ಉಪ್ಪಿನಂಗಡಿ: ಜಲಜೀವನ್ ಮಿಷನ್ ಯೋಜನೆಯ ಅರಿವು ಮೂಡಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೀದಿ ನಾಟಕ ನಡೆಯಿತು.
ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಸದಸ್ಯರಾದ ವಿದ್ಯಾಲಕ್ಷ್ಮೀ ಪ್ರಭು, ಕಾರ್ಯದರ್ಶಿ ದಿನೇಶ ಎಂ., ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಜಲಜೀವನ್ ಮಿಷನ್’ ಅಡಿ ಕೆಲವು ಗ್ರಾ.ಪಂ.ವ್ಯಾಪ್ತಿಗಳಲ್ಲಿ ಈಗಾಗಲೇ ಮನೆ ಮನೆಗೆ ನೀರು ತಲುಪಿದೆ. ವಿಪರ್ಯಾಸವೆಂದರೆ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದ್ದರೂ, ಇನ್ನೂ ಅಪೂರ್ಣ ಸ್ಥಿತಿಯಲ್ಲೇ ಇವೆ. ಕೆಲವೆಡೇ ಮಣ್ಣಿನಡಿ ಪೈಪ್ ಅಳವಡಿಸಿ ಹೋದ ಕೆಲಸಗಾರರು ತಿಂಗಳುಗಳು ಕಳೆದರೂ ಅದನ್ನು ಜೋಡಿಸಲು ಬಂದೇ ಇಲ್ಲ. ಹೆಚ್ಚಿನ ಪೈಪ್‌ಲೈನ್‌ಗಳು ಚರಂಡಿಯೊಳಗೆ ಇದ್ದು, ಮಳೆಗಾಲ ಆರಂಭವಾದರೆ ಇದು ಇನ್ನೊಂದು ಸಮಸ್ಯೆಗೆ ಎಡೆ ಮಾಡಿಕೊಡಲಿದೆ. ಇನ್ನು ಟ್ಯಾಂಕ್ ಕಾಮಗಾರಿಗಳನ್ನು ಕೂಡಾ ಅರ್ಧದಲ್ಲೇ ಬಿಟ್ಟು ಹೋದವರು ಮತ್ತೆ ಅದರತ್ತ ಸುಳಿಯಲೇ ಇಲ್ಲ. ಒಟ್ಟಿನಲ್ಲಿ ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯೇ ಗ್ರಹಣ ಹಿಡಿದ ನಾಟಕದಂತಾಗಿದೆ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ.