ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗೋಳಿತ್ತೊಟ್ಟು ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗೋಳಿತ್ತೊಟ್ಟು ವಲಯ, ಶ್ರೀ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜೆಸಿಐ ನೆಲ್ಯಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಹಾಗೂ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವುಗಳ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣೆ, ಉಚಿತ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಮತ್ತು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್‌ನ ಡಾ. ಗೌರಿ ಪೈಯವರ ನೇತೃತ್ವದಲ್ಲಿ ಉಚಿತ ಕನ್ನಡಕ ವಿತರಣೆ ಮತ್ತು ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ವತಿಯಿಂದ ಉಚಿತ ಬಿಪಿ, ಶುಗರ್ ತಪಾಸಣೆ ಶಿಬಿರ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಒಂದು ಸಲ ನಾವು ಕಣ್ಣನ್ನು ಮುಚ್ಚಿಕೊಂಡಾಗ ಲೋಕವೇ ಕತ್ತಲೆಯಾಗಿ ನಮಗೆ ಕಾಣುತ್ತದೆ. ಆ ದೃಶ್ಯವನ್ನು ನಮಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಬದುಕಿನಲ್ಲಿ ಆಧಾರ ಸ್ತಂಭವಾದ ಕಣ್ಣನ್ನು ಅತ್ಯಂತ ಜಾಗೃತೆಯಿಂದ ಕಾಪಾಡಿಕೊಂಡಾಗ ನಮ್ಮ ಜೀವನವೂ ಬೆಳಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಆಯೋಜಿಸಿರುವ ಈ ಶಿಬಿರ ಜನರಿಗೆ ವರದಾನವಾಗಿದೆ ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಗೌಡ ಪಟೇರಿ ಮಾತನಾಡಿ, ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಜನರಿಗೆ ಸದುಪಯೋಗವಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಿದ್ದೇವೆ. ಇದರೊಂದಿಗೆ ಆರೋಗ್ಯ ಅಮೃತ ಅಭಿಯಾನದ ಮೂಲಕ ಉಚಿತ ಬಿಪಿ ಶುಗರ್ ತಪಾಸಣೆಯನ್ನು ಇಟ್ಟುಕೊಂಡಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವೆನ್ಲಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಅನಿಲ್ ರಾಮಾನುಜಮ್‌ರವರು ಶಿಬಿರದಲ್ಲಿ ಸಿಗುವ ಸೌಲಭ್ಯದ ಬಗ್ಗೆ ಮತ್ತು ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಆನಂದ ಆಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ನೇತ್ರ ತಜ್ಞೆ ಡಾ. ವಿದ್ಯಾ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಜೆಸಿಐ ಅಧ್ಯಕ್ಷರೂ ಆದ ದಯಾಕರ ರೈ ಮುಂಡಾಳಗುತ್ತು, ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಶೋಭಾಲತಾ ಗೋಳಿತೊಟ್ಟು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಅಲೆಕ್ಕಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ನಾಯ್ಕ್, ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್, 47ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 250ಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸಿದ್ದರು. 7 ಜನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು. 200ಕ್ಕೂ ಮಿಕ್ಕಿ ಉಚಿತ ಕನ್ನಡಕಗಳನ್ನು ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ ಅವರು ವಿತರಿಸಿದರು. ಗಂಗಾಧರ ಶೆಟ್ಟಿ ಹೊಸಮನೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೋಳಿತ್ತೊಟ್ಟು ವಲಯದ ಸೇವಾ ಪ್ರತಿನಿಧಿ ನೇಮಿರಾಜ ಕಲಾಯಿ ವಂದಿಸಿದರು ಸಾಮಾಜಿಕ ಮುಖಂಡ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಕಾರ್ಯದರ್ಶಿ ಚಂದ್ರಾವತಿ ರೈ, ಸಿಬ್ಬಂದಿಗಳು, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರುಗಳು ಭಾಗವಹಿಸಿದ್ದರು.