ಚುನಾವಣಾ ಫಲಿತಾಂಶದ ಮರುದಿನ ಪುತ್ತೂರಿನ ಬಸ್ ನಿಲ್ದಾಣದ ಬಳಿ, ಡಿವಿಯವರಿಗೆ, ನಳಿನ್ ಕುಮಾರ್ ಕಟೀಲ್‌ರವರಿಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿ, ಚಪ್ಪಲಿ ಹಾರ ಹಾಕಿದವರು ತಮ್ಮ ಪಕ್ಷದವರು. ತಮ್ಮ ಪಕ್ಷ ಸೋತ ಸಿಟ್ಟಿನಿಂದ ತಮ್ಮ ಮಹಾನ್ ನಾಯಕರ ಮೇಲೆ ರೋಷ ತೀರಿಸಿಕೊಂಡಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಂಡಿದ್ದರೆ, ಅದನ್ನು ಹಾಕಿದವರನ್ನು ಹುಡುಕಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದರೆ ಕಥೆ ಬೇರೆ ಆಗುತ್ತಿತ್ತು. ಅವರ ವಿರುದ್ಧ ಪ್ರತಿಭಟನೆ ಮಾತ್ರವಲ್ಲ ದೂರು ಕೊಟ್ಟು ಪರೋಕ್ಷವಾಗಿ ಪೊಲೀಸ್ ದೌರ್ಜನ್ಯಕ್ಕೆ ಕಾರಣವಾದದ್ದು ದೊಡ್ಡ ತಪ್ಪು ಎಂದು ಈಗ ಅವರಿಗೆಲ್ಲರಿಗೂ ಅರ್ಥವಾಗಿದೆ. ಅದನ್ನು ಸರಿಪಡಿಸಲು ಹೆಣಗಾಡುತ್ತಿದ್ದಾರೆ. ಆದರೆ ಆ ಪ್ರಯತ್ನದಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಭರದಲ್ಲಿ ಅದನ್ನು ಕಾಂಗ್ರೆಸ್‌ನ ಮೇಲೆ ಹೇರಿದ್ದನ್ನು ಯಾರೂ ಒಪ್ಪುತ್ತಿಲ್ಲ. ಹಾಗೆ ಮಾಡಿರುವುದರಿಂದ, ಅತ್ಯಂತ ವಿಶ್ವಾಸಕ್ಕೆ ಪಾತ್ರರಾಗಿದ್ದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರು ತಮ್ಮ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವುದು ಸರಿಯೇ? ಎಂದು ಜನರು ಪ್ರಶ್ನಿಸುವಂತೆ ಆಗಿದೆ. ನಾಟಕ ಬೇಡ ಎಂದು ಅವರ ಅಭಿಮಾನಿಗಳೇ ಹೇಳುವಂತಾಗಿದೆ ಕಾರ್ಯಕರ್ತರನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾನಂದ, ಸಂಜೀವ ಮಠಂದೂರುರವರನ್ನು ಜನರು ಅಪರಾಧಿ ಸ್ಥಾನದಲ್ಲಿ ನೋಡಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮೇಲಿನ ವಿಷಯಗಳ ಬಗ್ಗೆ ಟೀಕೆಗಳು, ಸಂದೇಶಗಳು, ವಾಯ್ಸ್ ರೆಕಾರ್ಡ್‌ಗಳು, ವೀಡಿಯೋಗಳು ಹರಿದಾಡುತ್ತಿವೆ.
ಭಟ್ಕಳದ ಕಾಂಗ್ರೆಸ್ ಮೆರವಣಿಗೆಯಲ್ಲಿ ಎಲ್ಲಾ ಧರ್ಮಗಳ ಭಾವುಟವಿತ್ತು, ಪಾಕಿಸ್ತಾನದ ಭಾವುಟವಿರಲಿಲ್ಲ:
ಡಿವೈಎಸ್‌ಪಿ ಕಛೇರಿಯಲ್ಲಿದ್ದ ಬಂಧಿತರನ್ನು ಬಿಡಿಸಿಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ ಕಾರಣಕ್ಕಾಗಿ ಪುತ್ತಿಲರು ಹೀರೋ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಈ ಪ್ರಕರಣದಿಂದ ಯಾರ ಶನಿ ಬಿಡುಗಡೆಯಾಗಿ ಯಾರಿಗೆ ಹಿಡಿದಿದೆ ಎಂಬ ಪ್ರಶ್ನೆಗೆ ಜನರೇ ಉತ್ತರವನ್ನು ಕಂಡುಕೊಳ್ಳುತ್ತಿದ್ದಾರೆ. ತಪ್ಪನ್ನು ತಪ್ಪು ಎಂದು ಹೇಳುವ ಮಟ್ಟಿಗೆ ಜನರು ಜಾಗೃತರಾಗುತ್ತಿದ್ದಾರೆ. ಪ್ರಾಮಾಣಿಕ ರಾಜಕಾರಣವನ್ನು ಜನರು ಒಪ್ಪುತ್ತಾರೆ. ರಾಜಕಾರಣಿಗಳು ಪ್ರಾಮಾಣಿಕರಾಗಿರುವುದು ಮಾತ್ರವಲ್ಲ ವಿಶ್ವಾಸಾರ್ಹರಾಗಿರಬೇಕು. ನಮ್ಮ ನಾಯಕರೇ ದಾರಿ ತಪ್ಪಿಸುವ ಹೇಳಿಕೆ ನೀಡಿದರೆ ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುವುದನ್ನು ಅವರು ಮತ್ತು ಅವರ ಹಿಂಬಾಲಕರು ಅರ್ಥ ಮಾಡಿಕೊಳ್ಳಬೇಕು. ಪುತ್ತೂರಿಗೆ ಆಗಮಿಸಿದ ಬಸನ ಗೌಡ ಪಾಟೀಲ್ ಯತ್ನಾಳ್‌ರವರು ಇಲ್ಲಿಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪ್ರತಿಷ್ಟೆಯಾಗಿ ವಿಷಯಗಳನ್ನು ತೆಗೆದುಕೊಳ್ಳದೆ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿಯುವ ಎಂದು ಹೇಳಿದ್ದಾರೆ. ಮಾತ್ರವಲ್ಲ ಪರಿಹರಿಸಲು ಪ್ರಯತ್ನಿಸುವುದಾಗಿಯೂ ತಿಳಿಸಿದ್ದಾರೆ. ಆದರೆ ಆ ನಡುವಿನಲ್ಲಿ ಭಟ್ಕಳದಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ್ದಾರೆ ಎಂದು ಹೇಳಿ ಗೊಂದಲವನ್ನು ಉಂಟು ಮಾಡಿದ್ದಾರೆ. ಆ ಬಗ್ಗೆ ಪರಿಶೀಲನೆ ಮಾಡಿದಾಗ ಭಟ್ಕಳದ ಕಾಂಗ್ರೆಸ್ ಅಭ್ಯರ್ಥಿಯ ವಿಜಯದ ಮೆರವಣಿಗೆಯಲ್ಲಿ ಭಾಗವಹಿಸಿದ ವಾಹನದಲ್ಲಿ ಮುಸ್ಲಿಂ ಧರ್ಮದ ಭಾವುಟವಿತ್ತು. ಅದರೊಂದಿಗೆ ದಲಿತರ ನೀಲಿ ಧ್ವಜ, ಹಿಂದೂ ಧರ್ಮದ ಕೇಸರಿ ಧ್ವಜ ಮತ್ತು ಕಾಂಗ್ರೆಸ್‌ನ ಧ್ವಜವೂ ಇತ್ತು. ಎಲ್ಲಾ ಧರ್ಮಿಯರು ಸೇರಿ ತಾವು ಒಂದೇ ಎಂದು ತೋರಿಸುವ ಉದ್ದೇಶದಿಂದ ಆ ಭಾವುಟಗಳನ್ನು ಹಾಕಿ ಮೆರವಣಿಗೆ ಮಾಡಿದ್ದರು. ಅದರಲ್ಲಿಯ ಮುಸ್ಲಿಂ ಧರ್ಮದ ಭಾವುಟವನ್ನು ಪಾಕಿಸ್ಥಾನದ ಧ್ವಜ ಎಂದು ಹೇಳಿದವರಿಗೆ ಏನೆಂದು ಹೇಳಬೇಕು?. ಮೇ20ರಂದು ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಕಾಂಗ್ರೆಸ್ ವಿಜಯೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಕಾಂಗ್ರೆಸ್ ಭಾವುಟದೊಂದಿಗೆ ಓಂ ಚಿಹ್ನೆ ಇರುವ ಕೇಸರಿ ಭಾವುಟವೂ ಹಾರಾಡುತ್ತಿತ್ತು. ಅದನ್ನು ಉತ್ತಮ ಬೆಳವಣಿಗೆ ಎಂದು ಜನರು ಪರಿಗಣಿಸಬೇಕು ಎಂಬ ಕಾರಣಕ್ಕೆ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಪುತ್ತೂರಿಗೆ ಶಾಸಕರಿಲ್ಲ. ನಾನು ನಿಮ್ಮ ಶಾಸಕನಂತೆ-ಹರೀಶ್ ಪೂಂಜ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿದ್ದವರನ್ನು ನೋಡಲು ಹೋದದ್ದು ಸಂತೋಷದ ವಿಷಯ. ಆದರೆ ಅಲ್ಲಿ ಮಾತಿನ ಭರದಲ್ಲಿ ಪುತ್ತೂರಿಗೆ ಶಾಸಕರು ಇಲ್ಲ, ನಾನು ನಿಮ್ಮ ಶಾಸಕರಂತೆ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿರುವುದು ಬಹಳಷ್ಟು ಚರ್ಚೆಗೆ, ಸಂದೇಶಗಳಿಗೆ ಕಾರಣವಾಗಿದೆ. ಪುತ್ತೂರಿನ ಶಾಸಕರು ಅಂದರೆ ಎಲ್ಲರಿಗೂ ಶಾಸಕರಲ್ಲವೇ?. ಇಲ್ಲಿ ಬಿಜೆಪಿ ಪಕ್ಷ ಸೋತಿರುವುದರಿಂದ ಪೂಂಜರನ್ನು ಇಲ್ಲಿಗೆ ಶಾಸಕರನ್ನಾಗಿ ಅದು ಪರಿಗಣಿಸಿದೆಯೇ?. ಅವರಿಗೆ ಇಲ್ಲಿಯ ನಾಯಕತ್ವ ನೀಡಲಾಗಿದೆಯೇ?. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಶಾಸಕ ಇಲ್ಲದಿರುವುದರಿಂದ ಇಲ್ಲಿಯ ಶಾಸಕರು ಅಲ್ಲಿ ಅದೇ ರೀತಿ ಹೇಳಬಹುದೇ? ಎಂಬ ಬಗ್ಗೆ ಪ್ರಶ್ನೆಗಳು, ಸಂದೇಶಗಳು ಹರಿದಾಡುತ್ತಿವೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದಿಂದ ಯಾರೇ ಗೆದ್ದರೂ, ಪಕ್ಷೇತರನಾಗಿ ಗೆದ್ದರೂ ಆತ ಆಲ್ಲಿಯ ಎಲ್ಲಾ ಪ್ರಜೆಗಳ ಶಾಸಕನಾಗಿ ಇರುತ್ತಾನೆ ಎಂಬುವುದನ್ನು ಪ್ರತಿಪಾದಿಸಲಿಕ್ಕಾಗಿ ಅದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಸಿದ್ದರಾಮಯ್ಯರಿಗೆ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜನರು ಒತ್ತಡ ಹೇರಬೇಕು:
ಭ್ರಷ್ಟಾಚಾರದ ವಿಷಯವೇ ಈ ಸಲದ ಚುನಾವಣೆಯ ಮುಖ್ಯ ಅಜೆಂಡಾವಾಗಿತ್ತು ಎಂಬುವುದನ್ನು ಹೇಳಲು ಬಯಸುತ್ತೇನೆ. ಪ್ರಧಾನಿ ಮೋದೀಜಿಯವರು ಹಿಂದೆ ಸಿದ್ದರಾಮಯ್ಯರ ಕಾಂಗ್ರೆಸ್ ಸರಕಾರವಿದ್ದಾಗ ಅದನ್ನು 10% ಕಮಿಷನ್ ಸರಕಾರ ಎಂದು ಜರೆದಿದ್ದರು. ಬಿಜೆಪಿ ಸರಕಾರ ಬಂದ ಮೇಲೆ ಅದು 40% ಕಮಿಷನ್ ಸರಕಾರ ಎಂದು ಆಪಾದನೆಗೆ ಒಳಗಾಗಿತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿ ಮೋದೀಜಿಯವರಿಗೆ ಆ ಕುರಿತು ಪತ್ರ ಬರೆದಿದ್ದರು. ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್, ತನಗೆ ಈಶ್ವರಪ್ಪರಿಂದ ಅನ್ಯಾಯವಾಗಿದೆ, ಕಮಿಷನ್ ನೀಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಗುತ್ತಿಗೆದಾರ ನಾಗೇಶ್ ಎಂಬವರು ಕಮಿಷನ್ ವ್ಯವಹಾರದ ತೊಂದರೆ ಕುರಿತು ಪ್ರಧಾನಿ ಮೋದೀಜಿಯವರಿಗೆ ಬರೆದ ಪತ್ರ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದು ಏನೇ ಇರಲಿ ಲಂಚ, ಭ್ರಷ್ಟಾಚಾರ ಕಡಿಮೆಯಾಗಲೇ ಬೇಕು. ರಾಹುಲ್ ಗಾಂಧಿಯವರು ಕಾಂಗ್ರೆಸ್ ಸರಕಾರದ ಪದಗ್ರಹಣದ ಸಂದರ್ಭದಲ್ಲಿ ಲಂಚ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಅದನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಸಮರ್ಥಿಸಿದ್ದಾರೆ. ಅದನ್ನು ಅವರು ಮರೆಯದಂತೆ ನೋಡಿಕೊಂಡು ಕಾರ್ಯರೂಪಕ್ಕೆ ತರುವಂತೆ ಮಾಡಬೇಕಾದದ್ದು ನಮ್ಮ ಜನರ ಕರ್ತವ್ಯ ಎಂಬುವುದನ್ನು ನೆನಪಿಸಲು ಬಯಸುತ್ತೇನೆ.
ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಸ್ಪರ್ಧೆಗೆ ನಿಂತ ಎಲ್ಲ ಆಭ್ಯರ್ಥಿಗಳು ಲಂಚ, ಭ್ರಷ್ಟಾಚಾರ ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಲಂಚವಾಗಿ ಅಧಿಕಾರಿಗಳು ಹಣ ಪಡೆದಿದ್ದರೆ ಅದನ್ನು ಜನರಿಗೆ ಹಿಂತಿರುಗಿಸಿ ಕೊಡುವುದಾಗಿ ಘೋಷಿಸಿಕೊಂಡಿದ್ದಾರೆ. ಗೆದ್ದ ಮತ್ತು ಸೋತ ಎಲ್ಲಾ ಪಕ್ಷದವರು ಅದನ್ನು ಕಾರ್ಯರೂಪಕ್ಕೆ ತರಲಿ. ಆ ಮೂಲಕ ಸುಳ್ಯ, ಪುತ್ತೂರು, ಬೆಳ್ತಂಗಡಿ ನಂತರ ದ.ಕ ಜಿಲ್ಲೆ ಲಂಚ, ಭ್ರಷ್ಟಾಚಾರ ಮುಕ್ತವಾಗಲಿ ಎಂದು ಆಶಿಸುತ್ತೇನೆ.