ನಗರದೊಳಗೆ 6 ಕಡೆಗಳಲ್ಲಿ ನವೀಕರಿಸಿ ಮರು ಬಳುಸುವ ವಸ್ತುಗಳನ್ನು ಪಡೆಯುವ ಕೇಂದ್ರಗಳ ಸ್ಥಾಪನೆ – ಮಧು ಎಸ್ ಮನೋಹರ್
ಪುತ್ತೂರು: ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ನಿರ್ದೇಶನದಂತೆ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಪುತ್ತೂರು ನಗರಸಭೆಯಲ್ಲಿ ಈ ಕುರಿತು ಮೇ 20ರಂದು ನಗರ ಅಭಿಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮೇ 19ರಂದು ನಗರಸಭೆಯಲ್ಲಿ ಸ್ವ ಸಹಾಯ ಸಂಘದ ಸಭೆ ನಡೆಯಿತು.
ಪೌರಾಯುಕ್ತ ಮಧು ಎಸ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಭಿಯಾನವು ಮೇ 20ರಿಂದ ಜೂನ್ 5ರವರೆಗೆ ವಿವಿದೆಡೆ ನಡೆಯಲಿದ್ದು, ಪುತ್ತೂರಿನ 6 ಕಡೆಗಳಲ್ಲಿ ಆರ್ಆರ್ಆರ್ (ಕಡಿಮೆ ಮರುಬಳಕೆ ವಸ್ತುಗಳ) ಸ್ಥಳವನ್ನು ಸ್ಥಾಪಿಸಲಾಗುವುದು. ದರ್ಬೆ ರಿಲಯನ್ಸ್ ಸ್ಮಾರ್ಟ್ ಬಳಿ, ನಗರಸಭೆ ಕಟ್ಟಡದ ಬಳಿ, ಕೃಷ್ಣನಗರ ಬಸ್ ನಿಲ್ದಾಣದ ಬಳಿ, ಬಲ್ನಾಡು, ಉಜ್ರುಪಾದೆ ಸಮಾಜದ ಬಳಿ, ಬೊಳುವಾರು ಇನ್ಸ್ಟಾ ಬಾಸ್ಕೆಟ್ ಬಳಿ, ಬನ್ನೂರು ಎಸ್ಡಬ್ಲ್ಯುಎಮ್ ಸೈಟ್ ಬಳಿ ವಸ್ತು ಮರು ಪಡೆಯುವ ಸೌಲಭ್ಯಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಮೇಲ್ಕಂಡ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳನ್ನು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಕ್ಯಾರಿಬ್ಯಾಗ್, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರು ಬಳಸಬಹುದಾದಂತಹ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಬಹುದು ಎಂದು ಅವರು ಮಾಹಿತಿ ನೀಡಿದ ಅವರು ಪುತ್ತೂರಿನ ನಾಗರಿಕರು ಪುತ್ತೂರು ನಗರಸಭೆಯೊಂದಿಗೆ ಕೈಜೋಡಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ, ಕಚೇರಿ ಮೆನೇಜರ್ ಪಿಯುಸ್ ಡಿಸೋಜ, ಸಮುದಾಯ ವ್ಯವಹಾರ ಅಧಿಕಾರಿ ಕರುಣಾಕರ ಸಹಿತ ಕಚೇರಿ ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.