ರಾಮಕುಂಜ: ಮಲೇರಿಯಾ, ಡೆಂಗ್ಯು ದಿನಾಚರಣೆ, ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ

0

ಜನರ ಆರೋಗ್ಯ ಕಾಪಾಡುವಲ್ಲಿ ಆಶಾಕಾರ್ಯಕರ್ತೆಯರಿಂದ ಉತ್ತಮ ಕೆಲಸ: ಶಾಸಕಿ ಭಾಗೀರಥಿ ಮುರುಳ್ಯ

ರಾಮಕುಂಜ: ಮುತ್ತೂಟ್ ಫೈನಾನ್ಸ್, ಕಸ್ವಿ ಹಸಿರು ದಿಬ್ಬಣ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪುತ್ತೂರು ತಾಲೂಕು ಆರೋಗ್ಯಕೇಂದ್ರದ ಆಶ್ರಯದಲ್ಲಿ ಮಲೇರಿಯಾ, ಡೆಂಗ್ಯು ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ಶುಕ್ರವಾರ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.

ಸುಳ್ಯ ನೂತನ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುತ್ತೂಟ್ ಫೈನಾನ್ಸ್ ಹಲವು ಸಾಮಾಜಿಕ ಕೆಲಸ ಮಾಡುತ್ತಿದೆ. ಕತ್ತಲೆಯಿಂದ ಬೆಳಕಿನೆಡೆ ಬರಬೇಕೆಂಬ ದೃಷ್ಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ಲೈಟ್ ವಿತರಣೆ ಮಾಡುವ ಮೂಲಕ ಮಲೇರಿಯಾ, ಡೆಂಗ್ಯು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಕಡಬ ಮಾದರಿ ತಾಲೂಕು ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುವುದಾಗಿ ಸುಳ್ಯ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ಡೆಂಗ್ಯು, ಮಲೇರಿಯಾ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಈ ರೋಗ ಬಾರದಂತೆ ತಡೆಗಟ್ಟುವುದು ಅತೀ ಅಗತ್ಯವಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಈ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.

ಕಸ್ವಿ ಹಸಿರು ದಿಬ್ಬಣದ ಮುಖ್ಯಸ್ಥ ಕೇಶವ ರಾಮಕುಂಜ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಕೆಲಸ ಮುತ್ತೂಟ್ ಫೈನಾನ್ಸ್ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರು ಕೊರೋಣ ವಾರಿಯರ್ಸ್ ಆಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.ಕಸ್ವಿ ಹಸಿರು ದಿಬ್ಬಣದ ಸಹಯೋಗದಲ್ಲಿ ರಾಮಕುಂಜದ ನೆಕ್ಕರೆ ಪರಿಸರದಲ್ಲಿ 50 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ದಿನೇಶ್ ಕೋಡಿಯಾಲ್‌ಬೈಲ್ ಹಾಗೂ ಮಾಧವ ಉಳ್ಳಾಲ್ ಅವರ ನೇತೃತ್ವದಲ್ಲಿ “ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ” ಎಂಬ ಧ್ಯೇಯವಾಕ್ಯದೊಂದಿಗೆ ಹುಟ್ಟಿದ ಕಸ್ವಿ ಹಸಿರು ದಿಬ್ಬಣ ಕಳೆದ ವರ್ಷ 19ಜನರ ಹುಟ್ಟುಹಬ್ಬವನ್ನು ಗಿಡ ನೆಡುವುದರ ಮೂಲಕ ಆಚರಿಸಿ ಇನ್ನಷ್ಟು ಜನರನ್ನು ಪ್ರೆರೇಪಿಸಲಾಗಿದೆ. ಅಭಿವೃದ್ಧಿಗೆ ಮರ ತೆರವುಗೊಂಡಲ್ಲಿ ಅಲ್ಲಿ ಮತ್ತೆ ಗಿಡ ನೆಡುವ ಕೆಲಸ ಆಗಬೇಕೆಂದು ಹೇಳಿದರು.

ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಎನ್.ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ.ನವೀನ್‌ಚಂದ್ರ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರ್ ಮಾತನಾಡಿದರು.

ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಮುತ್ತೂಟ್ ಫೈನಾನ್ಸ್ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ನಮಿತ ಕಾಮತ್ ಎಂ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುತ್ತೂಟ್ ಫೈನಾನ್ಸ್ನ ಮಂಗಳೂರು ವಿಭಾಗದ ಮೇನೇಜರ್(ಸಿಎಸ್‌ಆರ್) ಪ್ರಸಾದ್‌ ಕುಮಾರ್ ಸ್ವಾಗತಿಸಿದರು. ಕೇಶವ ರಾಮಕುಂಜ ವಂದಿಸಿದರು. ಜೆಸಿಐನ ವಲಯ ತರಬೇತಿ ವಿಭಾಗದ ನಿರ್ದೇಶಕ ಜೆಸಿ.ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಅನುಶ್ರೀ ಉಡುಪ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ.ನವೀನ್‌ಚಂದ್ರ ಅವರು ಮಲೆರಿಯಾ, ಡೆಂಗ್ಯು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಮುತ್ತೂಟ್ ಫೈನಾನ್ಸ್ನ ಮಂಗಳೂರು ವಿಭಾಗದ ಮೇನೇಜರ್(ಸಿಎಸ್‌ಆರ್) ಪ್ರಸಾದ್‌ ಕುಮಾರ್‌ರವರು ಫೈನಾನ್ಸ್ನ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿಯವರ ನೇತೃತ್ವದ ಅಧಿಕಾರಿಗಳ ತಂಡ ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿನ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಸೈನ್ಸ್ ಪಾರ್ಕ್ಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

200ಕ್ಕೂ ಹೆಚ್ಚು ಟಾರ್ಚ್ ಲೈಟ್ ವಿತರಣೆ:
ಕಡಬ ತಾಲೂಕಿನ 200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಈ ಸಂದರ್ಭದಲ್ಲಿ ಟಾರ್ಚ್ ಲೈಟ್ ವಿತರಣೆ ಮಾಡಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು ಸಾಂಕೇತಿಕವಾಗಿ ಟಾರ್ಚ್ಲೈಟ್ ವಿತರಣೆ ಮಾಡಿದರು. ಮಲೇರಿಯಾ, ಡೆಂಗ್ಯು ಜಾಗೃತಿ ಕುರಿತ ಭಿತ್ತಿಪತ್ರ ಇದೇ ವೇಳೆ ಬಿಡುಗಡೆಗೊಳಿಸಲಾಯಿತು.

ಸನ್ಮಾನ:
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಚುನಾಯಿತರಾದ ಬಳಿಕ ಪ್ರಥಮ ಬಾರಿಗೆ ರಾಮಕುಂಜಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯ ಅವರಿಗೆ ಶಾಲು, ಹಾರಾರ್ಪಣೆ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗಿಡಗಳ ಪೋಷಣೆ ಮಾಡುತ್ತಿರುವ ಮಹೇಶ್ ಬಾಂತೊಟ್ಟು ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here