ಉಪ್ಪಿನಂಗಡಿ: ಮನಸ್ಸು ಅನಾರೋಗ್ಯಕ್ಕೀಡಾದರೂ ಸಂಭ್ರಮಿಸುವ ಮನಸ್ಸು ಆರೋಗ್ಯಪೂರ್ಣವಾಗಿರುತ್ತದೆ ಎನ್ನುವುದಕ್ಕೆ ಈ ಒಂದು ಛಾಯಾಚಿತ್ರವೇ ಸಾಕ್ಷಿಯಾಗಿದೆ.
ಆಕೆ ಲಲಿತಾ ಹೆಸರಿನ ಮಹಿಳೆ. ಉಪ್ಪಿನಂಗಡಿಯ ಪೆರಿಯಡ್ಕದ ನಿವಾಸಿ. ಮಾನಸಿಕ ಅಸ್ವಸ್ಥತೆ ಕಾಡಿದ ಕಾರಣ ಆಕೆ ಎಲ್ಲೆಡೆ ಸುತ್ತಾಡುತ್ತಿರುವುದು ಸಾಮಾನ್ಯವೆನಿಸಿತು. ಬಂಧುಗಳು ಬಹಳಷ್ಟು ಪ್ರಯತ್ನಿಸಿದ್ದರೂ ಚಿಕಿತ್ಸೆಗೆ ಒಳಗಾಗುವುದನ್ನು ಆಕೆ ಒಪ್ಪುತ್ತಿರಲಿಲ್ಲ. ಹಾಗಾಗಿ ಈಕೆ ನಾಗರಿಕ ಸಮಾಜದ ಮುಂದೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದಾಳೆ.
ಈಕೆ ಬಹುತೇಕ ಸಮಯ ಉಪ್ಪಿನಂಗಡಿಯ ಪೊಲೀಸ್ ಠಾಣೆ ಮತ್ತು ಪಂಚಾಯತ್ ಕಚೇರಿಯ ಬಳಿಯಲ್ಲಿಯೇ ಕಾಣ ಸಿಗುತ್ತಾಳೆ. ಕಳೆದ ಶನಿವಾರ ರಾತ್ರಿ 11.00 ಗಂಟೆ ಸುಮಾರು ಈಕೆ ಉಪ್ಪಿನಂಗಡಿ ಪಂಚಾಯತ್ ಕಚೇರಿಯ ಹೊರ ಆವರಣದ ಗೋಡೆಯಲ್ಲಿ ಸಾಲು ಸಾಲಾಗಿ ಮೇಣದ ಬತ್ತಿಯನ್ನು ಉರಿಸಿ ಸಂಭ್ರಮಿಸುತ್ತಿರುವುದು ಕಂಡು ಬಂತು. ವಿಚಾರಿಸಿದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕಾಗಿ ಸಾಲು ಸಾಲು ದೀಪಗಳನ್ನು ಉರಿಸಿ ಸಂಭ್ರಮಿಸುತ್ತಿದ್ದೇನೆ ಎಂದು ಉತ್ತರಿಸುತ್ತಾಳೆ. ತನ್ನನ್ನು ಮಾನಸಿಕ ಅಸ್ವಸ್ಥತೆ ಕಾಡುತ್ತಿದ್ದರು ದೂರದ ಬೆಂಗಳೂರಿನಲ್ಲಿ ನಡೆದ ಪ್ರತಿಜ್ಞಾ ವಿಧಿ ಸಮಾರಂಭದ ಬಗ್ಗೆ ಮಾಹಿತಿ ಪಡೆದು ಅದಕ್ಕಾಗಿ ಮೇಣದ ಬತ್ತಿಗಳನ್ನು ಖರೀದಿಸಿ ಉಪ್ಪಿನಂಗಡಿಯ ಆಡಳಿತ ಕೇಂದ್ರ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ದೀಪ ಪ್ರಜ್ವಲಿಸುವ ಈಕೆಯ ನಡೆ ಆಶ್ಚರ್ಯ ಮೂಡಿಸಿದೆ.
ಒಂದೆಡೆ ಪಂಚಾಯತ್ ಕಚೇರಿ ಎಂಬ ಆಡಳಿತ ಕೇಂದ್ರ ಇನ್ನೊಂದೆಡೆ ಕಾನೂನು ಸುವ್ಯವಸ್ಥೆಯ ಪೊಲೀಸ್ ಇಲಾಖಾ ಕಚೇರಿಯ ಮುಂಭಾಗದಲ್ಲೇ ದಿನ ನಿತ್ಯ ಠಿಕಾಣಿ ಹೂಡಿದರೂ ತನ್ನ ಅಸ್ವಸ್ಥತೆಯನ್ನು ಹೋಗಲಾಡಿಸಲಾಗದ ಈ ವ್ಯವಸ್ಥೆಯ ಕತ್ತಲು ಕಳೆಯಬಹುದೆಂಬ ಆಶಾಭಾವನೆಯಿಂದ ಈ ರೀತಿ ಮೇಣದ ಬತ್ತಿಯನ್ನು ಬೆಳಗಿಸಿರಬಹುದೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.
ಕಣ್ಣ ಮುಂದೆ ಒರ್ವ ಹೆಣ್ಣು ಮಗಳು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವುದನ್ನು ಅಸಹಾಯಕತೆಯಿಂದ ನೋಡುವ ಸ್ಥಿತಿ ಸಮಾಜಕ್ಕೆ ಎದುರಾಗಬಾರದಿತ್ತು. ಈಕೆಗೆ ಸೂಕ್ತ ಚಿಕಿತ್ಸೆ ಒದಗಿಸಿ ಆಕೆಯನ್ನು ಸಮಾಜಕ್ಕೆ ಸಂಪತ್ತಾಗಿ ರೂಪಿಸುವಲ್ಲಿ ರಾಜ್ಯದ ಹೊಸ ಆಡಳಿತ ಆಕೆಗೆ ಬೆಳಕಾಗಲಿ. ಆಕೆ ಬೆಳಗಿಸಿದ ಜ್ಯೋತಿ ಆಕೆಯ ಬಾಳಿಗೂ ಬೆಳಕಾದೀತೆ ಎನ್ನುವುದು ಕಾದು ನೋಡಬೇಕಾದ ಅಂಶ.