ಪುತ್ತೂರು: ಮುಂದೆ ಮಳೆಗಾಲ ಬರುತ್ತದೆ, ಮಳೆಗಾಲ ಪ್ರಾರಂಭದ ದಿನಗಳಲ್ಲಿ ಗಾಳಿ, ಮಳೆ, ಸಿಡಿಲು ಬಹಳ ಜೋರಾಗಿಯೇ ಇರುತ್ತದೆ. ಗಾಳಿಗೆ ಕರೆಂಟ್ ಕಂಬಗಳು ಉರುಳುತ್ತದೆ ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಎಷ್ಟೇ ಕಂಬಗಳು ಗಾಳಿಗೆ ಉರುಳಿದರೂ 24 ಗಂಟೆಯೊಳಗೆ ಅದು ದುರಸ್ಥಿಯಾಗಬೇಕು ಕರೆಂಟ್ ಕೂಡಾ ಬರಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರ್ ರಾಮಚಂದ್ರ ಅವರಲ್ಲಿ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ. ಮಳೆಗಾಲದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಪ್ರಾಣಕ್ಕೆ ಕುತ್ತುಕೊಡುವ ರೀತಿಯಲ್ಲಿದ್ದಲ್ಲಿ ಅದನ್ನು ತೆರವು ಮಾಡಬೇಕು. ಶಾಲಾ, ಕಾಲೇಜು ಪರಿಸರದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದಲ್ಲಿ ಗಾಳಿ ಮಳೆಗೆ ಕಂಬಗಳು ಬೀಳುವಾಗ ವಿದ್ಯುತ್ ತಂತಿಗಳು ರಸ್ತೆಗೆ ಬೀಳದ ಹಾಗೆ ಗಾರ್ಡ್‌ಗಳನ್ನು ಅಳವಡಿಸಬೇಕು. ಕರೆಂಟ್ ಸಮಸ್ಯೆ ಮಳೆಗಾಲದಲ್ಲಿ ಉಂಟಾಗಬಾರದು ಎಂದು ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಸಮಸ್ಯೆಯಾದರೆ ಮೆಸ್ಕಾಂಗೆ ಕರೆ ಬರುವ ಹಾಗೇ ಶಾಸಕರಿಗೂ ಕರೆಗಳು ಬರುತ್ತದೆ, ಜನರು ನನ್ನಲ್ಲಿ ದೂರುಗಳನ್ನು ನೀಡುತ್ತಾರೆ. ಕ್ಷೇತ್ರದ ಜನತೆಗೆ ನಾನು ಉತ್ತರ ಕೊಡಬೇಕಾದರೆ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಇಲಾಖೆ ಇರಲಿ ಅವುಗಳಿಗೆ ಸರಕಾರದಿಂದ ಏನು ಸಹಾಯ ಬೇಕು ಅದನ್ನು ನಾನು ಮಾಡಿಸುತ್ತೇನೆ. ಉತ್ತಮ ಸೇವೆಯನ್ನು ನೀಡಲು ಎಲ್ಲರೂ ಬದ್ದರಾಗಿರಬೇಕು ಎಂದು ಸೂಚಿಸಿದರು.