ಇಂದು(ಮೇ.21)- ‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’-ಪುತ್ತಿಲರಿಂದ ಸೇವಾ ಸಮರ್ಪಣಾ ಸಮಾವೇಶ

0

ಪುತ್ತೂರು: ಈ ಬಾರಿಯ ಚುನಾವಣೆಯಲ್ಲಿ ಮತದಾರರ ತೀರ್ಮಾನಮನ್ನು ನಾವು ಗೌರವಿಸುತ್ತೇವೆ.ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಜನತೆಗೆ ಕೊಟ್ಟಿರುವ ಆಶ್ವಾಸನೆಯನ್ನು ಮುಂದಿನ ದಿನ ಈ ಕ್ಷೇತ್ರದ ಜನತೆಯ ಜೊತೆಗೆ ನಿಂತು ನಾವು ಕೆಲಸ ಮಾಡುತ್ತೇವೆ.ಈ ಹಿನ್ನೆಲೆಯಲ್ಲಿ ಚುನಾವಣೆಯ ಸಂದರ್ಭದಲ್ಲಿನ ಸೇವಾ ಸಮರ್ಪಣಾ ಸಮಾವೇಶ ಮೇ 21ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’ ರೀತಿಯಲ್ಲಿ ನಡೆಯಲಿದೆ ಎಂದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತನಾದರೂ ದಾಖಲೆ ಮತಗಳಿಕೆಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರು ತಿಳಿಸಿದ್ದಾರೆ.


ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಚುನಾವಣೆ ಸಂದರ್ಭದಲ್ಲಿ ನಮಗೆ ಮತವನ್ನು ನೀಡಿದ ಎಲ್ಲಾ ಮತದಾರ ಬಾಂಧವರಿಗೆ ಮತ್ತು ಸತ್ಯಾಸತ್ಯತೆಯನ್ನು ಅತ್ಯಂತ ಪಾರದರ್ಶಕವಾಗಿ ಸಮಾಜದ ಮುಂದೆ ಇಟ್ಟಿರುವ ಎಲ್ಲಾ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಅರ್ಪಿಸಿದ ಅವರು, ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಸಣ್ಣ ಅಂತರದಿಂದ ನಮಗೆ ಸೋಲು ಬಂದಿದೆ.ಮತದಾರರ ತೀರ್ಮಾನವನ್ನು ನಾವು ಗೌರವಿಸುತ್ತೇವೆ.ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಸಭೆಯು ಮೇ 21ರಂದು ಸಂಜೆ ಗಂಟೆ 4ಕ್ಕೆ ನಡೆಯಲಿದೆ.ದರ್ಬೆ ವೃತ್ತದಿಂದ ಬರಿ ಕಾಲಿನಲ್ಲಿ ಪಾದಯಾತ್ರೆ ನಡೆಯಲಿದೆ.ಧರ್ಮಾಧಾರಿತವಾದ ರಾಜಕಾರಣ ಮತ್ತು ಹಿಂದುತ್ವವನ್ನು ಪ್ರತಿಪಾದನೆ ಮಾಡುವ ಸಂಕಲ್ಪದ ಜೊತೆಗೆ ಮಹಾಲಿಂಗೇಶ್ವರ ದೇವರ ನಡೆಯಲ್ಲೇ ಎಲ್ಲಾ ಕಾರ್ಯಚಟುವಟಿಕೆ ಮಾಡಿದ್ದೆವು.ಅದಕ್ಕಾಗಿ ಮತದಾರರಿಗೆ ಕೃತಜ್ಞತೆ ಮತ್ತು ಚುನಾವಣೆ ಸಂದರ್ಭದಲ್ಲಿ ನಮಗೆ ಶಕ್ತಿಯನ್ನು ನೀಡಿದ ದೇವರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ದರ್ಬೆಯಿಂದ ಪಾದಯಾತ್ರೆ ಮೂಲಕ ದೇವರಿಗೆ ವಂದನೆ ಸಲ್ಲಿಸಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಗುವುದು.ಈ ಕಾರ್ಯಕ್ರಮದಲ್ಲಿ ಮುಂದಿನ 5 ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡಬೇಕು ಮತ್ತು ಮುಂದಿನ ನಮ್ಮ ನಡೆ ಏನು ಎಂಬುದನ್ನು ಸಮಾವೇಶದಲ್ಲಿ ತಿಳಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಸೂಚನೆ
‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಾದರಕ್ಷೆ ಹಾಕದೆ ಬರಿಗಾಲಿನಲ್ಲಿ ನಡೆಯಲಿದ್ದಾರೆ.ಇವರ ಜೊತೆ ಬರಿಗಾಲಿನಲ್ಲಿ ಬರಲು ಕಾರ್ಯಕರ್ತರಿಗೆ ಅವಕಾಶವಿದೆ.ಮಹಾಲಿಂಗೇಶ್ವರ ದೇವರಿಗೆ ಜಯಘೋಷ ಹೊರತು ಬೇರೆ ಯಾವುದೇ ಘೋಷಣೆಗೆ ಅವಕಾಶ ಇಲ್ಲ.ಭಜನೆ, ‘ಓಂ ನಮಃ ಶಿವಾಯ:’ ಮಂತ್ರ ಪಠಣಕ್ಕೆ ಮುಕ್ತ ಅವಕಾಶ ಇದೆ.ಯಾವುದೇ ಹಾರಾರ್ಪಣೆಗೆ ಅವಕಾಶ ಇರುವುದಿಲ್ಲ,ಯಾವುದೇ ನೂಕು ನುಗ್ಗಲು ಮಾಡದೇ ಶಿಸ್ತಿನಿಂದ ಕಾಲ್ನಡಿಗೆಯಲ್ಲಿ ಸಾಗುವುದು.ಮಹಾಲಿಂಗೇಶ್ವರ ದೇವಾಲಯದ ರಥಬೀದಿಯಲ್ಲಿ ಸಮಾರೋಪ ಸಮಾರಂಭದಲ್ಲಿ ಶಿಸ್ತಿನಿಂದ ಭಾಗವಹಿಸುವುದು.ಬಿಳಿ ಬಣ್ಣದ ಶರ್ಟ್ ಮತ್ತು ಕೇಸರಿ ಪಂಚೆಯಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರ ವಾಟ್ಸಪ್ ಗ್ರೂಪ್‌ಗಳಲ್ಲಿ ಕಾರ್ಯಕರ್ತರಿಗೆ ಸೂಚನೆಯ ಸಂದೇಶ ರವಾನಿಸಲಾಗಿದೆ.


LEAVE A REPLY

Please enter your comment!
Please enter your name here