ಪುತ್ತೂರು; ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೇ 29ರಂದು ಮೊದಲ ಬಾರಿಗೆ ಪುತ್ತೂರಿನ ತನ್ನ ಕಚೇರಿಯಲ್ಲಿ ಶಾಸಕರಾದ ಅಶೋಕ್ಕುಮಾರ್ ರೈಯವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಶಾಸಕರು ಅಪರಾಹ್ನ ಕಚೇರಿಗೆ ಬರುತ್ತಾರೆಂದು ತಿಳಿದು ಮಧ್ಯಾಹ್ನದ ಬಳಿಕ ಕಚೇರಿಯಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು ನೆರೆದಿದ್ದರು. ಮಂಗಳೂರಿನಲ್ಲಿ ಸ್ಪೀಕರ್ ಯು ಟಿ ಖಾದರ್ ಜೊತೆ ಜಿಲ್ಲಾಮಟ್ಟದ ಅಽಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಂಜೆ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದರು.
ಬಹುತೇಕ ಗ್ರಾಮೀಣ ಭಾಗದಿಂದ ಆಗಮಿಸಿದ ಸಾರ್ವಜನಿಕರು ಸಮಸ್ಯೆಗಳ ಅರ್ಜಿಯ ಜೊತೆಗೆ ಬಂದಿದ್ದರು. ಸಣ್ಣ ಪುಟ್ಟ ಸಮಸ್ಯೆಗಳಿಗೆ ಶಾಸಕರು ಅಧಿಕಾರಿಗಳಿಗೆ ಕಚೇರಿಯಿಂದಲೇ ಕರೆ ಮಾಡಿ ಇತ್ಯರ್ಥ ಮಾಡಿದರು. ಮನೆ ಇಲ್ಲದವರು, ಅನಾರೋಗ್ಯ ಪೀಡಿತರು, ವಿದ್ಯುತ್ ಸಂಪರ್ಕ, 94 ಸಿ, 94 ಸಿ ಸಿ, ನಿರುದ್ಯೋಗಿಗಳು, ಮನೆ ದುರಸ್ಥಿ, ಕಲಿಕೆಗೆ ನೆರವು ಸೇರಿದಂತೆ ಅನೇಕ ಮಂದಿ ತಮ್ಮ ಅಹವಾಲನ್ನು ಶಾಸಕರ ಮುಂದೆ ಹೇಳಿಕೊಂಡರು. ವೃದ್ದರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಮೊದಲ ಸಾರ್ವಜನಿಕ ಭೇಟಿಯಾದ ಕಾರಣ ನೂರಕ್ಕಿಂತಲೂ ಹೆಚ್ಚು ಜನ ಆಗಮಿಸಿದ್ದರು.
ಶಾಸಕರನ್ನು ಭೇಟಿಯಾಗಲು ಬಂದಿರುವ ಜನ ಸಾಮಾನ್ಯರಿಗೆ ಮೊದಲ ಆದ್ಯತೆ ನೀಡಲಾಗಿತ್ತು, ಗ್ರಾಮೀಣ ಭಾಗದಿಂದ ಬಂದಿರುವ ಮಂದಿಯನ್ನು ಮೊದಲ ಸಾಲಿನಲ್ಲೇ ಮನವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸರ್ವೆ ಗ್ರಾಮದ ಕಟ್ಟತ್ತಿಲ ನಿವಾಸಿ ಅನಾರೋಗ್ಯ ಪೀಡಿತ ಯಮುನಾ ಎಂಬವರಿಗೆ ಕೋಡಿಂಬಾಡಿ ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೀಲ್ ಚೆಯರ್ ನೀಡಲಾಯಿತು.