ಪುತ್ತೂರು ಪ್ರೇಕ್ಷಕರೊಂದಿಗೆ `ಗೋಸ್ಮರಿ ಫ್ಯಾಮಿಲಿ’ ಸಿನಿಮಾ ವೀಕ್ಷಿಸಿದ ಚಿತ್ರತಂಡ

0

ಪುತ್ತೂರು: ಯೋಧ ಮೋಷನ್ ಬ್ಯಾನರ್ ಅಡಿಯಲ್ಲಿ ಸಾಯಿ ಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಲನಚಿತ್ರ ‘ಗೋಸ್ಮರಿ ಫ್ಯಾಮಿಲಿ’ ತುಳು ಸಿನಿಮಾ ಮೇ 18ರಂದು ಕರಾವಳಿಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಿನಿಪ್ರಿಯರು ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ. ಪುತ್ತೂರು ಜಿ.ಎಲ್.ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲೂ ಕೂಡ `ಗೋಸ್ಮರಿ ಫ್ಯಾಮಿಲಿ’ ತುಳು ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೇ 25ರಂದು ಸಂಜೆ 7.30ರ ಶೋಗೆ ಗೋಸ್ಮರಿ ಫ್ಯಾಮಿಲಿ ಸಿನಿಮಾ ತಂಡ ಆಗಮಿಸಿ, ಪುತ್ತೂರಿನ ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿ ಆನಂದಿಸಿದರು.


ಗೋಸ್ಮರಿ ಫ್ಯಾಮಿಲಿ ಸಿನಿಮಾದ ನಿರ್ದೇಶಕ ಸಾಯಿಕೃಷ್ಣ ಕುಡ್ಲ, ಮೇರು ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ನಾಯಕಿ ಸಮತಾ ಅಮೀನ್, ಪೋಷಕ ನಟ ತಿಮ್ಮಪ್ಪ ಕುಲಾಲ್, ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್ ಸೇರಿದಂತೆ ಚಿತ್ರತಂಡ ಆಗಮಿಸಿ ವೀಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು. ಈ ವೇಳೆ ಸುದ್ದಿಯ ಜೊತೆಗೆ ಮಾತನಾಡಿದ ಚಿತ್ರತಂಡ ಸಿನಿಮಾದ ಅನುಭವವನ್ನು ಹಂಚಿಕೊಳ್ಳುವ ಜೊತೆಗೆ ಸಿನಿಮಾದಲ್ಲಿ ಏನಿದೆ ಎನ್ನುವುದನ್ನು ವಿವರಿಸಿದರು.

ಯೋಧ ಮೋಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಶಕುಂತಲಾ ಆಂಚನ್ ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣವನ್ನು ಪಿಎಲ್ ರವಿ ನಿರ್ವಹಿಸಿದ್ದಾರೆ. ಆಕಾಶ್ ಪ್ರಜಾಪತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಜಿತ್ ನಾಯಕ್ ಮತ್ತು ಸುಮಿತ್ ಪರ್ನಾಮಿ ಚಿತ್ರದ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಮತ್ತು ಸಮತಾ ಅಮೀನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಖ್ಯಾತ ತುಳು ಹಾಸ್ಯ ತಾರೆಗಳಾದ ಡಾ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮತ್ತು ಉಮೇಶ್ ಮಿಜಾರ್, ಚಿತ್ರದಲ್ಲಿ ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಪ್ರಾರಂಭದಿಂದ ಕೊನೆಯ ತನಕ ನಮ್ಮನ್ನು ನಕ್ಕು ನಗಿಸುತ್ತಾ ಸಾಗಿಸುವುದರ ಜೊತೆಗೆ ಪ್ರಜ್ಞೆ ಇಲ್ಲದೇ ಕುಟುಂಬ ಸಾಗಿದರೆ ಆಗುವ ದುರಂತವನ್ನು ಚಿತ್ರ ತೆರೆದಿಟ್ಟಿದೆ. ಕಳ್ಳತನ, ಮೋಸ, ದ್ರೋಹ ಮೊದಲಾದವು ಕ್ಷಣಿಕ ಎಂಬುವುದನ್ನು ಚಿತ್ರ ವಿವಿಧ ಆಯಾಮದಲ್ಲಿ ತೋರಿಸಿಕೊಟ್ಟಿದೆ. ಚಿತ್ರದ ಸಂಗೀತ, ಹಾಡುಗಳು ಅದ್ಭುತ. ಹಾಡುಗಳ ಕಾಸ್ಟ್ಯೂಮ್ಸ್, ಲೊಕೇಶನ್, ಸೆಟ್ ಮನಮೋಹಕವಾಗಿದೆ.

LEAVE A REPLY

Please enter your comment!
Please enter your name here