ಗನ್ ತೋರಿಸಿ ನೀನು ಒಪ್ಪಿಕೊಳ್ಳಬೇಕೆಂದು ಹೆದರಿಸಿ ಪೊಲೀಸರು ಹೊಡೆದಿದ್ದಾರೆ-ಗಾಯಾಳು ಅವಿನಾಶ್

0

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಅವಿನಾಶ್ ಅವರು ಪೊಲೀಸರು ನಡೆಸಿರುವ ದೌರ್ಜನ್ಯದ ಕುರಿತು ಸಮಗ್ರ ಮಾಹಿತಿ ಬಿಚ್ಚಿಟ್ಟಿದ್ದಾರೆ.
‘ನಾವು ಯಾವಾಗಲು ಮನೆ ಪಕ್ಕ ಸ್ನೇಹಿತರ ಜೊತೆ ಕೂತುಕೊಂಡಿರುತ್ತೇವೆ. ಮೇ 15ಕ್ಕೆ ಅಲ್ಲಿ ಕೂತಿರುವಾಗ ನಮ್ಮನ್ನು ಪೊಲೀಸರು ನಿಮ್ಮ ಜೊತೆ ಮಾತನಾಡಲು ಇದೆ ಎಂದು ಹೇಳಿ ಸ್ಟೇಷನ್‌ಗೆ ಕರೆದುಕೊಂಡು ಹೋದರು. ಅವರು ಮಂಜಲ್ಪಡ್ಪು ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನನ್ನಲ್ಲಿ ನಿಮ್ಮಲ್ಲಿ ಅವಿನಾಶ್ ಯಾರು ಎಂದು ಕೇಳಿದಾಗ ನಾನೇ ಎಂದು ಹೇಳಿದೆ. ಅದೇ ಕ್ಷಣದಲ್ಲಿ, ನೀನು ಭಾರೀ ಹಾರಾಡುತ್ತೀಯ ಎಂದು ಹೇಳಿ ಹೊಡೆಯಲು ಪ್ರಾರಂಭಿಸಿದರು. ಡಿವೈಎಸ್ಪಿ ಅವರೇ ನನ್ನ ಕಾಲರ್ ಹಿಡಿದು ಡಿವೈಎಸ್ಪಿ ರೂಮ್‌ಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಬಟ್ಟೆಬರೆ ತೆಗೆಸಿ ಹೊಡೆಯಲು ಸ್ಟಾರ್ಟ್ ಮಾಡಿದರು. ದಪ್ಪದ ಬೆತ್ತದಲ್ಲಿ ತೊಡೆಯ ಭಾಗಕ್ಕೆ ಹೊಡೆದರು. ಕಾಲಿನ ಪಾದಕ್ಕೆ ಹೊಡೆಯಲು ಉಳಿದ ಪೊಲೀಸರು ಮೆಟ್ಟಿ ಹಿಡಿದು ಡಿವೈಎಸ್ಪಿ ಅವರು ಲಾಠಿಯಿಂದ ಹೊಡೆದರು. ಕೆಲವು ಪೊಲೀಸರು ನನ್ನ ಕೆನ್ನೆಗೆ ಬಲವಾಗಿ ಹೊಡೆದರು. ಈ ಹೊಡೆತದಿಂದ ಕಿವಿ ಸ್ವಲ್ಪ ಕೇಳುವುದಿಲ್ಲ. ಮತ್ತೆ ಗನ್ ತೋರಿಸಿ ಭಯ ಪಡಿಸುತ್ತಿದ್ದರು. ನೀನು ಇದನ್ನು ಒಪ್ಪಿಕೊಳ್ಳಬೇಕು ಎಂದರು. ಗನ್ ಟೇಬಲ್ ಮೇಲೆ ಇಟ್ಟು ಮತ್ತೂ ಭಯ ಪಡಿಸಿದ್ದಾರೆ. ಸುಮಾರು 10 ಗಂಟೆಗೆ ನಮ್ಮನ್ನು ಕರೆದುಕೊಂಡು ಹೋಗಿ ಹೊಡೆಯಲು ಪ್ರಾರಂಭಿಸಿದ್ದರು. ರಾತ್ರಿ ಸುಮಾರು 1 ಗಂಟೆಗೆ ಅರುಣಣ್ಣ ಬಂದರು. ಅವರು ಬಾರದೆ ಇರುತ್ತಿದ್ದರೆ ಬೆಳಗಿನ ತನಕ ಹೊಡೆದು ಲಾಕಪ್ ಡೆತ್ ಆಗುವ ಚಾನ್ಸ್ ಇತ್ತು ಕಾಣ್ತದೆ. ಆ ರೀತಿ ಹೊಡೆದಿದ್ದಾರೆ ಎಂದು ಅವಿನಾಶ್ ಹೇಳಿದ್ದಾರೆ.

ನಮಗೆ ಮೇಲಿಂದಲೇ ಪ್ರೆಶರ್ ಇದೆ ಎಂದು ಹೇಳಿ ಹೊಡೆಯುತ್ತಿದ್ದರು: ಡಿವೈಎಸ್ಪಿ, ಪೊಲೀಸರು ಹೊಡೆಯುತ್ತಿರಬೇಕಾದರೆ, ನಾವು ಇಲ್ಲಿ ಊಟ ಕೂಡಾ ಮಾಡಿಲ್ಲ. ಬೆಳಗ್ಗಿನಿಂದ ನಮಗೆ 200ರಿಂದ 300 ಕಾಲ್ ಬರುತ್ತಿದೆ. ನೀವು ಹಾಕಿರುವ ಬ್ಯಾನರ್‌ನಲ್ಲಿ ಇರುವವರು ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು. ಹಾಗಾಗಿ ಇದು ಇಂಟರ್‌ನ್ಯಾಷನಲ್ ನ್ಯೂಸ್ ಆಗಿದೆ. ಮೇಲಿಂದಲೇ ನಮಗೆ ಪ್ರೆಶರ್ ಇದೆ. ನಮಗೆ ಕೂತುಕೊಳ್ಳಲೂ ಬಿಡುತ್ತಿಲ್ಲ. ನಾವು ಊಟ ಕೂಡಾ ಮಾಡಿಲ್ಲ ಎಂದು ಹೇಳಿ ಪೊಲೀಸರು ಹೊಡೆಯುತ್ತಿದ್ದರು ಎಂದು ಅವಿನಾಶ್ ಹೇಳಿದ್ದಾರೆ.

ಹೊಟ್ಟೆಗೂ ತುಳಿದಿದ್ದಾರೆ: ಡಿವೈಎಸ್ಪಿ ಲಾಠಿಯಲ್ಲಿ ಹೊಡೆಯುತ್ತಿದ್ದಾಗ ಇನ್ನೆರಡು ಪೊಲೀಸರು ಹೊಟ್ಟೆಗೂ ತುಳಿಯುತ್ತಿದ್ದರು. ಹಾಗಾಗಿ ಹೊಟ್ಟೆಯ ಒಳಗೆ ನೋವಿದೆ. ಕಣ್ಣು ಸುತ್ತಿದ್ದಂತೆ ಆಗುತ್ತಿದೆ ಎಂದು ಅವಿನಾಶ್ ತಮ್ಮ ನೋವನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here