೇತ್ರಾವತಿ ನದಿಯ ನೀರಿರುವ ಜಾಗದ ಬಳಿ ಸೇತುವೆಯ ಕೆಳಗಡೆ ಮರಳಿನಲ್ಲಿ ವ್ಯಕ್ತಿಯೋರ್ವ ಅಂಗಾಂತ ಮಲಗಿದ್ದ. ಈತ ಒಂದು ಚೂರು ಮಿಸುಕಾಡುತ್ತಿರಲಿಲ್ಲ. ಅದನ್ನು ಕಂಡು ಹಲವರು ತಲೆಗೊಂದರಂತೆ ಊಹಾಪೋಹಗಳನ್ನು ಹೇಳುತ್ತಾ ಕುತೂಹಲದಿಂದ ಸೇತುವೆಯ ಕೆಳಗಡೆ ಇಣುಕುವುದರಲ್ಲಿ ಬಾಕಿಯಾಗಿದ್ದರು. ಮೇಲಿನಿಂದ ಅಲ್ಲಿ ನೆರೆದಿದ್ದವರು ಕೂಗಿ ಕರೆದರೂ ಈತ ಮಾತ್ರ ಒಂದು ಚೂರು ಮಿಸುಕಾಡುವುದು ಕಂಡು ಬರಲಿಲ್ಲ. ಇದನ್ನು ನೋಡಿದ ಉಪ್ಪಿನಂಗಡಿಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಫಯಾಝ್ ಯು.ಟಿ. ಹಾಗೂ ರಶೀದ್ ಅವರು ಸುಮಾರು 15 ನಿಮಿಷಕ್ಕೂ ಹೆಚ್ಚಿನ ಕಾಲ್ನಡಿಗೆಯಲ್ಲಿ ನದಿಗಿಳಿದು ಈತನ ಬಳಿ ತೆರಳಿದರು. ಆಗ ಈತ ಉಸಿರಾಡುವುದು ಕಂಡು ಬಂತಲ್ಲದೆ, ಅವರಿಗೆ ಕಷ್ಟದಲ್ಲಿ ಮೆಲ್ಲಗೆ ಕೈಯೆತ್ತಿ ವಿಶ್ ಕೂಡಾ ಮಾಡಿದ್ದ. ಅತಿಯಾದ ಮದ್ಯಪಾನದ ನಶೆಯಲ್ಲಿದ್ದ ಈತ ಇಹವನ್ನೇ ಮರೆತ್ತಿದ್ದ. ಮದ್ಯಪಾನ ಮಾಡಿ ಈತ ಈ ರೀತಿ ಬಿದ್ದುಕೊಂಡಿದ್ದಾನೆ ಎಂದು ತಿಳಿದು ಅವರು ಮತ್ತೆ ವಾಪಸಾದರು. ಈತನ ನಶೆಯ ಸುಸ್ತಿನಿಂದ ಬೇಸ್ತು ಹೋದ ಜನರೂ ಸೇತುವೆಯಿಂದ ಮತ್ತೆ ಕರಗತೊಡಗಿದರು. ಮಧ್ಯಾಹ್ನ ತನಕ ಅಲ್ಲೇ ಬಿದ್ದಿದ್ದ ಈತ ನಶೆ ಇಳಿದ ಬಳಿಕ ಅಲ್ಲಿಂದ ಎದ್ದು ಹೋಗಿದ್ದಾನೆ ಎಂದು ತಿಳಿದು ಬಂದಿದೆ