ಬೆಟ್ಟಂಪಾಡಿ: ಸಾರ್ವಜನಿಕರು ನೀರಿನ ಬಿಲ್ ಕಟ್ಟದಿದ್ದಲ್ಲಿ ಪಂಚಾಯತ್‌ನ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುವುದರಿಂದ ಮತ್ತು ಪಂಚಾಯತ್‌ಗೆ ಹೆಚ್ಚಿನ ಹೊರೆ ಬೀಳುವುದನ್ನು ತಪ್ಪಿಸಲು ನೀರಿನ ಬಿಲ್ ಸಂಗ್ರಹಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಈ ಬಗ್ಗೆ ಪಂಚಾಯತ್ ಸದಸ್ಯರು ಯಾವುದೇ ಹಸ್ತಕ್ಷೇಪ ಮಾಡದಿರುವಂತೆ ಬೆಟ್ಟಂಪಾಡಿ ಪಂಚಾಯತ್ ಸದಸ್ಯರು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ಯವರ ಅಧ್ಯಕ್ಷತೆಯಲ್ಲಿ ಮೇ 23 ರಂದು ಬೆಟ್ಟಂಪಾಡಿ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜೆಜೆಎಂ ಯೋಜನೆಗೆ ಸಂಬಂಧಿಸಿದಂತೆ ಸಭೆಯ ಆರಂಭದಲ್ಲಿ ಜೆಜೆಎಂ ತಾಂತ್ರಿಕ ಅಭಿಯಂತರರು ಮಾಹಿತಿ ನೀಡಿದರು. ಬಳಿಕ ವಿಷಯ ಪ್ರಸ್ತಾಪಿಸಿದ ಪಂಚಾಯತ್ ಪಿಡಿಒ ರವರು ’ನೀರಿನ ಬಿಲ್ ಪೆಂಡಿಂಗ್ ಇದೆ. ವಿದ್ಯುತ್ ಬಿಲ್, ಪಂಪ್ ದುರಸ್ತಿ ಬಿಲ್‌ಗಳು ಹೆಚ್ಚಾಗಿವೆ. ಜೆಜೆಎಂ ಗೆ ಕಟ್ಟಲು ಪಂಚಾಯತ್‌ನಲ್ಲಿ ಹಣ ಇಲ್ಲ ಎಂದು ಹೇಳಿದರು. ಸಾರ್ವಜನಿಕರಿಂದ ಬಿಲ್ ಬಾಕಿ ಇರುವುದನ್ನು ಸಂಗ್ರಹಿಸಿದರೆ ಇದೆಲ್ಲವನ್ನೂ ಭರಿಸಬಹುದು. ಬಾಕಿ ಇರುವ ಕಡೆ ಸಭೆ ಕರೆಯಿರಿ ನಾನು ಬರುತ್ತೇನೆ ಎಂದು ಹೇಳಿದರು.
ಬಿಲ್ ಪಾವತಿ ಬಾಕಿ ಇರುವ ಮನೆಗೆ ಹೋಗಿ ಮಾತಾಡಿಸುವ ಕಾರ್ಯ ಆಗಬೇಕು ಎಂದು ಸದಸ್ಯ ಗಂಗಾಧರ್ ಅಭಿಪ್ರಾಯಿಸಿದರು. ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡಬೇಕು. ಈ ವಿಷಯದಲ್ಲಿ ಪಂಚಾಯತ್ ಸದಸ್ಯರು ಮಾತಾಡಬಾರದು. ಅಧಿಕಾರಿಗಳು ಅವರ ಪ್ರೊಸೀಜರ್ ಮಾಡಲು ಅವಕಾಶ ನೀಡಬೇಕೆಂದು ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಜೆಜೆಎಂ ಡಿಪೊಸಿಟ್ ಗೊಂದಲ: ಜೆಜೆಎಂ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಹೊಸ ಕನೆಕ್ಷನ್ ಪಡೆಯುವವರು ರೂ. 1000 ಠೇವಣಿ ಇಡಬೇಕಾಗುತ್ತದೆ. ಹಿಂದಿನ ಮಾಮೂಲಿ ಪಂಚಾಯತ್ ನೀರು ಬಳಕೆದಾರರು ಈಗಾಗಲೇ ಪಂಚಾಯತ್ ಗೆ ಠೇವಣಿ ಇಟ್ಟು ನೀರು ಬಳಸುತ್ತಿದ್ದಾರೆ. ಮುಂದೆ ಅದನ್ನು ಜೆಜೆಎಂಗೆ ಪರಿವರ್ತಿಸುವಾಗ ಅವರು ಠೇವಣಿ ಇಡಬೇಕಾಗುತ್ತದಾ? ಈ ಬಗ್ಗೆ ಗೊಂದಲವಿದೆ. ಕಟ್ಟಬೇಕಾದಲ್ಲಿ ಬಳಕೆದಾರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು ಎಂದು ಸದಸ್ಯ ಮಹೇಶ್ ಕೆ.ರವರು ಪ್ರಸ್ತಾಪಿಸಿದರು. ಈ ಬಗ್ಗೆ ಹಿಂದಿನ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಆದರೆ ಈ ಗೊಂದಲ ಇನ್ನೂ ನಿವಾರಣೆಯಾಗಿಲ್ಲ’ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳ ಬಯೊಮೆಟ್ರಿಕ್ ವ್ಯವಸ್ಥೆ ಆರಂಭ: ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದ ಸದಸ್ಯರು ಇನ್ನು ಮುಂದೆ ಪಂಚತಂತ್ರ 2.0 ತಂತ್ರಾಂಶದ ಮೂಲಕ ಬಯೋಮೆಟ್ರಿಕ್ ನೀಡಬೇಕಾಗುತ್ತದೆ. ಉಪಾಧ್ಯಕ್ಷ ವಿನೋದ್ ರೈ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಚಂದ್ರಶೇಖರ ರೈ ಬಾಲ್ಯೊಟ್ಟು, ನವೀನ್ ರೈ, ಮೊಯಿದುಕುಂಞಿ, ಉಮಾವತಿ, ವಿದ್ಯಾಶ್ರೀ, ಪಾರ್ವತಿ ಗೌಡ, ಬೇಬಿ ಜಯರಾಮ, ಗೋಪಾಲ, ಮಹಾಲಿಂಗ ನಾಯ್ಕ್, ಲಲಿತ, ರಮ್ಯ, ಸುಮಲತಾ ವಿವಿಧ ವಿಷಯಗಳಲ್ಲಿ ಚರ್ಚಿಸಿದರು.
ಜೆಜೆಎಂ ಯೋಜನೆಯ ಬಗ್ಗೆ ಪುತ್ತೂರು ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಅಭಿಯಂತರ ಅಜಿತ್ ರವರು ಮಾಹಿತಿ ನೀಡಿದರು.
ಸರ್ಕಾರಿ ಸುತ್ತೋಲೆ ಮತ್ತು ಸಾರ್ವಜನಿಕ ಅರ್ಜಿಗಳನ್ನು ಪಿಡಿಒ ಸೌಮ್ಯ ಪ್ರಸ್ತಾಪಿಸಿದರು. ಆಯವ್ಯಯ ಲೆಕ್ಕಾಚಾರವನ್ನು ಕಾರ್ಯದರ್ಶಿ ಬಾಬು ನಾಯ್ಕ್ ಮಂಡಿಸಿದರು. ಸಿಬಂದಿಗಳಾದ ಸಂದೀಪ್, ಕವಿತಾ, ಚಂದ್ರಾವತಿ ಸಹಕರಿಸಿದರು.
ಬಿಲ್ ಕಟ್ಟದಿದ್ದಲ್ಲಿ ಏನಾಗುತ್ತದೆ ?
ಸಾರ್ವಜನಿಕರು ಪಂಚಾಯತ್ ಗೆ ನೀರಿನ ಬಿಲ್ ಕಟ್ಟದಿದ್ದಲ್ಲಿ 15 ನೇ ಹಣಕಾಸಿನ ಯೋಜನೆಯಲ್ಲಿ ಬಂದ ಹಣವನ್ನು ಉಳಿದ ಕಾಮಗಾರಿಗಳಿಗಿಂತ ವಿದ್ಯುತ್ ಬಿಲ್, ಪಂಪ್ ದುರಸ್ತಿ ಬಿಲ್ ಪಾವತಿಸಲು ಬಳಸಬೇಕಾಗಬಹುದು. ಇದರಿಂದ ಪಂಚಾಯತ್ ನ ಇತರ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಲಿವೆ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.