ಸೇವಾ ಬದ್ಧತೆ ಮರೆತ ಸಿಬ್ಬಂದಿ: ದೂರು

0

ಉಪ್ಪಿನಂಗಡಿ: ಆಧಾರ್ ಸೇವೆಗೆ ನಿಯುಕ್ತಿಗೊಂಡ ಅಂಚೆ ಇಲಾಖೆಯ ಸಿಬ್ಬಂದಿಯೋರ್ವರು ಸೇವಾ ಬದ್ದತೆಗಿಂತ ಸತಾಯಿಸುವ ಬದ್ಧತೆ ತೋರಿ ಎಳೆ ವಯಸ್ಸಿನ ಮಕ್ಕಳನ್ನು ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಕಾಯುವಂತೆ ಮಾಡಿರುವುದಾಗಿ ಆರೋಪಿಸಿ ಇಲಾಖಾ ವರಿಷ್ಠರಿಗೆ ದೂರು ನೀಡಲಾದ ಬಗ್ಗೆ ವರದಿಯಾಗಿದೆ.
ಆಧಾರ್ ಸೇವಾ ವಿಭಾಗದಲ್ಲಿ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದ್ದ ಉಪ್ಪಿನಂಗಡಿ ಅಂಚೆ ಕಚೇರಿಯ ಸಿಬ್ಬಂದಿ ವಸಂತ ಎಂಬವರು ಬೆಂಗಳೂರಿಗೆ ವರ್ಗಾವಣೆಗೊಂಡ ಬಳಿಕ ತೆರವಾದ ಸ್ಥಾನಕ್ಕೆ ಆಗಮಿಸಿದ ವ್ಯಕ್ತಿ ವಿರುದ್ಧ ಆರೋಪ ವ್ಯಕ್ತವಾಗಿದೆ. ಈ ಹಿಂದೆ ಮಧ್ಯಾಹ್ನದ ಬಳಿಕ ಆಧಾರ್ ಸೇವೆ ಒದಗಿಸಲಾಗುತ್ತಿದ್ದ ಈ ಕಚೇರಿಯಲ್ಲಿ ಪ್ರಸಕ್ತ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪರಿಗಣಿಸಿ ಗುರುವಾರದಿಂದ ದಿನವಿಡೀ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆಯಿಂದಲೇ ಆಧಾರ್ ಟೋಕನ್ ಗಾಗಿ ಜನರು ಸಾಲುಗಟ್ಟಿ ನಿಂತಿದ್ದರೆ , ಈತ ಮೊದಲು 20 ಟೋಕನ್ ಕೊಟ್ಟು ಅದರ ಸೇವೆ ಮುಗಿದ ಬಳಿಕವೇ ಉಳಿದವರಿಗೆ ಟೋಕನ್ ಕೊಡುವುದೆಂದು ನಿಯಮ ಜಾರಿ ಮಾಡಿದ್ದರಿಂದ ಟೋಕನ್‌ಗಾಗಿ ಕಾಯುತ್ತಿದ್ದ ಮಂದಿ ಮೊದಲ ಅವಧಿಯ 20 ಟೋಕನ್ ಮುಗಿಯುವುದನ್ನು ನೋಡುತ್ತಾ ಹತಾಶರಾಗಿ ಹಿಂದಿರುಗುವ ಸ್ಥಿತಿ ಉಂಟಾಗಿತ್ತು.

ಈ ಮಧ್ಯೆ 20 ಹಾಗೂ 21 ನೇ ಕ್ರಮಾಂಕದ ಟೋಕನ್ ಪಡೆದ ಮಕ್ಕಳಿಬ್ಬರು ಕರೆದಾಗ ಬರಲಿಲ್ಲ ಎಂಬ ಕಾರಣಕ್ಕೆ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಕಚೇರಿಯ ಬಾಗಿಲಲ್ಲಿ ಕಾಯುವಂತೆ ಮಾಡಿದ ಸಿಬ್ಬಂದಿ ಸಾಯಂಕಾಲ 4 ಗಂಟೆಯ ವೇಳೆ ಆಧಾರ್ ಅಪ್ಡೇಟ್ ಇವತ್ತು ಆಗುವುದಿಲ್ಲ. ನಾಳೆ ಬನ್ನಿ ಎಂದು ತಾಕೀತು ಮಾಡಿದ್ದಾಗಿ ಆಪಾದಿಸಲಾಗಿದೆ. ಸಿಬ್ಬಂದಿಯ ವರ್ತನೆಯಿಂದ ಆಕ್ರೋಶಗೊಂಡ ಗ್ರಾಹಕರು ಪ್ರತಿಭಟಿಸಿದರು. ಸೇವೆ ಪಡೆಯದೇ ಕಚೇರಿಯಿಂದ ಹಿಂದಿರುಗುವುದಿಲ್ಲ ಎಂದು ಮಕ್ಕಳು ಪ್ರತಿರೋಧ ತೋರಿದಾಗ ಮಧ್ಯ ಪ್ರವೇಶಿಸಿದ ಪೋಸ್ಟ್ ಮಾಸ್ಟರ್ ಮಕ್ಕಳಿಗೆ ಸೇವೆ ದೊರಕಿಸಲು ಆದೇಶಿಸಿದ್ದರು. ಇದರಿಂದಾಗಿ ಸೇವೆ ಒದಗಿಸುವ ಅನಿವಾರ್ಯತೆಗೆ ಸಿಲುಕಿದ ಸಿಬ್ಬಂದಿ ಆಧಾರ್ ಅಪ್ಡೇಟ್ ವೇಳೆ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ಮತ್ತೆ ಸಮಸ್ಯೆಯನ್ನು ತಂದೊಡ್ಡಿರುವುದಾಗಿ ಆರೋಪಿಸಲಾಗಿದೆ.
ಸಿಬ್ಬಂದಿಯ ಈ ರೀತಿಯ ವರ್ತನೆಯ ಬಗ್ಗೆ ಗ್ರಾಹಕರು ಅಂಚೆ ಇಲಾಖಾ ವರಿಷ್ಟರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here